ರೇಣುಕಾಸ್ವಾಮಿ ಪ್ರಕರಣದಲ್ಲಿ ಇವತ್ತು ಮಹತ್ವದ ಬೆಳವಣಿಗೆ ನಡೆದಿದೆ. ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ ದಾಖಲು ಮಾಡಲಾಗುತ್ತಿದೆ. ಈ ಮಧ್ಯೆ ದರ್ಶನ್ ಪರ ವಕೀಲರು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ಆಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ಅಂತೆಯೇ ಇವತ್ತು ವಿಚಾರಣಾ ನ್ಯಾಯಾಲಯವು ಪ್ರದೋಷ್‌ನಿಂದ ಹೇಳಿಕೆ ದಾಖಲಿಸಿಕೊಂಡಿದೆ.
ಪ್ರದೋಷ್ ಹೇಳಿಕೆ ಬೆನ್ನಲ್ಲೇ.. ದರ್ಶನ್ ಪರ ವಕೀಲ ಹಸ್ಮತ್ ಪಾಷಾ (Hashmath Pasha) ಮಹತ್ವದ ಹೇಳಿಕೆ ನೀಡಿದ್ದಾರೆ. ವಿಚಾರಣಾ ನ್ಯಾಯಾಲಯದಲ್ಲಿ ಇಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸುತ್ತಿದ್ದಾರೆ. ನಾಳೆಯೂ ಮಾಫಿ ಸಾಕ್ಷಿ ಹೇಳಿಕೆ ಮುಂದುವರೆಯಲಿದೆ. ಪ್ರದೋಷ್ ಮಾಫಿ ಸಾಕ್ಷಿ ತಡೆಯಾಜ್ಞೆ ತರುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ( Special Leave Petition) ಸಲ್ಲಿಕೆ ಮಾಡಿದ್ದೇವೆ. ಅದರ ಆದೇಶ ಬಂದರೆ ಕೆಳ ಹಂತದ ಆದೇಶದ ಮೇಲೆ ಪರಿಣಾಮ ಬೀರಲಿದೆ. ದರ್ಶನ್ ಪರವಾಗಿ ಇಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದರು.
ಪ್ರದೋಷ್‌ನ ಸ್ಟೇಟ್ ಮೆಂಟ್ ತಡೆ ಹಿಡಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇನ್ನೂ ಲಿಸ್ಟ್ ಆಗಿಲ್ಲದ ಕಾರಣ ಅರ್ಜಿ ವಿಚಾರಣೆಗೆ ಬಂದಿಲ್ಲ. ಇವತ್ತು ಇದೇ ವಿಚಾರವಾಗಿ ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್‌ಗೆ ಅರ್ಜಿ ಹಾಕಿದ್ವಿ. ಆದ್ರೆ ನಮ್ಮ ಅರ್ಜಿಯನ್ನ ನ್ಯಾಯಾಲಯ ಪುರಸ್ಕರಿಸಿಲ್ಲ. ಇವತ್ತು ಪ್ರದೋಷ್ ರವರು ಅರ್ಧ ಹೇಳಿಕೆ ದಾಖಲು ಮಾಡಿದ್ದಾರೆ. ನಾಳೆ ಉಳಿದ ಸ್ಟೇಟ್‌ಮೆಂಟ್ ದಾಖಲು ಮಾಡಲಿದ್ದಾರೆ. ಎಸ್ ಪಿ ಪಿ ಮೈನ್ ಎಕ್ಸಾಮಿನೇಷನ್ ಮಾಡಿದ್ದಾರೆ. ಸುಪ್ರೀಂನಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಈ ಸ್ಟೇಟ್ ಮೆಂಟ್‌ಗೆ ಪ್ರಭಾವ ಇರುತ್ತದೆ ನಮ್ಮ ಕಕ್ಷಿದಾರರ ರಕ್ಷಣೆಗೆ ನಾವು ಎಲ್ಲಾ ಪ್ರಯತ್ನ ಮಾಡ್ತಿದ್ದೀವಿ. ಕ್ರಾಸ್ ಎಕ್ಸಾಮಿನ್‌ಗೆ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ಅವಕಾಶ ಕೊಟ್ಟಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಹಸ್ಮತ್ ಪಾಷಾ ಹೇಳಿದ್ದಾರೆ.
ಮೌನಿಯಾದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ನಟ ದರ್ಶನ್ ತಲೆ ಮೇಲೆ ಕೈಹೊತ್ತು ಕುಳಿತಿದ್ದ ಫೋಟೋ ವೈರಲ್ ಆಗಿದೆ. ಪ್ರದೋಷ್ ಹೇಳಿಕೆ ಮುಂದೂಡಲು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಚಿತ್ರರಂಗದ ಸುಲ್ತಾನ್ ಎಂದೇ ಮೆರೆದಿದ್ದ ನಟ ದರ್ಶನ್ ಇಂದು ವಿಡಿಯೋ ಕಾನ್ಫರೆನ್ಸ್ ಪರದೆಯ ಮುಂದೆ ಅಕ್ಷರಶಃ ಮೌನಿಯಾಗಿದ್ದರು. ತನ್ನದೇ ನೆರಳಿನಂತಿದ್ದ ಆಪ್ತ ಗೆಳೆಯ ಪ್ರದೋಷ್, ಕೋರ್ಟ್‌ನಲ್ಲಿ ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಬದಲಾಗಿ ತನಗೆದುರಾಗಿ ನಿಲ್ಲುತ್ತಿದ್ದಂತೆ ದರ್ಶನ್ ಆಘಾತಕ್ಕೆ ಒಳಗಾದರಾ ಎನ್ನುವ ಮಾತುಗಳನ್ನು ಅವರ ಫೋಟೋ ಸೃಷ್ಟಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪ್ರದೋಷ್ ಅವರ ಕಾನೂನು ಪ್ರಕ್ರಿಯೆಯಲ್ಲಿ ಇಂದು ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ. ಅಲ್ಲದೇ ಹಲವು ಬೆಳವಣಿಗೆಗಳು ಹಾಗೂ ವೈರಲ್ ಆದ ಪೋಟೋಗಳು ಅಭಿಮಾನಿಗಳಲ್ಲಿ ಹಾಗೂ ಚಿತ್ರ ರಂಗದಲ್ಲಿ ಆತಂಕ ಸೃಷ್ಟಿಸುವ ವಾತಾವರಣವನ್ನು ಸೃಷ್ಟಿಸಿವೆ.


