ಮೈಸೂರು ದಸರಾ ವೀಕ್ಷಿಸಿ ಚೆನ್ನೈಗೆ ಮರಳುತ್ತಿದ್ದ ೯ ಜನ ಟೆಕ್ಕಿಗಳು ಗೂಗಲ್ ಮ್ಯಾಪ್ ನಂಬಿ ಆಸನೂರು ಅರಣ್ಯದಲ್ಲಿ ದಾರಿ ತಪ್ಪಿದ್ದಾರೆ. ಅವರ ಕಾರು ಹಳ್ಳಕ್ಕೆ ಬಿದ್ದಿದ್ದು, ಕಾಡಾನೆಗಳ ಸದ್ದು ಕೇಳಿ ಭೀತರಾಗಿದ್ದರು. ಬಳಿಕ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಣೆ.
ರಾತ್ರಿ ಆನೆ ಸದ್ದು ಕೇಳಿ ಭೀತರಾಗಿ ಕಾರೊಳಗೆ ಜಾಗರಣೆ
*ಚೆನ್ನೈ ಪೊಲೀಸರಿಗೆ ಕರೆ ಮಾಡಿ ರಕ್ಷಣೆ
ಚಾಮರಾಜನಗರ (ಅ.18): ಮೈಸೂರು ದಸರಾ ನೋಡಿಕೊಂಡು ಚೆನ್ನೈಗೆ ಹೋಗಲು ಗೂಗಲ್ ಮ್ಯಾಪ್ ಹಾಕಿಕೊಂಡು ಎಡವಟ್ಟಿನಿಂದಾಗಿ ಕಂದಕಕ್ಕೆ ಇಳಿಸಿದ ಪ್ರಸಂಗ ಬೆಂಗಳೂರು-ದಿಂಡಿಗಲ್ ಹೆದ್ದಾರಿಯ ಚಾಮರಾಜನಗರ ಸಮೀಪದ ಆಸನೂರು ಅರಣ್ಯ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 9 ಜನ ತಮಿಳುನಾಡಿನ ಟೆಕ್ಕಿಗಳು ವೀಕೆಂಡ್ ಹಿನ್ನೆಲೆ ಶುಕ್ರವಾರ ರಾತ್ರಿ ಮೈಸೂರಿಗೆ ಬಂದು ದಸರಾ ಕಣ್ತುಂಬಿಕೊಂಡಿದ್ದಾರೆ. ಬಳಿಕ, ಚೆನ್ನೈಗೆ ತೆರಳುತ್ತಿದ್ದಾಗ ಗೂಗಲ್ ಮ್ಯಾಪಿಂದ ದಾರಿ ತಪ್ಪಿ ದಿಂಬಂ ಮುಖ್ಯರಸ್ತೆಯಿಂದ ಅರಣ್ಯ ಹಾದಿಗೆ ಹೋಗಿದ್ದಾರೆ. ಬಳಿಕ, ತಿರುವಿನಲ್ಲಿ ಕಾರು ಹಳ್ಳಕ್ಕೆ ಇಳಿದಿದೆ.
ಆನೆ ಸದ್ದು, ಟೆಕ್ಕಿಗಳಲ್ಲಿ ಭೀತಿ:
ಆಸನೂರು ತಮಿಳುನಾಡಿನ ಸತ್ಯಮಂಗಲಂ ಹುಲಿ ರಕ್ಷಿತಾರಣ್ಯಕ್ಕೆ ಒಳಪಡಲಿದೆ. ಕಾರು ಹಳ್ಳಕ್ಕಿಳಿದಾಗ ಏನಾಯ್ತು ಎನ್ನುವಷ್ಟರಲ್ಲಿ ಕಾಡಾನೆಗಳ ಶಬ್ಧ ಕೇಳಿಸಿದೆ. ತಕ್ಷಣ ಚೆನ್ನೈನ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದ ಟೆಕ್ಕಿಗಳು, ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಚೆನ್ನೈ ಅಧಿಕಾರಿಗಳ ನಿರ್ದೇಶನದಂತೆ ಆಸನೂರು ಅಗ್ನಿಶಾಮಕ ಠಾಣಾಧಿಕಾರಿ ಬಾಲಮುರುಳಿ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ, ಆನೆಗಳು ದೂರಕ್ಕೆ ತೆರಳುವ ತನಕ ಕಾದು ಬಳಿಕ ಎಲ್ಲರನ್ನೂ ರಕ್ಷಿಸಿ ಮೇಲಕ್ಕೆ ಕರೆತಂದಿದ್ದಾರೆ.
ಸುಮಾರು ಐದು ಆನೆಗಳು ಅಗ್ನಿಶಾಮಕ ವಾಹನಗಳನ್ನು ಸುತ್ತುವರಿದಿದ್ದರಿಂದ ರಕ್ಷಣೆ ಸವಾಲಾಗಿತ್ತು. ಟ್ರಾಕ್ಟರ್ಗಳ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಯಿತು. ಅರಣ್ಯದ ಕಡಿದಾದ ದಾರಿಯಲ್ಲಿ ಅವರು ಸಾಗಿ, ಬಳಿಕ ಹಳ್ಳದಲ್ಲಿ ಸಿಲುಕಿದ್ದರು ಎಂದು ಠಾಣಾಧಿಕಾರಿ ಬಾಲಮುರುಳಿ ಮಾಹಿತಿ ನೀಡಿದ್ದಾರೆ.


