ಒಡಿಶಾದಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾಮಗಾರಿಯಿಂದಾಗಿ, ಜೂನ್ ತಿಂಗಳಲ್ಲಿ ಬೆಂಗಳೂರಿನಿಂದ ಹೌರಾ ಮತ್ತು ಕಾಮಕ್ಯಕ್ಕೆ ಸಂಚರಿಸುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಡುರಂಟೊ ಎಕ್ಸ್‌ಪ್ರೆಸ್ ಮತ್ತು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ತಡವಾಗಿ ಸಂಚರಿಸಲಿವೆ ಅಥವಾ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿವೆ.
ಬೆಂಗಳೂರು: ರೈಲು ಮಾರ್ಗಗಳ ಆಧುನೀಕರಣ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ನಿರಂತರವಾಗಿ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುತ್ತದೆ. ಇದೀಗ ಒಡಿಶಾದ ಪ್ರಮುಖ ರೈಲ್ವೆ ವಲಯದಲ್ಲಿ ಹಳಿಗಳ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ, ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹಲವು ಪ್ರಮುಖ ದೂರದೂದದ ರೈಲುಗಳ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಪೂರ್ವ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ನಾರಾಯಣಗಢ-ಭದ್ರಕ್ ವಿಭಾಗದ 3ನೇ ರೈಲು ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸಗಳು ಹಾಗೂ ರೂಪ್ಸಾ ಯಾರ್ಡ್‌ನಲ್ಲಿ ಅತ್ಯಗತ್ಯ ನವೀಕರಣ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂಯೆ ಕೋರಲಾಗಿದೆ.
ವಿಳಂಬ ಹಾಗೂ ನಿಯಂತ್ರಣಕ್ಕೊಳಗಾಗಲಿರುವ ರೈಲುಗಳ ಸಂಪೂರ್ಣ ವಿವರ:
ಕಾಮಗಾರಿಯ ಕಾರಣದಿಂದಾಗಿ ಹೌರಾ, ಬೆಂಗಳೂರು ಹಾಗೂ ಕಾಮಕ್ಯ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ಹಾಗೂ ಪ್ರೀಮಿಯಂ ರೈಲುಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಅದರ ಅಧಿಕೃತ ವಿವರಗಳು ಈ ಕೆಳಗಿನಂತಿವೆ:
1. ಹೌರಾ - SMVT ಬೆಂಗಳೂರು ಡುರಂಟೊ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12245)
ಜೂನ್ 06ರ ಬದಲಾವಣೆ: ಈ ದಿನದಂದು ಹೌರಾದಿಂದ ಹೊರಡಬೇಕಾದ ಈ ರೈಲು ತನ್ನ ಮೂಲ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 60 ನಿಮಿಷ (1 ಗಂಟೆ) ತಡವಾಗಿ ಪ್ರಯಾಣ ಆರಂಭಿಸಲಿದೆ.
ಜೂನ್ 07ರ ಬದಲಾವಣೆ: ಮರುದಿನ ಅಂದರೆ ಜೂನ್ 7 ರಂದು ಇದೇ ದಿಕ್ಕಿನಲ್ಲಿ ಸಂಚರಿಸುವ ರೈಲು ಹೌರಾ ರೈಲು ನಿಲ್ದಾಣದಿಂದ ಬರೋಬ್ಬರಿ 120 ನಿಮಿಷ (2 ಗಂಟೆ) ತಡವಾಗಿ ತನ್ನ ಸಂಚಾರವನ್ನು ಆರಂಭಿಸಲಿದೆ.
2. SMVT ಬೆಂಗಳೂರು - ಹೌರಾ ಡುರಂಟೊ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12246)
ಜೂನ್ 05ರ ಬದಲಾವಣೆ: ಬೆಂಗಳೂರಿನಿಂದ ಹೌರಾ ಕಡೆಗೆ ಸಂಚರಿಸುವ ಈ ರೈಲನ್ನು ಜೂನ್ 5 ರಂದು ಮಾರ್ಗ ಮಧ್ಯದಲ್ಲಿ ಸುಮಾರು ಎರಡು ಗಂಟೆಗಳ ಕಾಲ (120 ನಿಮಿಷ) ನಿಯಂತ್ರಣಕ್ಕೆ (Hold) ಒಳಪಡಿಸಲಾಗುತ್ತದೆ. ಇದರಿಂದಾಗಿ ಈ ರೈಲು ನಿಯಮಿತ ಸಮಯಕ್ಕಿಂತ ತಡವಾಗಿ ತಲುಪಲಿದೆ.
3. SMVT ಬೆಂಗಳೂರು - ಕಾಮಕ್ಯ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12551)
ಜೂನ್ 06ರ ಬದಲಾವಣೆ: ಬೆಂಗಳೂರಿನ SMVT ನಿಲ್ದಾಣದಿಂದ ಹೊರಡುವ ಈ ಸಾಪ್ತಾಹಿಕ ರೈಲನ್ನು ಜೂನ್ 06 ರಂದು ಮಾರ್ಗದ ನಡುವೆ ಸುಮಾರು ಮೂರು ಗಂಟೆಗಳ ಕಾಲ (180 ನಿಮಿಷ) ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲಾಗುತ್ತದೆ.
ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಮಹತ್ವದ ಸಲಹೆ
ಅತ್ಯಗತ್ಯ ರೈಲ್ವೆ ಸುರಕ್ಷತಾ ಕಾಮಗಾರಿ ಇದಾಗಿರುವುದರಿಂದ ರೈಲುಗಳ ಸಂಚಾರ ವಿಳಂಬ ಅನಿವಾರ್ಯವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ತಾತ್ಕಾಲಿಕ ವೇಳಾಪಟ್ಟಿ ಪರಿಷ್ಕರಣೆಯಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.
ಹೌರಾ ಮತ್ತು ಬೆಂಗಳೂರು ಎರಡು ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಈ ಮೇಲಿನ ಬದಲಾವಣೆಗಳನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು. ನಿಲ್ದಾಣಕ್ಕೆ ಹೊರಡುವ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಮೊಬೈಲ್ ಆ್ಯಪ್ ಮೂಲಕ ರೈಲುಗಳ ಪ್ರಸ್ತುತ ಲೈವ್ ಸ್ಟೇಟಸ್ (Live Status) ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.


