ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ಗೆ ಸಿದ್ದರಾಮೋತ್ಸವ ಬೇಕಾ, ಹಿರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೆ ಏನು ಹೇಳಬೇಕು...? ಎಂದು ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ, (ಜುಲೈ.14):
ಜನ ಹೊಯ್ಕೊಂಡು ಬಡದಾಡುತ್ತಿದ್ದಾರೆ, ಜನರ ಬದುಕು ನಡೆಸಲು ಸಂಕಷ್ಟದಲ್ಲಿದ್ದಾರೆ, ಈಗ ಉತ್ಸವ ಬೇಕಾ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ ಅವರು, ಸಿದ್ದರಾಮೋತ್ಸವ ಬಗ್ಗೆ ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಇಂದು(ಗುರುವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಬರುತ್ತೋ, ಶಿವಕುಮಾರೋತ್ಸವ ಬರುತ್ತೋ,ನಾಳೆ ಪರಮೇಶ್ವರ ಉತ್ಸವ ಬರುತ್ತೋ ಬರಲಿ ನೋಡೋಣ ಎಂದ ಸಚಿವರು, ಉತ್ಸವದಲ್ಲಿ ನಾಲ್ಕು ಜ‌ನ ಬಂದು ಅಲ್ಲಿ ಊಟ ಮಾಡಿ ಹೋಗ್ತಾರೆ ಅಂದ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು. 

ನಮ್ಮಲ್ಲಿ ಏನಿದ್ರೂ ಬಿಜೆಪಿ ಉತ್ಸವ, ಕಮಲದ ಉತ್ಸವ ಇರುತ್ತೆ. ನಮ್ಮಲ್ಲಿ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ರಾಜ್ಯದ ತುಂಬ ಪ್ರವಾಹ ಇದೆ.ಜನ ಹೊಯ್ಕೊಂಡು ಬಡದಾಡುತ್ತಿದ್ದಾರೆ.ಜನರ ಸಂಕಷ್ಟದ ಜೀವನ ಹೋಯ್ದಾಡುತ್ತಿದೆ.ಈಗ ಸಿದ್ದರಾಮೋತ್ಸವ ಬೇಕಿತ್ತಾ ಎಂದು ಸಚಿವರು ಪ್ರಶ್ನೆ ಮಾಡಿದರು.

'ಕೈ'ಗೆ ಕೇಸರಿ ಟಕ್ಕರ್! ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

ಸಿದ್ದರಾಮೋತ್ಸವ ಸಿದ್ಧತೆ ಬೆನ್ನಲ್ಲೆ ಶಿವಕುಮಾರ್ ಉತ್ಸವಕ್ಕೂ ಅಭಿಮಾನಿಗಳ ಪತ್ರ...ಕಾಂಗ್ರೆಸ್ ವಿರುದ್ಧ ಸಚಿವ ಸಿ.ಸಿ‌.ಪಾಟೀಲ ವ್ಯಂಗ್ಯ...
ಈ ಮಧ್ಯೆ ಡಿಕೆ ಶಿವಕುಮಾರ್ ಅವರು ಉತ್ಸವಕ್ಕೂ ಅವರ ಅಭಿಮಾನಿಗಳು ಪತ್ರ ‌ ಬರೆದಿದ್ದಾರೆ. ಇತ್ತ ಕೇಂದ್ರದ ಕಾಂಗ್ರೆಸ್ ವರಿಷ್ಠರಿಂದಲೂ ಸೂಚನೆ ಬರುತ್ತೆ. ಡಿಕೆಶಿ ಅವರೇ ಇದೊಂದು ಸಕಾ೯ರಿ ಕಾಯ೯ಕ್ರಮ ಅಂತ ಅನೌನ್ಸ್ ಮಾಡಬೇಕಂತ ಸೂಚನೆ ಬರುತ್ತೆ, ಆಗ ಇದಕ್ಕೆ ರಾಹುಲ್ ಗಾಂಧಿ ಬರ್ತಾರೆ ಅಂತ ಹೇಳಬೇಕು ಅಂತ ಸೂಚನೆ ಬರುತ್ತೆ,ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ ಎಂದು ಟೀಕಿಸಿದರು.

ಸಿದ್ದರಾಮಯ್ಯನಂತಹ ಹಿರಿಯರೇ ಹೀಗೆ ಮಾಡ್ತಾರೆ ಅಂದ್ರೆ ಏನು ಹೇಳಬೇಕು. ಚುನಾವಣೆ ಇನ್ನೂ ಒಂದು ವರ್ಷ ಇದೆ. ನಾನಾ, ನೀನಾ ಅನ್ನೋರಿಗೆ ಸಿದ್ದರಾಮೋತ್ಸವ ಯಾವ ಪುರುಷಾರ್ಥಕ್ಕೆ...? ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದೆ.ಯಾವ ಪುರುಷಾರ್ಥಕ್ಕೂ ಇದನ್ನು ಮಾಡುತ್ತಿಲ್ಲ, ರಾಜ್ಯವನ್ನ ತಮ್ಮ ಹಿಡಿತಕ್ಕೆ ತರಲು ಮಾತ್ರ ಉತ್ಸವ. ಇದರಲ್ಲಿ ನಾನಾ, ನೀನಾ ಎಂಬ ಎರಡಷ್ಟೇ ಇರೋದು. ಇದು ಬೇರೇನು ಇಲ್ಲ. ನಾ ಅಂತ ಇವರಂತಾರೆ, ನಾ ಅಂತ ಅವರಂತಾರೆ. ಸಿಎಂ ಎರಡೇ ದಿನದಲ್ಲಿ 4 ಜಿಲ್ಲೆ ಓಡಾಡಿದರು ಎಂದರು.

