ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪ್ರಕಟಿತ ದಾನ ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಹೊಯ್ಸಳ ನರಸಿಂಹ ಚಕ್ರವರ್ತಿಯ ಕಾಲದಲ್ಲಿ ಸ್ಥಳೀಯ ಆಡಳಿತಗಾರ ಕಾಸಿಗೌಡನು ಕೆರೆ ನಿರ್ಮಿಸಿ, ಬಡಗಿಯೊಬ್ಬನಿಗೆ ಭೂಮಿಯನ್ನು ದಾನ ನೀಡಿದ ವಿವರಗಳನ್ನು ಒಳಗೊಂಡಿದೆ. ಇದು ಜಿಲ್ಲೆಯಲ್ಲಿ ಹೊಯ್ಸಳರ ಆಳ್ವಿಕೆಯ ಕುರುಹುಗಳನ್ನು ದೃಢಪಡಿಸುತ್ತದೆ.

ವಿಜಯನಗರ: ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಚಂದ್ರಯ್ಯ ಸ್ವಾಮಿ ಅವರ ಹೊಲವೊಂದರಲ್ಲಿದ್ದ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಶಾಸನವನ್ನು ತುಮಕೂರು ಶಶಿಕುಮಾರ ನಾಯಕ ಮಾರ್ಗದರ್ಶನದಲ್ಲಿ ಗುಂಡ್ಲವದ್ದಿಗೆರೆ ಗ್ರಾಮದ ಗೌರವ ಶಿಕ್ಷಕರಾದ ಮಂಕಾಳಪ್ಪ, ಮಲ್ಲನಗೌಡ, ಗಂಗಾಧರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಡಾ.ಗೋವಿಂದ, ಪ್ರೊ.ತಿಪ್ಪೇಸ್ವಾಮಿ, ಡಾ.ಕೃಷ್ಣೇಗೌಡ, ಇಸ್ಮಾಯಿಲ್ ಸಿದ್ದಿಕ್, ಅಶೋಕ ತಲೇಖಾನ್ ಪತ್ತೆ ಹಚ್ಚಿದ್ದಾರೆ.

15 ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರದ ಶಾಸನ

ಈ ಶಾಸನವು ಗ್ರಾನೈಟ್ ಕಲ್ಲಿನಲ್ಲಿ ಬರೆಯಲಾಗಿದೆ. 15 ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರವಾಗಿದ್ದು, ಒಂದೂವರೆ ಅಡಿ ಅಗಲವಾಗಿದೆ. ಮೊದಲ ಸಾಲಿನಲ್ಲೇ ರಾಜನ ಹೆಸರನ್ನು ನಮೂದಿಸಲಾಗಿದೆ. ಹೊಯ್ಸಳರ ನರಸಿಂಹ ಚಕ್ರವರ್ತಿಯ ಕಾಲಾವಧಿಯಲ್ಲಿ ಗುಂಡ್ಲವದ್ದಿಗೆರೆಯನ್ನು ಕಾಸಿಗೌಡನು ಆಳ್ವಿಕೆ ನಡೆಸುತ್ತಿದ್ದ. ಆತ ಒಂದು ಕೆರೆ ಕಟ್ಟಿಸಿದುದಲ್ಲದೇ ದೇಗುಲಕ್ಕೆ ಜಾಗಟೆ, ಕೊಳಗ ನೀಡಿರುವ ಕುರಿತಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಆಳ್ವಿಕೆ ಇತ್ತೆಂದು ತಿಳಿದುಬರುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಎಚ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಈ ದಾನ ಶಾಸನದಲ್ಲಿ ವಿಶೇಷವಾಗಿ ಬಡಗೇರರ ವೃತ್ತಿ ಉಲ್ಲೇಖವಿದೆ. ಕಾಸಿಗೌಡನು ಸಂಣಯನ ಮಗನಾದ ಬಡಗಿ ನಾಗಭೋಜನಿಗೆ ಹೊಲವೊಂದನ್ನು ದಾನ ನೀಡಿರುವ ವಿವರವಿದೆ. ಶಾಸನದಲ್ಲಿ ಸರ್ವಮಾನ್ಯ ಹೊಲ ಎಂದಿರುವುದರಿಂದ ಯಾವುದೇ ರೀತಿಯ ತೆರಿಗೆ ಕಟ್ಟುವಂತಿರಲಿಲ್ಲ ಎಂದು ತಿಳಿಯುತ್ತದೆ.

