Bagalkote: ಪ್ರವಾಹ ನಿರ್ವಹಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಸಚಿವ ಸಿ.ಸಿ.ಪಾಟೀಲ್
ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಹ ಎದುರಾದಲ್ಲಿ ನಿರ್ವಹಣೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.14): ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಹ ಎದುರಾದಲ್ಲಿ ನಿರ್ವಹಣೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ಅತಿವೃಷ್ಠಿಯಿಂದ ಉಂಟಾದ ಹಾನಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಜುಲೈ ಮಾಹೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದೇ ಮುಂದು ವರೆದಲ್ಲಿ ಜಲಾಶಯಗಳ ಒಳ ಹಾಗೂ ಹೊರ ಹರಿವಿನ ಪ್ರಮಾಣ ಹೆಚ್ಚಾದಲ್ಲಿ ಪ್ರವಾಹ ಉಂಟಾಗುವ ಸಾದ್ಯತೆ ಇದೆ. ಪ್ರವಾಹ ನಿರ್ವಹಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಬೇಕಾದ ಎಲ್ಲ ರೀತಿಯ ಸಿದ್ದತೆಯಲ್ಲಿರಲು ಅಧಿಕಾರಿಗಳಿಗೆ ಸೂಚಿಸಿದರು. ಮಹಾರಾಷ್ಟ್ರದ ಕೊಯನಾ ಜಲಾಶಯದ ನೀರಿನ ಪ್ರಮಾಣದ ಬಗ್ಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಸೂಚಿಸಿದರು.
ಈಗಲೇ ಮುಂಜಾಗೃತೆ ವಹಿಸಿ: ಈ ಹಿಂದೆ ಜಿಲ್ಲೆಯಲ್ಲಿ ಬಂದಿದ್ದ ಪ್ರವಾಹದಿಂದ ಪಾಠ ಕಲಿತಿದ್ದೇವೆ. ಪ್ರವಾಹದಿಂದ ಸಾಕಷ್ಟು ಹಾನಿ, ಸಂಕಷ್ಟ ಅನುಭವಿಸಿದ್ದೇವೆ. ಆ ಅನುಭವ ನಮಗಿರುವುದರಿಂದ ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಲಕ್ಷ ವಹಿಸಿ ಮುಂಜಾಗ್ರತಾ ಕ್ರಮವಹಿಸುವದರ ಜೊತೆಗೆ ವಿವಿಧ ಇಲಾಖೆಯವರು ಪ್ರವಾಹ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಕಾಳಜಿ ಕೇಂದ್ರದಲ್ಲಿ ಗುಣಮಟ್ಟದ ಆಹಾರ, ಆರೋಗ್ಯ ಹಾಗೂ ಔಷಧಿಗಳನ್ನು ಸಂಗ್ರಹಿಸಿಟ್ಟಕೊಳ್ಳತಕ್ಕದ್ದು ಎಂದರು. ಪ್ರವಾಹ ನಿರ್ವಹಣೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಅನುಸರಿಸಿದಂತೆ ಜಿಯೋಲಾಜಿಸ್ಟಿಕ್ ಟೆಕ್ನಾಲಜಿಯನ್ನು ಜಿಲ್ಲೆಯಲ್ಲಿ ಅಳವಡಿಸಲು ಸಚಿವರು ಸೂಚಿಸಿದರು.
ಬರ್ತ್ ಡೇ ಹೆಸರಲ್ಲಿ ಬೇರೊಂದು ಕ್ಷೇತ್ರದಲ್ಲಿ ಬಲ ಪ್ರದರ್ಶನ, ಶಿವನಗೌಡ ರಾಜಕೀಯ ನಡೆ ಕುತೂಹಲ
ಮನೆ ಮತ್ತು ಜಾನುವಾರ ಹಾನಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ: ಪ್ರವಾಹ ಸಮಯದಲ್ಲಿ ವಿದ್ಯುತ್ ಕಂಬಗಳು ಬೀಳುತ್ತಿದ್ದು, ವಿದ್ಯುತ್ ಕಂಬ, ಕಂಡಕ್ಟರ, ಟಿಸಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಕಡಿಮೆ ಇದ್ದಲ್ಲಿ ಜಿಲ್ಲಾಡಳಿತದಿಂದ ಪೂರೈಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲು ಸೂಚಿಸಿದರು. ಮನೆ-ಜಾನುವಾರು ಹಾನಿಗಳಿಗೆ ತಕ್ಷಣ ಪರಿಹಾರಕ್ಕೆ ಕ್ರಮವಹಿಸಬೇಕು. ಮನೆ ಹಾನಿಗೆ ಸಂಬಂಧಿಸಿದಂತೆ ಕೆಟಗರಿವಾರು ಗುರುತಿಸುವ ಪ್ರಕ್ರಿಯೆಯ ಬಗ್ಗೆ ಜಿ.ಪಂ ಸಿಇಓ ಅವರು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದರು.
ಬೆಳೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಚಿವರ ಸೂಚನೆ: ಈಗಾಗಲೇ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ, ಬಿತ್ತನೆ, ವಿವಿಧ ಜಲಾಶಯಗಳ ನೀರಿನ ಪ್ರಮಾಣ, ಅತಿವೃಷ್ಠಿಯಿಂದ ಉಂಟಾದ ಹಾನಿ, ಈಗಾಗಲೇ ಜಿಲ್ಲಾಡಳಿತದಿಂದ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 83 ಮಿಮಿ ಮಳೆಯಾಗಿದ್ದು, ಹೆಸರು, ಉದ್ದು, ಸೋಯಾಬಿನ್ ಸೇರಿ ಒಟ್ಟು 2.49 ಹೆಕ್ಟೆರ್ ಬಿತ್ತನೆಯಾಗಿದೆ. ಬೀಜ ಹಾಗೂ ಗೊಬ್ಬರದ ಕೊರತೆ ಇರುವದಿಲ್ಲ. ಈಗಾಗಲೇ ರೈತರಿಂದ ಶೇ.10.73 ರಷ್ಟು ಬೆಳೆ ಸಮೀಕ್ಷೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಭೆಗೆ ತಿಳಿಸಿದಾಗ ಸಚಿವರು ಪ್ರತಿಯೊಬ್ಬ ರೈತರ ಬೆಳೆ ಸಮೀಕ್ಷೆಗೆ ಕ್ರಮವಹಿಸಬೇಕು.
ಪ್ರವಾಹ, ಅತಿವೃಷ್ಠಿಯಿಂದಾಗ ಬೆಳೆ ಹಾನಿಯಾದಲ್ಲಿ ಪರಿಹಾರ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತಿಳಿಸಿದರು. ಜುಲೈ ಮಾಹೆಯಲ್ಲಿ 23 ಮಿಮಿ ಮಳೆ ಪೈಕಿ 55 ಮಿ.ಮೀ ಮಳೆಯಾಗಿರುತ್ತದೆ. 68 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ 358, ಜೂನ್‍ದಲ್ಲಿ 50 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕೃಷಿ ಮತ್ತು ತೋಟಗಾರಿಗೆ ಸೇರಿ 287 ರೈತರ 179.74 ಹೆಕ್ಟೆರ್ ಕ್ಷೇತ್ರ ಹಾನಿಯಾಗಿದ್ದು, ಈ ಪೈಕಿ 24.62 ಲಕ್ಷ ಪರಿಹಾರ ನೀಡಲಾಗಿದೆ ಎಂದು ತಿಳಿಸಲಾಯಿತು.
ಕೃಷ್ಣೆಯಲ್ಲಿ ಕ್ಷಣಕ್ಷಣಕ್ಕೂ ಹೆಚ್ಚಿದ ನೀರು: ಆಲಮಟ್ಟಿ ಜಲಾಶಯದಲ್ಲಿ ಒಳ ಹರಿವು 1.04 ಲಕ್ಷ ಕ್ಯೂಸೆಕ್ಸ್ ಇದ್ದರೆ, ಹೊರ ಹರಿವು 1 ಲಕ್ಷ ಕ್ಯೂಸೆಕ್ಸ್ ಇದೆ. ಹಿಪ್ಪರಗಿ ಒಳಹರಿವು 1.03 ಲಕ್ಷ, ಹೊರಹರಿವು 1.02 ಲಕ್ಷ ಕ್ಯೂಸೆಕ್ಸ್, ಹಿಡಕಲ್ ಜಲಾಶಯದಲ್ಲಿ ಒಳ ಹರಿವು 19.69 ಸಾವಿರ, ಹೊರಹರಿವು 114 ಕ್ಯೂಸೆಕ್ಸ್, ನವೀಲತೀರ್ಥ ಜಲಾಶಯದಲ್ಲಿ ಒಳಹರಿವು 8400 ಕ್ಯೂಸೆಕ್ಸ್, ಹೊರಹರಿವು 194 ಕ್ಯೂಸೆಕ್ಸ್ ಹಾಗೂ ನಾರಾಯಣಪೂರ ಜಲಾಶಯದಲ್ಲಿ 1 ಲಕ್ಷ ಕ್ಯೂಸೆಕ್ಸ್ ಒಳಹರಿವು, 1.11 ಲಕ್ಷ ಕ್ಯೂಸೆಕ್ಸ್ ಹೊರಹರಿವು ಇರುವುದಾಗಿ ಸಭೆಗೆ ತಿಳಿಸಲಾಯಿತು. ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ 56 ಗ್ರಾಮ, ಘಟಪ್ರಭಾ ನದಿಯಿಂದ 69, ಮಲಪ್ರಭಾ ನದಿಯಿಂದ 63 ಸೇರಿ ಒಟ್ಟು 188 ಹಾನಿಗೊಳಗಾಗಬಹುದಾದ ಗ್ರಾಮಗಳಾಗಿವೆ.
ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ
ಪ್ರವಾಹ ಮುಂಜಾಗೃತಾ ಕುರಿತು ಪ್ರತಿ ತಾಲೂಕಿಗೆ ತಲಾ ಒಬ್ಬರಂತೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ತಹಶೀಲ್ದಾರ ಕಾರ್ಯಾಲಯದಲ್ಲಿ ದಿನ 24 ಗಂಟೆಗಳ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 8 ಬೋಟ್‍ಗಳಿರುವುದಾಗಿ ತಿಳಿಸಲಾಯಿತು. ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾದ ಆಚಾರ ಹಾಲಪ್ಪ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.