ಹನೂರು ತಾಲೂಕಿನ ಮೆದಗಾಣೆ ಗ್ರಾಮದ ವೃದ್ಧೆ ಕೆಂಪಮ್ಮ ಅವರು ವಿದ್ಯುತ್‌ಗಾಗಿ ಬರೆದ ದಯಾಮರಣ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಸುವರ್ಣ ನ್ಯೂಸ್ ವರದಿಯ ಫಲವಾಗಿ, ದಶಕಗಳಿಂದ ಕತ್ತಲೆಯಲ್ಲಿದ್ದ ಗ್ರಾಮಕ್ಕೆ ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಚಾಮರಾಜನಗರ (ಏ.18): ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ವಿದ್ಯುತ್ ಕಾಣದ ಹನೂರು ತಾಲೂಕಿನ ಮೆದಗಾಣೆ ಗ್ರಾಮದ ವೃದ್ಧೆಯೊಬ್ಬರ ಅಳಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸ್ಪಂದಿಸಿದ್ದಾರೆ. 'ನಮಗೆ ವಿದ್ಯುತ್ ಕೊಡಿ ಇಲ್ಲವೇ ದಯಾಮರಣ ನೀಡಿ' ಎಂದು ಕೆಂಪಮ್ಮ ಎಂಬುವವರು ಬರೆದಿದ್ದ ಪತ್ರದ ಕುರಿತು ಸುವರ್ಣ ನ್ಯೂಸ್ ಬಿತ್ತರಿಸಿದ ವಿಶೇಷ ವರದಿಗೆ ಮಣಿದ ಸಿಎಂ ಕಚೇರಿ, ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸ್ಪಂದನೆ!

ಮೆದಗಾಣೆ ಹಾಡಿಯ ಕೆಂಪಮ್ಮ (60) ಅವರು ಮೂರು ತಲೆಮಾರುಗಳಿಂದ ಮೂಲಸೌಕರ್ಯವಿಲ್ಲದೆ ಅನುಭವಿಸುತ್ತಿದ್ದ ಪಡಿಪಾಟಲನ್ನು ಸುವರ್ಣ ನ್ಯೂಸ್ ವಿಸ್ತೃತವಾಗಿ ಬಿತ್ತರಿಸಿತ್ತು. ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ದೃಷ್ಟಿಮಾಂದ್ಯತೆಯಿಂದಾಗಿ ವೃದ್ಧೆ ಅನುಭವಿಸುತ್ತಿದ್ದ ನರಕಯಾತನೆಯ ದೃಶ್ಯಗಳು ರಾಜ್ಯದ ಗಮನ ಸೆಳೆದಿದ್ದವು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕತ್ತಲು ಸರಿಸಿ ಬಂದ ಭಾಗ್ಯಜ್ಯೋತಿ

ಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಇಂಧನ ಇಲಾಖೆ ಅಧಿಕಾರಿಗಳು ಅಡೆತಡೆಗಳನ್ನು ನಿವಾರಿಸಿ, ಮೆದಗಾಣೆ ಗ್ರಾಮಕ್ಕೆ ವಿದ್ಯುತ್ ಲೈನ್‌ಗಳನ್ನು ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 79 ವರ್ಷಗಳಿಂದ ಸೀಮೆಎಣ್ಣೆ ಬುಡ್ಡಿ ದೀಪದ ಕೆಳಗೆ ಜೀವನ ಸಾಗಿಸುತ್ತಿದ್ದ ಆದಿವಾಸಿ ಕುಟುಂಬಗಳ ಮನೆಯಲ್ಲಿ ಇಂದು ಮೊದಲ ಬಾರಿಗೆ ವಿದ್ಯುತ್ ಬಲ್ಬ್‌ಗಳು ಬೆಳಗಿವೆ. ಕೆಂಪಮ್ಮ ಅವರ ಮೊಮ್ಮಕ್ಕಳು ಇನ್ನು ಮುಂದೆ ಕತ್ತಲಲ್ಲಿ ಓದುವ ಅನಿವಾರ್ಯತೆ ತಪ್ಪಿದೆ.

"ನನ್ನ ಮೊಮ್ಮಕ್ಕಳ ಭವಿಷ್ಯಕ್ಕಾಗಿ ನಾನು ದಯಾಮರಣ ಕೇಳಿದ್ದೆ. ಆದರೆ ಸುವರ್ಣ ನ್ಯೂಸ್ ನನ್ನ ಧ್ವನಿಯಾಗಿ ಸಿಎಂಗೆ ತಲುಪಿಸಿತು. ನಮ್ಮ ಹಳ್ಳಿಗೆ ವಿದ್ಯುತ್ ಬಂದಿರುವುದು ನಮಗೆ ಮರುಜನ್ಮ ಸಿಕ್ಕಂತಾಗಿದೆ," ಎಂದು ವೃದ್ಧೆ ಕೆಂಪಮ್ಮ ಭಾವುಕರಾಗಿ ನುಡಿದಿದ್ದಾರೆ. ಆರು ದಿನಗಳ ಉಪವಾಸ ಸತ್ಯಾಗ್ರಹಕ್ಕೂ ಬಗ್ಗದ ಜಿಲ್ಲಾಡಳಿತ, ಸಿಎಂ ಕಚೇರಿಯ ಕಟ್ಟುನಿಟ್ಟಿನ ಆದೇಶಕ್ಕೆ ಬೆದರಿ ರಾತ್ರೋರಾತ್ರಿ ಕೆಲಸ ಪೂರೈಸಿರುವುದು ವಿಶೇಷ.