ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ನಡುವೆ ಆಡಳಿತಾತ್ಮಕ ಭಿನ್ನಮತದ ವರದಿಗಳ ನಡುವೆಯೇ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಉಡುಪಿ (ಸೆ.28): ಒಂದೆಡೆ ದೇಶದ ಬೃಹತ್ ಉದ್ಯಮ ಸಮೂಹವಾದ ಟಾಟಾ ಗ್ರೂಪ್‌ನ (Tata Group) ಪ್ರಮುಖ ಅಂಗಗಳಾದ 'ಟಾಟಾ ಸನ್ಸ್' (Tata Sons) ಹಾಗೂ 'ಟಾಟಾ ಟ್ರಸ್ಟ್' (Tata Trusts) ನಡುವೆ ಆಡಳಿತಾತ್ಮಕ ಮನಸ್ತಾಪ ಮತ್ತು ಭಿನ್ನಮತದ ಹೊಗೆಯಾಡುತ್ತಿರುವ ಬೆನ್ನಲ್ಲೇ, ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್ (N. Chandrasekaran) ಅವರು ಕರ್ನಾಟಕದ ಸುಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ (Kollur Mookambika Temple) ಹಾಗೂ ಶೃಂಗೇರಿ ಗಣಪತಿ ವಾಕ್ಯಾರ್ಥ ವಿದ್ವತ್‌ ಸಭಾಕ್ಕೆ ಭೇಟಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದಿಢೀರ್ ಕರಾವಳಿ ಪ್ರವಾಸ ಕೈಗೊಂಡ ಎನ್. ಚಂದ್ರಶೇಖರನ್ ಅವರು ತಮ್ಮ ಪತ್ನಿಯೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿ, ದೇವಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದುಕೊಂಡರು. ಇದಕ್ಕೂ ಮುನ್ನ ಶೃಂಗೇರಿಗೆ ತೆರಳಿದ್ದ ಅವರು ಗಣಪತಿ ವಾಕ್ಯಾರ್ಥ ವಿದ್ವತ್‌ ಸಭಾದಲ್ಲಿ ಭಾಗವಹಿಸಿ ಮಾತನಾಡಿದ್ದರು. ಅದಕ್ಕೂ ಮುನ್ನ ಗಣಪತಿ ಉದ್ಧಣಂಡ ನಮಸ್ಕರಿಸಿ ಅವರು ಗಮನಸೆಳೆದರು.

ಶೃಂಗೇರಿಯಲ್ಲಿ ನಡೆದ ಮಹಾಗಣಪತಿ ವಾಕ್ಯಾರ್ಥ ವಿದ್ವತ್ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್ ಅಧ್ಯಕ್ಷರಾದ ಎನ್. ಚಂದ್ರಶೇಖರನ್ ಅವರು ಭಾರತೀಯ ಪರಂಪರೆ, ವೈಯಕ್ತಿಕ ವಿಕಸನ ಮತ್ತು ಸಾಂಪ್ರದಾಯಿಕ ವಿದ್ವತ್ತಿಗೆ ಸಂಬಂಧಿಸಿದಂತೆ ಹಲವು ವ್ಯಾಪಕ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.

ಪ್ರಾಚೀನ ಜ್ಞಾನ ಪರಂಪರೆಯ ಸಂರಕ್ಷಣೆ: ಭಾರತೀಯ ಸಾಂಪ್ರದಾಯಿಕ ಗ್ರಂಥಗಳು ಮತ್ತು ಶಾಸ್ತ್ರಗಳು ತರ್ಕ, ತತ್ತ್ವಶಾಸ್ತ್ರ ಮತ್ತು ಆತ್ಮಾವಲೋಕನಕ್ಕೆ ಸಂಬಂಧಿಸಿದ ಆಳವಾದ, ವ್ಯವಸ್ಥಿತ ರಚನೆಗಳನ್ನು ಒಳಗೊಂಡಿವೆ; ಇವು ಆಧುನಿಕ ಬೌದ್ಧಿಕ ಹಾಗೂ ವೈಯಕ್ತಿಕ ಬೆಳವಣಿಗೆಗೂ ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದ್ದಾರೆ.

ಸಾಂಪ್ರದಾಯಿಕ ವಿದ್ವಾಂಸರಿಗೆ ಗೌರವ: ದಶಕಗಳಿಂದ ಈ ಮೌಖಿಕ ಹಾಗೂ ಬೌದ್ಧಿಕ ಪರಂಪರೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿರುವ ಸಾಂಪ್ರದಾಯಿಕ ವೈದಿಕ ಮತ್ತು ಶಾಸ್ತ್ರೀಯ ವಿದ್ವಾಂಸರನ್ನು ಬೆಂಬಲಿಸುವ ಮತ್ತು ಗೌರವಿಸುವ ಅಗತ್ಯತೆಯ ಕುರಿತು ಅವರು ಮಾತನಾಡಿದರು.

