ಹನೂರು ತಾಲೂಕಿನ ಮೆದಗಾಣೆ ಗ್ರಾಮದ ಕೆಂಪಮ್ಮ ಎಂಬ ವೃದ್ಧೆ, 79 ವರ್ಷಗಳಿಂದ ತಮ್ಮೂರಿಗೆ ವಿದ್ಯುತ್, ರಸ್ತೆ, ನೀರಿನಂತಹ ಮೂಲಸೌಕರ್ಯಗಳಿಲ್ಲದ ಕಾರಣ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಹನೂರು (ಏ.17): ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ನಮಗೆ ಇನ್ನು ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ನಮ್ಮ ಮೊಮ್ಮಕ್ಕಳು ವಿದ್ಯುತ್‌ ಇಲ್ಲದೇ ಪಡಿಪಾಟಲು ಅನುಭವಿಸುತ್ತಿದ್ದು, ನಮ್ಮ ಕಣ್ಣಲ್ಲಿ ನೋಡಲಾಗುತ್ತಿಲ್ಲ. ದಯವಿಟ್ಟು ವಿದ್ಯುತ್‌ ಸಂಪರ್ಕ ಕಲ್ಪಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೆದಗಾಣೆ ಗ್ರಾಮದ ಮಹಿಳೆಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಂಪಮ್ಮ (60) ಪತ್ರ ಬರೆದಿದ್ದು, ಶೀಘ್ರದಲ್ಲಿ ಅಂಚೆ ಮೂಲಕ ಕಳುಹಿಸಲಿದ್ದಾರೆ. ತಮ್ಮ ಪತ್ರದಲ್ಲಿ ಮೆದಗಾಣೆ ಹಾಡಿಯ ಕೆಂಪಮ್ಮ 3 ತಲೆಮಾರುಗಳಿಂದ ಗ್ರಾಮದಲ್ಲಿಯೇ ವಾಸವಿದ್ದು, ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ನಮ್ಮ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಲಭಿಸಿಲ್ಲ. ಅಧಿಕಾರಿಗಳು ತಾರತಮ್ಯ ಮತ್ತು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಏ.10ರಂದು ಆದಿವಾಸಿ ಹಿತರಕ್ಷಣಾ ಸಮಿತಿ ಬೆಂಬಲದೊಂದಿಗೆ 6 ದಿನ ಉಪವಾಸದಲ್ಲಿಯೂ ಭಾಗವಹಿಸಿ ಪ್ರತಿಭಟನೆ ನಡೆಸಿದರೂ, ಜಿಲ್ಲಾಡಳಿತ ಗಮನಹರಿಸಿಲ್ಲ. ಕಣ್ಣಿನ ದೃಷ್ಟಿ ಕಡಿಮೆಯಾಗಿ ರಾತ್ರಿ ಶೌಚಾಲಯಕ್ಕೆ ಹೋಗಲು ಸಮಸ್ಯೆಯಾಗಿದೆ. ನಾವು ಪ್ರಾಣಿಗಳ ರೀತಿ ಬದುಕುತ್ತಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.