ಲಂಡನ್‌ಗೆ ತೆರಳುತ್ತಿದ್ದ ವಿಮಾನ (AI-171) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 270 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರು.
ಮುಂಬೈ (ಜೂ.27): ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಟ್ರಸ್ಟ್ ರಚಿಸಲು ಟಾಟಾ ಸನ್ಸ್ ಮಂಡಳಿಯ ಯೋಚನೆ ಮಾಡುತ್ತಿದೆ. ಜೂನ್ 12 ರಂದು ಇಡೀ ದೇಶವೇ ಬೆಚ್ಚಿ ಬೀಳಿಸಿದಂತ ದುರಂತ ಘಟನೆಯ ಬಳಿಕ ನಡೆದ ಮೊದಲ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಇಡೀ ಲೀಡರ್‌ಷಿಪ್‌ಗೆ ಪರಿಗಣನೆಯ ಬಗ್ಗೆ ತಿಳಿಸಿದರು.
ಅಪಘಾತದಲ್ಲಿ ಸಂತ್ರಸ್ಥ ಕುಟುಂಬಗಳಿಗೆ ಟಾಟಾ ಗ್ರೂಪ್ ತೆಗೆದುಕೊಂಡ ಕ್ರಮಗಳ ಕುರಿತು ನಿರ್ದೇಶಕರ ಮಂಡಳಿಗೆ ವಿವರಿಸಿದ ಚಂದ್ರಶೇಖರನ್, ಪರಿಹಾರ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲು ಏರ್ ಇಂಡಿಯಾದೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಲಂಡನ್‌ಗೆ ತೆರಳುತ್ತಿದ್ದ ವಿಮಾನ (AI-171) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ಈ ದುರಂತ ಘಟನೆಯಲ್ಲಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್ ಅಂದಾಜು 500 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಅನುಮೋದನೆ ಕೋರುತ್ತಿದೆ ಎಂದು ದಿ ಎಕನಾಮಿಕ್ ಟೈಮ್ಸ್ ಮೂಲಗಳನ್ನು ಉಲ್ಲೇಖಿಸಿ ತಿಳಿಸಿದೆ. ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯು ಈ ಹಿಂದೆ ಎರಡು ಪ್ರತ್ಯೇಕ ಟ್ರಸ್ಟ್‌ಗಳನ್ನು ಸ್ಥಾಪಿಸುವ ಬಗ್ಗೆ ಪರಿಗಣಿಸಿತ್ತು. ಇದರಲ್ಲಿ ಒಂದು ಭಾರತೀಯ ನಾಗರಿಕರ ಕುಟುಂಬಗಳಿಗೆ ಮಾತ್ರ ಮತ್ತು ಇನ್ನೊಂದು ವಿದೇಶಿ ಪ್ರಜೆಗಳಿಗೆ ಮೀಸಲಿಡುವ ತೀರ್ಮಾನ ಮಾಡಿತ್ತು.
ವರದಿಯ ಪ್ರಕಾರ, ಈ ಮೊತ್ತವನ್ನು 271 ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಪಾವತಿ, ವೈದ್ಯಕೀಯ ಆರೈಕೆ ಮತ್ತು ಏರ್ ಇಂಡಿಯಾ ವಿಮಾನ ಬಿದ್ದ ವೈದ್ಯಕೀಯ ಶಾಲೆ ಆಗಿರುವ ಬಿಜೆ ವೈದ್ಯಕೀಯ ಕಾಲೇಜು ಮತ್ತು ಸಿವಿಲ್ ಆಸ್ಪತ್ರೆಯ ನವೀಕರಣಕ್ಕಾಗಿ ಬಳಸಲಾಗುತ್ತದೆ. ಈ ಉಪಕ್ರಮವನ್ನು ಟಾಟಾ ಮೋಟಾರ್ಸ್ ಸಮೂಹದ ಸಿಎಫ್‌ಒ ಪಿಬಿ ಬಾಲಾಜಿ ನೇತೃತ್ವ ವಹಿಸಿದ್ದಾರೆ. ಟಾಟಾ ಟ್ರಸ್ಟ್ ಸಹ ಈ ನಿಧಿಗೆ ಕೊಡುಗೆ ನೀಡುವ ಸಾಧ್ಯತೆಯಿದೆ.
ಈ ಹಿಂದೆ, ಏರ್ ಇಂಡಿಯಾ ಒಡೆತನದ ಟಾಟಾ ಗ್ರೂಪ್, ಜೂನ್ 12 ರಂದು ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿ ಪ್ರಯಾಣಿಕರ ಕುಟುಂಬಗಳಿಗೆ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಿತ್ತು. ಅಪಘಾತದ ಕೆಲವು ದಿನಗಳ ನಂತರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಚಂದ್ರಶೇಖರನ್, "ನನ್ನ ವೃತ್ತಿಜೀವನದಲ್ಲಿ ನಾನು ಅನೇಕ ಬಿಕ್ಕಟ್ಟುಗಳನ್ನು ನೋಡಿದ್ದೇನೆ, ಆದರೆ ಇದು ಅತ್ಯಂತ ಹೃದಯವಿದ್ರಾವಕವಾದದ್ದು ಎಂದೂ ಕಂಡಿರಲಿಲ್ಲ" ಎಂದು ಹೇಳಿದರು.
ಮೂಲಗಳ ಪ್ರಕಾರ, ಟಾಟಾ ಸನ್ಸ್ ಮಂಡಳಿಯ ಸಭೆಯಲ್ಲಿ ಚಂದ್ರಶೇಖರನ್ ಅವರು ಇಡೀ ದುರಂತಕ್ಕೆ ಟಾಟಾ ಸಮೂಹ ನೀಡಿದ ಪ್ರತಿಕ್ರಿಯೆಯನ್ನು ವಿವರಿಸಿದರು, ಇದರಲ್ಲಿ ಹಣಕಾಸಿನ ನೆರವು, ಸಂತ್ರಸ್ಥ ಕುಟುಂಬಗಳಿಗೆ ಬೆಂಬಲ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಕಂಪನಿಯ ಸಮನ್ವಯ ಸೇರಿವೆ. ಮಂಡಳಿಯು ಒಂದು ಕ್ಷಣ ಮೌನ ಆಚರಿಸಿತು ಮತ್ತು ಮಡಿದ ಜೀವಗಳಿಗೆ ಆಳವಾದ ಸಂತಾಪ ಸೂಚಿಸಿತು.
ಮಹತ್ವದ ಹೆಜ್ಜೆಯಾಗಿ, ಟಾಟಾ ಸಮೂಹವು ಮೃತರ ಹತ್ತಿರದ ಸಂಬಂಧಿಕರಿಗೆ ₹1 ಕೋಟಿ ಪರಿಹಾರವನ್ನು ಈಗಾಗಲೇ ಘೋಷಿಸಿದೆ. ಟಾಟಾ ಒಡೆತನದ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ, ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಬೋಯಿಂಗ್ ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು, ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು.