ಸಂಸ್ಕೃತ ಕಲಿಕೆಗೆ ವೈಯಕ್ತಿಕ ಬದ್ಧತೆ: ಮೂಲಭೂತ ಶಾಸ್ತ್ರಗಳು ಮತ್ತು ದಾರ್ಶನಿಕ ಕೃತಿಗಳನ್ನು ಕೇವಲ ಅನುವಾದಗಳ ಮೂಲಕ ಓದುವ ಬದಲು, ಅವುಗಳನ್ನು ನೇರವಾಗಿ ಮೂಲ ಭಾಷೆಯಲ್ಲೇ ಓದಿ ಅರ್ಥೈಸಿಕೊಳ್ಳಲು ಸಂಸ್ಕೃತ ಭಾಷೆಯನ್ನು ಕಲಿಯುವ ತಮ್ಮ ವೈಯಕ್ತಿಕ ಸಂಕಲ್ಪವನ್ನು ಅವರು ಹಂಚಿಕೊಂಡರು.

ಪರಂಪರೆಯ ನಿರಂತರತೆ: ವಾಕ್ಯಾರ್ಥ ವಿದ್ವತ್ ಸಭೆಯಂತಹ ಕಟ್ಟುನಿಟ್ಟಿನ ಶೈಕ್ಷಣಿಕ ಗೋಷ್ಠಿಗಳ ಮೂಲಕ ಶೃಂಗೇರಿ ಶಾರದಾ ಪೀಠದಂತಹ ಸಂಸ್ಥೆಗಳು ಶತಮಾನಗಳಿಂದ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೇಗೆ ಜೀವಂತವಾಗಿರಿಸಿವೆ ಎಂಬುದನ್ನು ಅವರು ಮೆಲುಕು ಹಾಕಿದರು.

ಇನ್ನು ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ವಿಶೇಷ ದರ್ಶನ ಪಡೆದ ಎನ್. ಚಂದ್ರಶೇಖರನ್ ದಂಪತಿಗೆ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ತದನಂತರ ಚಂದ್ರಶೇಖರನ್ ಅವರಿಗೆ ಮೂಕಾಂಬಿಕಾ ದೇವಿಯ ಭಾವಚಿತ್ರ ಹಾಗೂ ಪ್ರಸಾದವನ್ನು ನೀಡಿ ಆಶೀರ್ವದಿಸಿ ಆತ್ಮೀಯವಾಗಿ ಗೌರವಿಸಲಾಯಿತು. ದೇವಸ್ಥಾನದಲ್ಲಿ ಸಾಂಪ್ರದಾಯಿಕ ಶ್ವೇತ ವಸ್ತ್ರ ಧರಿಸಿ ಸರಳವಾಗಿ ಪ್ರಾರ್ಥನೆ ಸಲ್ಲಿಸಿದ ಚಂದ್ರಶೇಖರನ್ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟಾಟಾ ಸಮೂಹದಲ್ಲಿನ ಭಿನ್ನಮತ ಮತ್ತು ಭೇಟಿಯ ಪ್ರಾಮುಖ್ಯತೆ

ಕಳೆದ ಕೆಲವು ಸಮಯದಿಂದ ಟಾಟಾ ಸಮೂಹದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ 'ಟಾಟಾ ಸನ್ಸ್' ಹಾಗೂ ಮಾತೃ ಸಂಸ್ಥೆಯಾದ 'ಟಾಟಾ ಟ್ರಸ್ಟ್' ನಡುವೆ ಆಡಳಿತಾತ್ಮಕ ವಿಷಯಗಳು, ಮಂಡಳಿಯ ನಿರ್ಧಾರಗಳು ಮತ್ತು ಭವಿಷ್ಯದ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಒಳಗೊಳಗೇ ತೀವ್ರ ವೈಮನಸ್ಸು ಹಾಗೂ ಭಿನ್ನಮತಗಳು ಮೂಡುತ್ತಿವೆ ಎಂಬ ವರದಿಗಳು ಉದ್ಯಮ ರಂಗದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇಂತಹ ನಿರ್ಣಾಯಕ ಮತ್ತು ಕಷ್ಟಕರ ಸಂದರ್ಭದಲ್ಲಿ, ದೇಶದ ಪ್ರಮುಖ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿರುವ ಚಂದ್ರಶೇಖರನ್ ಅವರು ವಿದ್ಯಾಬುದ್ಧಿ ಮತ್ತು ಸಂಕಷ್ಟ ನಿವಾರಣೆ ನೀಡುವ ಜಗನ್ಮಾತೆ ಕೊಲ್ಲೂರು ಮೂಕಾಂಬಿಕಾ ದೇವಿಯ ಅಂಗಳಕ್ಕೆ ಆಗಮಿಸಿರುವುದು ವಿಶೇಷ ಗಮನ ಸೆಳೆದಿದೆ. ಸಂಸ್ಥೆಯ ಮೇಲಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಹಾಗೂ ಕಾರ್ಯತಂತ್ರಗಳ ಸುಗಮ ಹಾದಿಗಾಗಿ ಅವರು ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.