ಗ್ರಾಮೀಣ ಜನರ ಅನುಕೂಲಕ್ಕಾಗಿ ಶಸ್ತ್ರ ಚಿಕಿತ್ಸಾ ಘಟಕ ಆರಂಭ: ಶಾಸಕ ಗೂಳೀಹಟ್ಟಿ
ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಗೂಳೀಹಟ್ಟಿ ಶೇಖರ್ ಹೇಳಿದರು.
ಹೊಸದುರ್ಗ (ನ.13): ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಗೂಳೀಹಟ್ಟಿ ಶೇಖರ್ ಹೇಳಿದರು. ತಾಲೂಕಿನ ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿದರು. ಶ್ರೀರಾಂಪುರ ಹೋಬಳಿ ಕೇಂದ್ರ ಜಿಲ್ಲೆ ಗಡಿ ಭಾಗವಾಗಿದ್ದು, ಇಲ್ಲಿಂದ ನಗರ ಪ್ರದೇಶಗಳು ದೂರವಿರುವ ಕಾರಣದಿಂದ ಅಲ್ಲದೆ ಕಡು ಬಡುವರು ಹೆಚ್ಚಾಗಿರುವ ಕಾರಣ ತುರ್ತು ಸಂದರ್ಭಗಳಲ್ಲಿ ಹೆರಿಗೆಗಾಗಿ ದೂರದ ಪ್ರದೇಶಗಳಿಗೆ ತೆರಳಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ಘಟಕ ತೆರೆಯಲಾಗಿದೆ.
ಈ ಕೇಂದ್ರ ನೆರೆಯ ಆರೋಗ್ಯ ಕೇಂದ್ರಗಳಾದ ಬೆಲಗೂರು ಹಾಗೂ ಕೆಕೆಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರು ಸದುಪಯೋಗಪಡಿಸಿಕೊಳ್ಳಿ ಎಂದರು. ಈ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ಗುಣಮಟ್ಟದ ವಿದ್ಯುತ್ ಪ್ರಸರಣಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಶೀಘ್ರದಲ್ಲಿಯೇ ಕಲ್ಪಿಸಲಾಗುವುದು ಅಲ್ಲದೆ ಸಿಬ್ಬಂದಿ ಕೊರತೆಯನ್ನು ಬಗೆಹರಿಸುವಂತೆ ವೇದಿಕೆಯಲ್ಲಿದ್ದ ಡಿಎಚ್‌ಓ ರಂಗನಾಥ್‌ಅವರಿಗೆ ಸೂಚಿಸಿದರು.
Shivamogga: 268 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ ಅಧಿಕಾರಿಗಳು
ಡಿಎಚ್‌ಓ ರಂಗನಾಥ್ ಮಾತನಾಡಿ, ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಜನಸಂಖ್ಯೆ ಇದೆ. ಪ್ರತಿ ತಿಂಗಳು 150ಕ್ಕೂ ಹೆಚ್ಚು ಹೆರಿಗೆ ಕೇಸ್ ಬರುತ್ತವೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ದೂರದ ಪ್ರದೇಶಗಳಿಗೆ ಹೊಗುತ್ತಿದ್ದಾರೆ. ಇದನ್ನು ಮನಗಂಡು ಮಾನ್ಯ ಶಾಸಕರು ಹಾಗೂ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಶತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಲ್ಲಿ ಸಿಬ್ಬಂದಿಯ ಕೊರೆತ ನೀಡಿಸಲು ಹೆಚ್ಚುವರಿ ದಾದಿಯರು, ಶಸ್ತ್ರ ಚಿಕಿತ್ಸೆಗೆ ಅಗತ್ಯವಾಗಿರುವ ಅರವಳಿಕೆ ತಜ್ಞರನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಅಲ್ಲದೆ ಎಕ್ಸ್‌ರೇ ಟೆಕ್ನೀಶಯನ್ ಅವರನ್ನು 15 ದಿನದೊಳಗಾಗಿ ಸರ್ಕಾರವೇ ನೇಮಕ ಮಾಡಿಕೊಳ್ಳಲಿದೆ. ಒಂದು ವೇಳೆ ನೇಮಕ ಪ್ರಕ್ರಿಯೇ ತಡವಾದರೆ ಹೊರಗುತ್ತಿಗೆ ಆಧಾರದ ಮೇಲಾದರೂ ನೇಮಕ ಮಾಡಿಕೊಡಲಾಗುವುದು ಎಂದರು.
ಕುರುಬ ಸಮಾಜ ಪರಿಶಿಷ್ಟ ಪಂಗಡ ಸೇರ್ಪಡೆಗೆ ಸಹಮತ: ಶಾಸಕ ತಿಪ್ಪಾರೆಡ್ಡಿ
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರೇಣುಪ್ರಸಾದ್, ಟಿಎಚ್‌ಓ ರಾಘವೇಂದ್ರ ಪ್ರಸಾದ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಯೋಗೀಶ್, ಸ್ತ್ರೀರೋಗ ತಜ್ಞರಾದ ಲೋಹಿತ್, ಬಿಇಓ ಎಲ್.ಜಯಪ್ಪ, ಗ್ರಾಪಂ ಸದಸ್ಯರುಗಳು, ಕೆಕೆಪುರ ಹಾಗೂ ಬೆಲಗೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಅರವಳಿಕೆ ತಜ್ಞರು ಹಾಗೂ ಸಿಬ್ಬಂದಿ ಹಾಜರಿದ್ದರು.