ಬಳ್ಳಾರಿಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ, ಭಾರತ ಶ್ರೀ ಯೋಜನೆಯಡಿ ನಡೆದ ಡಿಜಿಟಲೀಕರಣ ಪ್ರಕ್ರಿಯೆ ವೇಳೆ, ಮೈಸೂರು ಪುರಾತತ್ವ ಇಲಾಖೆಯು ಹುಲಿಬೇಟೆಯ ವೀರಗಲ್ಲೊಂದನ್ನು ಪತ್ತೆಹಚ್ಚಿದೆ. ಈ ಶಾಸನವು ಅನುಮಯರ ಮಗನೊಬ್ಬ ಹುಲಿಬೇಟೆಯಲ್ಲಿ ಮಡಿದ ಸ್ಮರಣಾರ್ಥ ಕೆತ್ತಲಾಗಿದ್ದು, ವೀರನ ಪರಾಕ್ರಮವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ.

ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ 14ನೇ ವಾರ್ಡಿನ ವಾಲ್ಮೀಕಿ ನಗರದ ವಡ್ಡರಕಟ್ಟೆ ಬಳಿ ಹುಲಿಬೇಟೆ ವೀರಗಲ್ಲು ಪತ್ತೆಯಾಗಿದೆ ಎಂದು ಮೈಸೂರು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ, ಶಾಸನತಜ್ಞ ಅನಿಲಕುಮಾರ್ ಆರ್.ವಿ. ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಶ್ರೀ ಯೋಜನೆಯಡಿ ತೆಕ್ಕಲಕೋಟೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸನಗಳ ಸಂರಕ್ಷಣೆಗೆ ನಡೆದ ಡಿಜಿಟಲೀಕರಣ ಪ್ರಕ್ರಿಯೆ ಭಾಗವಾಗಿ ಪಟ್ಟಣದಲ್ಲಿ ಭೇಟಿ ನೀಡಿ ವೀರಗಲ್ಲಿನ ಪಡಿಯಚ್ಚು ಪಡೆದುಕೊಂಡರು.

ಸಂಪೂರ್ಣ ಮಾಹಿತಿ ಲಭ್ಯವಿಲ್ಲ

ಶಾಸನ ತಿಳಿಸುವಂತೆ, ಅನುಮಯರ ಮಗ ಹುಲಿಬೇಟೆಯಲ್ಲಿ ಮರಣ ಹೊಂದಿದ. ಆತನ ಸ್ಮರಣಾರ್ಥ ವೀರಗಲ್ಲು ಕೆತ್ತಲಾಗಿದೆ. ಇದರಲ್ಲಿ ಅಂಗೀರಸ ಸಂವತ್ಸರ, ವೈಶಾಖ ಬ 8 ಎಂದು ಕಾಲದ ವಿವರವಿದ್ದು, ಸಂಪೂರ್ಣ ಮಾಹಿತಿ ಲಭ್ಯವಿಲ್ಲ.

ಶಾಸನ ಶಿಲ್ಪವು ಬಹಳ ಕಲಾತ್ಮಕವಾಗಿ ಕಡೆಯಲಾಗಿದೆ. ವೀರನು ತನ್ನ ಕೈಯಲ್ಲಿ ಖಡ್ಗ ಹಿಡಿದು ವೀರಾವೇಶದಿಂದ ಹುಲಿಯೊಡನೆ ಹೋರಾಡುತ್ತಿರುವ ದೃಶ್ಯ ಹಾಗೂ ಹುಲಿಯ ಕೆಳಭಾಗದಲ್ಲಿ ವೀರನ ಬೇಟೆಯ ನಾಯಿ ಕೂಡ ಆತನಷ್ಟೇ ಪರಾಕ್ರಮದಿಂದ ಹೋರಾಡುತ್ತಿರುವ ದೃಶ್ಯ ಶಿಲ್ಪಿಯ ಕಲೆಗಾರಿಕೆ ಕಂಡು ಬರುತ್ತಿದೆ ಎಂದು ಎಎಸ್ ಐ ಸಹಾಯಕ ಅಧೀಕ್ಷಕ ತಿಳಿಸಿದ್ದಾರೆ.

ಈ ಕಾರ್ಯದಲ್ಲಿ ಮೈಸೂರು ಶಾಸನ ನಿರ್ದೇಶಕರ ಕಚೇರಿಯ ಸಿಬ್ಬಂದಿ ನಾಗೇಂದ್ರ, ನಿಶಾಂತಕುಮಾರ್ ಗೌರವ್, ಇತಿಹಾಸ ಸಂಶೋಧನಾರ್ಥಿಗಳಾದ ಮನೋಹರ ಸಿ.ಎಂ, ಎಂ ಹೊನ್ನೂರ ಭಾಗವಹಿಸಿದ್ದರು.