ಪ್ರವಾಹ ಸಂದರ್ಭದಲ್ಲಿ ಪರಿಹಾರ ನೀಡಲಾಗಿದೆ.ಕಷ್ಟ ಕಾಲದಲ್ಲಿ ಜನರ ಬಳಿ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ‌.ಆದರೆ ಇವರ ಉತ್ಸವಕ್ಕೆ ನಾವೇನು ಹೇಳಬೇಕು ಎಂದು ಸಚಿವರು ಲೇವಡಿ ಮಾಡಿದರು.

ರಾಜ್ಯದಲ್ಲಿ ಬಿಜೆಪಿಗರು ಅಧಿಕಾರಕ್ಕೆ ಬಂದಾಗಲೆಲ್ಲಾ ಪ್ರವಾಹ ಸಂಕಷ್ಟ ಎದುರಾಗುವ ವಿಚಾರವಾಗಿ ಮಾತನಾಡಿ,ಕಾಂಗ್ರೆಸ್ ನವರ ಕಾಲದಲ್ಲಿ ಬರಗಾಲ ಇತ್ತು. ಆ ಎಲ್ಲಾ ಬರಗಾಲ ಹೋಗಲಾಡಿಸಿ, ಒಣಗಿದ್ದು ತೋಯಬೇಕಾದರೆ ಪ್ರವಾಹ ಬರಬೇಕಾಗುತ್ತೆ.5 ವರ್ಷ ಸ್ವಚ್ಚ ಬರಗಾಲನ ಇತ್ತಲ್ಲ, ಭೂಮಿ ಸ್ವಚ್ಚ ಒಣಗಿ ಹೋಗಿತ್ತು.ಅಂತರ್ಜಲ 1500 ಮೀಟರ್ ಗೆ ಹೋಗಿತ್ತು, ಈಗ 100 ಮೀಟರ್ ಗೆ ಬಂದಿದೆ. 5 ವರ್ಷದ ಬರಗಾಲದ ಕಾವು ತೀರಬೇಕಾದರೆ ಮಳೆ ಬರಬೇಕು ಎಂದ ಸಚಿವ ಸಿ.ಸಿ‌.ಪಾಟೀಲ ತಿಳಿಸಿದರು.

ಮೀಸಲಾತಿ ವಿವಾದದಲ್ಲಿ ನನ್ನ ನಡೆ ತಂತಿ ಮೇಲೆ ನಡೆದಂತಿದೆ
ಇದೇ ಸಂದರ್ಭದಲ್ಲಿ ಪಂಚಮಸಾಲಿ 2 ಎ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿ,ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ನನ್ನ ನಡೆ ತಂತಿ ಮೇಲೆ ನಡೆದಂತಾಗಿದೆ. ಸಿಎಂ ಅವ್ರು ಬಸವ ಜಯಮೃತ್ಯುಂಜಯ ಶ್ರೀಗಳ ಜೊತೆ ಮಾತನಾಡಿದ್ದಾರೆ.ಇಂತಹವೊಂದು ಕ್ಲಿಷ್ಟಕರವಾದ ಸಮಸ್ಯೆ ಬಗೆ ಹರಿಸಬೇಕಾದರೆ,ಸರ್ಕಾರ ಒಂದೇ ಜಾತಿ ನೋಡಲಿಕ್ಕೆ ಆಗಲ್ಲ. ಉಳಿದ ಸಮಾಜದ ಹಿತ ಕಾಪಾಡುವ ಕೆಲಸ ಸರ್ಕಾರದ ಹೊಣೆಯಾಗಿದೆ. ಅದಕ್ಕೆ ಸಿಎಂ ದಾರಿ ಹುಡುಕುತ್ತಿದ್ದಾರೆ. ಸ್ವಾಮಿಜಿ ಪದೆ-ಪದೇ ಗಡುವು ನೀಡುವುದು ಬೇಡಾ ಎಂದು ಮನವಿ ಮಾಡಿಕೊಂಡು, ಸಿಎಂ ಅವರು ಕೆಲಸಾ ಮಾಡ್ತಾರೆ ಅನ್ನೋ ವಿಶ್ವಾಸ ಸ್ವಾಮಿಜಿಯವರಲ್ಲೂ ಇದೆ. ಕೆಲಸ ಮಾಡುವ ವ್ಯಕ್ತಿಗೆ ಪ್ರೆಜರ್ ಜಾಸ್ತಿ ಇರುತ್ತೇ, ಆ ಕೆಲಸ ಮಾಡುವ ಸಾಮರ್ಥ್ಯ ಸಿಎಂ ಬೊಮಾಯಿ ಅವರಿಗೆ ಇದೆ ಎಂದರು.

ಇನ್ನು ಸಚಿವ ಸಿ‌.ಸಿ.ಪಾಟೀಲರು ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡವರ ಭೇಟಿ ಮಾಡಿದರು,ಖಾಸಗಿ ಆಸ್ಪತ್ರೆಯಲ್ಲಿ
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರೋ ಹಿಂದೂ ಕಾರ್ಯಕರ್ತರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.