ನಮ್ಮ ಮುಂದಿರೋ ಗುರಿ ಸ್ಪಷ್ಟವಾಗಿದೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ, ಆಗಸ್ಟ್ 15ರಂದು ಮೈದಾನಕ್ಕಿಳಿದಾಗ ಎದುರಾಳಿಗಳು ಕೇಳುವ ಪ್ರತಿಯೊಂದು ಪ್ರಶ್ನೆಗೂ ನಮ್ಮ ಬಳಿ ಉತ್ತರ ಸಿದ್ಧವಿರಬೇಕು. ಜೊತೆಗೆ, ಗಿಲ್, ರಾಹುಲ್, ಮತ್ತು ಜೈಸ್ವಾಲ್‌ಗೆ ವಿಶೇಷ ಟಾಸ್ಕ್ ಎದುರಿಸಬೇಕು ಎಂದು ಕೋಚ್ ಗಂಭೀರ್ ಸೂಚಿಸಿದ್ದಾರೆ.

ಕೊಲಂಬೊ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆಗಸ್ಟ್ 15ರಂದು ಗಾಲೆಯಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಭ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಸವಾಲುಗಳಿಗೆ ಸಂಪೂರ್ಣ ಸಿದ್ಧರಾಗಿರಬೇಕು ಎಂದು ಗಂಭೀರ್ ಆಟಗಾರರಿಗೆ ಸೂಚಿಸಿದ್ದಾರೆ. ಶುಕ್ರವಾರದಿಂದ ಕೊಲಂಬೊದಲ್ಲಿ ಆರಂಭವಾಗಲಿರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಗಂಭೀರ್ ಈ ಮಾತುಗಳನ್ನಾಡಿದ್ದಾರೆ.

'ನಮ್ಮ ಮುಂದಿರೋ ಗುರಿ ಸ್ಪಷ್ಟವಾಗಿದೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ, ಆಗಸ್ಟ್ 15ರಂದು ಮೈದಾನಕ್ಕಿಳಿದಾಗ ಎದುರಾಳಿಗಳು ಕೇಳುವ ಪ್ರತಿಯೊಂದು ಪ್ರಶ್ನೆಗೂ ನಮ್ಮ ಬಳಿ ಉತ್ತರ ಸಿದ್ಧವಿರಬೇಕು. ನಮ್ಮ ಸಾಮರ್ಥ್ಯದ ಎಲ್ಲೆ ಮೀರಿ ಅಭ್ಯಾಸ ಮಾಡಲು ಇದೊಂದು ಉತ್ತಮ ಅವಕಾಶ' ಎಂದು ಗಂಭೀರ್ ಆಟಗಾರರಿಗೆ ತಿಳಿಸಿದ್ದಾರೆ.

ರಾಹುಲ್, ಗಿಲ್, ಜೈಸ್ವಾಲ್‌ಗೆ ಸ್ಪೆಷಲ್ ಟಾಸ್ಕ್

ಕಳೆದ ಕೆಲವು ಟೆಸ್ಟ್ ಸರಣಿಗಳಲ್ಲಿ ಭಾರತದ ಬ್ಯಾಟರ್‌ಗಳು ಸ್ಪಿನ್ ಎದುರಿಸಲು ಕಷ್ಟಪಟ್ಟಿದ್ದರು. ಹೀಗಾಗಿ, ಶ್ರೀಲಂಕಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಈ ಅಭ್ಯಾಸ ಪಂದ್ಯ ಬಹಳ ಮುಖ್ಯವಾಗಿದೆ. ನಾಯಕ ಶುಭಮನ್ ಗಿಲ್, ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಸ್ಪಿನ್ ಬೌಲಿಂಗ್ ವಿರುದ್ಧ ವಿಶೇಷ ತರಬೇತಿ ನಡೆಸುತ್ತಿದ್ದಾರೆ. ಈ ಮೂವರೂ ಬ್ಯಾಟರ್‌ಗಳು ಅಭ್ಯಾಸ ಪಂದ್ಯದಲ್ಲಿಯೇ ಸ್ಪಿನ್ ಬೌಲಿಂಗ್ ಅನ್ನು ಶಿಸ್ತಾಗಿ ಎದುರಿಸುವುದೇ ಗಂಭೀರ್ ಕೊಟ್ಟ ಸ್ಪೆಷಲ್ ಟಾಸ್ಕ್ ಆಗಿದೆ. 2017ರ ನಂತರ ಭಾರತ ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದೆ. ಸದ್ಯದ ತಂಡದಲ್ಲಿ ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರಿಗೆ ಮಾತ್ರ ಈ ಹಿಂದೆ ಲಂಕಾ ನೆಲದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಿದ ಅನುಭವವಿದೆ.

ಪೇಸರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮಾನವ್ ಸುತಾರ್ ಮತ್ತು ಸಾರಾಂಶ್ ಜೈನ್ ಅವರಂತಹ ಯುವ ಆಟಗಾರರಿಗೆ ಈ ಅಭ್ಯಾಸ ಪಂದ್ಯ ದೊಡ್ಡ ಪರೀಕ್ಷೆಯಾಗಲಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದರೂ, ಸಿಕ್ಕ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಟೀಮ್ ಇಂಡಿಯಾ ನಿರ್ಧರಿಸಿದೆ.