ಜೊತೆಗೆ ಸೂರ್ಯ, ಚಂದ್ರ, ನಕ್ಷತ್ರ ಇರುವವರೆಗೂ ಶಾಸನ ಇರಲಿ ಎಂದು ಶಾಪಾಶಯವು, ಹಾಗೆ ದಾನ ನೀಡುವುದನ್ನು ತಪ್ಪಿಸಬಾರದೆಂಬ ಸಾಲುಗಳು ಶಾಸನದಲ್ಲಿ ಬರೆಸಲಾಗಿದೆ. ಇದೇ ರೀತಿ ಕಾಕುಬಾಳು ಕ್ರಾಸ್ ನ ಗುಂಡ್ಲವದ್ದಿಗೆರೆಯ ಚಂದ್ರಪ್ಪನವರ ಹೊಲವೊಂದರಲ್ಲಿ ಕುಂಬಾರ ಪೊನ್ನಿಮಯ್ಯನ ಮಗ ಯಂಕಬಿಯನ ಹೆಸರಲ್ಲಿ ಕಟ್ಟಿಸಿದ ಕೆರೆ ಎಂಬ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡವು ಈ ಹಿಂದೆ ಪತ್ತೆ ಮಾಡಲಾಗಿತ್ತು. ಆ ಶಾಸನದಲ್ಲಿ ಕುಂಬಾರರ ವೃತ್ತಿ ಪ್ರಸ್ತಾಪಿಸಲಾಗಿದೆ.

ಕೆರೆ, ದೇವಸ್ಥಾನದ ಮಾಹಿತಿ

ಈ ಶಾಸನದಲ್ಲಿ ಬಡಗೇರರ ವೃತ್ತಿಯನ್ನು ಉಲ್ಲೇಖಿಸಲಾಗಿದೆ. ಶಾಸನ ಇರುವ ಅನತಿ ದೂರದಲ್ಲಿಯೇ ಕೆರೆಯ ಕುರುಹು ಇದೆ. ಇದರಿಂದ ಆಗ ಮಳೆ ನೀರು ಪೋಲಾಗದಂತೆ ಕೆರೆಗಳನ್ನು ನಿರ್ಮಿಸಿರಬಹುದು. ಗ್ರಾಮದಲ್ಲಿ ಅತ್ಯಂತ ಸುಂದರವಾದ ಈಶ್ವರ ದೇಗುಲವೊಂದಿದೆ. ಬಹುಶಃ ಶಾಸನದಲ್ಲಿ ತಿಳಿಸಿದಂತೆ ಗಂಟೆ, ಜಾಗಟೆಯನ್ನು ಇದೇ ದೇವಾಲಯಕ್ಕೆ ದಾನ ನೀಡಿರಬೇಕು. ಇದರ ರಚನೆ ಗಮನಿಸಿದರೆ ಹೊಯ್ಸಳ ಕಾಲಾವಧಿಯ ಗುಡಿ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ತಿಳಿಸಿದ್ದಾರೆ.

ಈ ಶಾಸನವು ಹೊಲವೊಂದರಲ್ಲಿ ಬಿಸಿಲು ಗಾಳಿ ಮಳೆಯಿಂದ ರಕ್ಷಣೆ ಇಲ್ಲದೇ ಇರುವುದರಿಂದ ಅಕ್ಷರಗಳು ಸವೆದು ಹೋಗಿವೆ. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯು ಇಂತಹ ನಿರ್ಲಕ್ಷಿತ ಶಾಸನಗಳ ರಕ್ಷಣೆ ಮಾಡಬೇಕೆಂದು ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.