ಕೊನೆಗೂ ಕಾಡಾನೆ ತಡೆಗೆ ಚಾಮರಾಜನಗರದಲ್ಲಿ ಟಾಸ್ಕ್ ಫೋರ್ಸ್, ನಿಟ್ಟುಸಿರು ಬಿಟ್ಟ ಕಾಡಾಂಚಿನ ರೈತರು
ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆ ಚಾಮರಾಜನಗರ. ಇದೀಗ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದ್ದು, ಎಚ್ಚೆತ್ತ ಸರ್ಕಾರ ಚಾಮರಾಜನಗರದಲ್ಲೂ ಕೂಡ ಟಾಸ್ಕ್ ಫೋರ್ಸ್ ರಚಿಸಿದೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಫೆ.5): ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆ ಚಾಮರಾಜನಗರ. ಜಿಲ್ಲೆಯಲ್ಲಂತೂ ಕಾಡಾನೆ ಉಪಟಳ ಹೆಚ್ಚಾಗಿತ್ತು. ಆದ್ರೂ ರಾಜ್ಯ ಸರ್ಕಾರ ಆನೆ ಟಾಸ್ಕ್ ಫೋರ್ಸ್ ರಚನೆ ವೇಳೆ ಚಾಮರಾಜನಗರವನ್ನು ಕಡೆಗಣಿಸಿತ್ತು. ಆದ್ರೆ ಇದೀಗ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದೆ. ಎಚ್ಚೆತ್ತ ಸರ್ಕಾರ ಚಾಮರಾಜನಗರದಲ್ಲೂ ಕೂಡ ಟಾಸ್ಕ್ ಫೋರ್ಸ್ ರಚಿಸಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಆನೆ,ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ.ಶೇ 50 ರಷ್ಟು ಭಾಗ ಅರಣ್ಯದಿಂದಲೇ ಕೂಡಿದೆ. ಕಾಡಾನೆ ಸಂಖ್ಯೆ ಕೂಡ ಹೆಚ್ಚಿದೆ.ಇನ್ನೂ ಕಾಡಾನೆಗಳು ಆಗಿಂದಾಗ್ಗೆ ನಾಡಿಗೆ ದಾಳಿ ಇಟ್ಟು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಲೇ ಇವೆ. ರಾಜ್ಯದಲ್ಲಿ ಆನೆ ಕಾಡಿಗಟ್ಟಲೂ ರಾಜ್ಯ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಆದ್ರೆ ರಚನೆ ವೇಳೆ ಚಾಮರಾಜನಗರವನ್ನು ಕಡೆಗಣಿಸಲಾಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಆನೆ ಹಾವಳಿ ತಡೆಗಟ್ಟುವಂತೆ ರೈತರು ಆಗ್ರಹಿಸಿದ್ದರು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಟಾಸ್ಕ್ ಫೋರ್ಸ್ ರಚಿಸಿದೆ. ಈ ಟಾಸ್ಕ್ ಪೋಸ್ಟ್ ನಲ್ಲಿ ಓರ್ವ ಡಿಸಿಎಫ್, ಒಬ್ಬ ಎಸಿಎಫ್, ಒಬ್ಬ RFO, ನಾಲ್ವರು DRFO, 8 ಅರಣ್ಯ ರಕ್ಷಕರು, 32 ಮಂದಿ ವಾಚರ್ಸ್ ಗಳನ್ನು ಒಳಗೊಂಡ ತಂಡ ರಚಿಸಿದೆ. ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್ ಗೆ ಟಾಸ್ಕ್ ಫೋರ್ಸ್ ಜವಾಬ್ದಾರಿ ವಹಿಸಲಾಗಿದೆ.
ಇನ್ನೂ ಸರ್ಕಾರದಿಂದ ಟಾಸ್ಕ್ ಫೋರ್ಸ್ ರಚಿಸಿದ್ರಷ್ಟೇ ಸಾಲದು. ಇನ್ನೂ ಗುಂಪು ಗುಂಪಾಗಿ ಕಾಡಾನೆ ಹಿಂಡು ಗ್ರಾಮದ ಜಮೀನುಗಳಿಗೆ ಲಗ್ಗೆ ಇಡ್ತಿವೆ. ಚಾಮರಾಜನಗರ ಜಿಲ್ಲೆಯಾದ್ಯಂತ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಗಡಿ ಜಿಲ್ಲೆಯಾಗಿರುವುದರಿಂದ ಪಕ್ಕದ ತಮಿಳುನಾಡಿನಿಂದ ಎಂಟ್ರಿ ಕೊಡುವ ಕಾಡಾನೆ ಹಿಂಡಿನಿಂದ ರೈತರು ಆತಂಕಕ್ಕೊಳಗಾಗಿದ್ದರು. ಆದ್ರೆ ಸದ್ಯ ಅರಣ್ಯ ಇಲಾಖೆ ಕಾಡಾನೆಗಳನ್ನು ಬೇರೆಡೆಗೆ ತಾತ್ಕಾಲಿಕವಾಗಿ ಡ್ರೈವ್ ಮಾಡಿವೆ.
ಹಾಸನದಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ಕಾಫಿ ತೋಟದಲ್ಲಿ ಗಜಪಡೆ ಪರೇಡ್..!
ಆದ್ರೆ ಮತ್ತೆ ಆನೆಗಳು ಎಂಟ್ರಿ ಕೊಟ್ರೆ ಬೆಳೆಯ ಜೊತೆಗೆ ಪ್ರಾಣ ಹಾನಿಯೂ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಶಾಶ್ವತವಾಗಿ ಕಾಡಾನೆ ಉಪಟಳದಿಂದ ತಪ್ಪಿಸುವಂತೆ ರೈತರು ಮನವಿ ಮಾಡ್ತಿದ್ದಾರೆ. ಕಾಡಾನೆ ತಡೆಗೆ ರೈಲ್ವೇ ಬ್ಯಾರಿಕೆಡ್, ಸೋಲಾರ್ ಫೆನ್ಸ್, ಆನೆ ಕಂದಕಗಳನ್ನು ಹೆಚ್ಚೆಚ್ಚು ನಿರ್ಮಿಸಬೇಕು. ಟಾಸ್ಕ್ ಫೋರ್ಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸುಮ್ಮನೆ ಹೆಸರಿಗಷ್ಟೆ ಟಾಸ್ಕ್ ಫೋರ್ಸ್ ರಚಿಸಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ರೆ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸ್ತಾರೆ.
Bison attack: ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ; ಒಂದು ತಿಂಗಳಲ್ಲಿ ನಾಲ್ಕನೇ ಬಾರಿ!
ಒಟ್ಟಾರೆ ರಾಜ್ಯ ಸರ್ಕಾರ ಕಡೆಗೂ ಕಾಡಾನೆ ತಡೆಗೆ ಟಾಸ್ಕ್ ಫೋರ್ಸ್ ರಚಿಸಿರುವುದು ಸಂತಸದ ವಿಚಾರ. ಆದ್ರೆ ಈ ಟಾಸ್ಕ್ ಫೋರ್ಸ್ ಎಷ್ಟರ ಮಟ್ಟಿಗೆ ಕಾಡಾನೆ ಹಾವಳಿ ತಪ್ಪಿಸುತ್ತೆ, ರೈತರಿಗೆ ಎಷ್ಟು ಪ್ರಯೋಜನವಾಗುತ್ತೆ ಅನ್ನೋದ್ನ ಕಾದು ನೋಡಬೇಕಾಗಿದೆ.