ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯ ಹಜಾರ ರಾಮ ದೇವಸ್ಥಾನದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ ವಿಜಯನಗರ ಕಾಲದ ಪುರಾತನ ದೇವಾಲಯದ ಕಲ್ಲಿನ ಚಾವಣಿ ಮತ್ತು ಅಪರೂಪದ ಆನೆಯ ಕಲಾಕೃತಿಗಳು ಪತ್ತೆಯಾಗಿವೆ.
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಹಜಾರ ರಾಮ ದೇವಸ್ಥಾನ ಸಮೀಪ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸುತ್ತಿರುವ ಉತ್ಖನನದ ಸಂದರ್ಭದಲ್ಲಿ ವಿಜಯನಗರ ಕಾಲದ ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆಯಾಗಿವೆ. ಹಜಾರರಾಮ ದೇವಸ್ಥಾನದ ದಕ್ಷಿಣ ದ್ವಾರದ ಗೋಡೆಯ ಭಾಗದಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಉತ್ಖನನದಲ್ಲಿ ಪುರಾತನ ದೇವಾಲಯದ ಚಾವಣಿ, ಸುಂದರವಾದ ಆನೆಯ ಕಲಾಕೃತಿ ಬೆಳಕಿಗೆ ಬಂದಿದೆ.

1565ರ ಯುದ್ಧದ ಸಮಯದಲ್ಲಿ ಹಾನಿಗೊಳಗಾಗಿದ್ದ ಅನೇಕ ಸ್ಮಾರಕಗಳ ಅವಶೇಷಗಳು ಈಗ ಒಂದೊಂದಾಗಿ ಹಂಪಿಯಲ್ಲಿ ಪತ್ತೆಯಾಗುತ್ತಿದ್ದು, ಅಂದಿನ ಕಾಲದ ಶ್ರೀಮಂತ ಕಲೆಗೆ ಇವು ಜೀವಂತ ಸಾಕ್ಷಿಯಾಗಿವೆ. ಪುರಾತನ ದೇವಾಲಯದ ಕಲ್ಲಿನ ಚಾವಣಿ ಮತ್ತು ಆನೆಯ ಕಲಾಕೃತಿ ಪತ್ತೆಯಾಗುತ್ತಿದ್ದಂತೆ ಎಎಸ್ಐ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಡೀ ದೇವಾಲಯವೇ ಮಣ್ಣಿನೊಳಗೆ ಸುಸ್ಥಿತಿಯಲ್ಲಿರುವ ಸಾಧ್ಯತೆಯಿದೆ. ಅನೇಕ ಶತಮಾನಗಳ ಹಿಂದಿನ ದೇವಾಲಯವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
4.30 ಮೀಟರ್ ಉದ್ದ ಮತ್ತು 4.25 ಮೀಟರ್ ಅಗಲ
ಈ ದೇವಾಲಯವು ಅಂದಾಜು 4.30 ಮೀಟರ್ ಉದ್ದ ಮತ್ತು 4.25 ಮೀಟರ್ ಅಗಲವಿದ್ದು, ಈ ದೇವಾಲಯವು ಇಟ್ಟಿಗೆಯಿಂದ ನಿರ್ಮಿಸಿದ ಶಿಖರ ಮತ್ತು ಗರ್ಭಗೃಹದ ಮೇಲ್ಭಾಗ ಗೋಚರಿಸುತ್ತಿದೆ. ಸುಮಾರು 10 ಅಡಿಗೂ ಹೆಚ್ಚು ಎತ್ತರದ ಗೋಡೆಗಳು ಮಣ್ಣಿನೊಳಗೆ ಸುರಕ್ಷಿತವಾಗಿರಬಹುದು. ಈ ದೇವಾಲಯವು ಜೈನ ಧರ್ಮಕ್ಕೆ ಸಂಬಂಧಿಸಿದ್ದಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ಹಂಪಿ ಇತಿಹಾಸ ಅಧ್ಯಯನಕ್ಕೆ ಇದು ಹೆಚ್ಚಿನ ಮಹತ್ವ ಪಡೆದಿದೆ. ಈ ಶಿಲ್ಪಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಲಕ್ಕುಂಡಿಗೆ ಸಂಬಂಧಿಸಿದ ವಿಶೇಷ ಸುದ್ದಿ; ಗ್ರಾಮಸ್ಥರು ತಿಳಿದುಕೊಳ್ಳಲೇಬೇಕಾದ ನ್ಯೂಸ್
ಐತಿಹಾಸಿಕ ಸ್ಮಾರಕಗಳು
ಹಂಪಿಯಲ್ಲಿ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕೈಗೊಂಡಿರುವ ಉತ್ಖನನ ಮತ್ತು ಜೀರ್ಣೋದ್ಧಾರ ಕಾರ್ಯವು ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ. ಮಣ್ಣಿನಲ್ಲಿ ಅಡಗಿರುವ ಐತಿಹಾಸಿಕ ಸ್ಮಾರಕಗಳು ಬೆಳಕಿಗೆ ಬರುತ್ತಿವೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಪುಟಗಳು ಮತ್ತೆ ತೆರೆದುಕೊಳ್ಳಲಿವೆ ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ವಿರುಪಾಕ್ಷಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್‌ಗೆ ಬೆಸ್ಟ್ ಆಯ್ಕೆ


