Shivamogga: 268 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ ಅಧಿಕಾರಿಗಳು
ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟಹೆಚ್ಚಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಸರ್ಕಾರಿ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಸೂಚನೆ ನೀಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 268 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ (ನ.13): ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟಹೆಚ್ಚಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಸರ್ಕಾರಿ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಸೂಚನೆ ನೀಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 268 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಸರ್ಕಾರಿ ಶಾಲಾ-ಕಾಲೇಜುಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ. ತಮ್ಮ ಭಾ ಗದ ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲಾ ಮಟ್ಟದಿಂದ ತಾಲೂಕು ಮಟ್ಟದ ಎಲ್ಲ ಹಂತದ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಸೂಚನೆ ಹೊರಡಿಸಿದೆ. ಸರ್ಕಾರ ಸೂಚನೆಯಂತೆ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ಶಾಲೆಗಳ ದತ್ತು ಸ್ವೀಕಾರಕ್ಕೆ ಮುಂದಾಗಿದ್ದು, ಈವರೆಗೆ 268 ಶಾಲೆಗಳನ್ನು ದತ್ತು ನೀಡಲಾಗಿದೆ.
Shivamogga: ಅಂಗನವಾಡಿ ನೌಕರರಿಗೆ ಸಂಬಳ ಕೊಡದ ಸರ್ಕಾರ?!
ಶಿಕಾರಿಪುರದಲ್ಲೇ ಹೆಚ್ಚು: ಜಿಲ್ಲೆಯಲ್ಲಿ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿರುವುದರಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಕ್ಷೇತ್ರವಾದ ಶಿಕಾರಿಪುರ ತಾಲೂಕು ಮುಂಚೂಣಿಯ ಲ್ಲಿದೆ. ಇಲ್ಲಿ 46 ಅಧಿಕಾರಿಗಳು ತಲಾ ಒಂದೊಂದು ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಸೊರಬ ತಾಲೂಕು ವ್ಯಾಪ್ತಿಯ 35 ಅಧಿಕಾರಿಗಳು ಶಾಲೆಗಳನ್ನು, ಸಾಗರ ತಾಲೂಕು ವ್ಯಾಪ್ತಿಯ 35 ಅಧಿಕಾರಿಗಳು, ಭದ್ರಾವತಿ ತಾಲೂಕು ವ್ಯಾಪ್ತಿಯ 34 ಅಧಿಕಾರಿಗಳು, ಶಿವಮೊಗ್ಗ ತಾಲೂಕು ವ್ಯಾಪ್ತಿಯ 33 ಶಾಲೆಗಳನ್ನು, ತೀರ್ಥಹಳ್ಳಿ ತಾಲೂಕು ವ್ಯಾಪ್ತಿ 25 ಅಧಿಕಾರಿಗಳು, ಹೊಸನಗರ ತಾಲೂಕು ವ್ಯಾಪ್ತಿಯ 21 ಅಧಿಕಾರಿಗಳು ತಲಾ ಒಂದೊಂದು ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಇಂದು ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ಶಾಲೆಗಳನ್ನು ದತ್ತು ನೀಡಿರುವ ಅಂಕಿ-ಅಂಶವಾದರೆ, ಇನ್ನೂ ಜಿಲ್ಲಾ ಮಟ್ಟದ 39 ಅಧಿಕಾರಿಗಳು ತಲಾ ಒಂದರಂತೆ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ ಎಂಬುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ಮಾಹಿತಿ.
ಏನಿದು ಶೈಕ್ಷಣಿಕ ದತ್ತು ಕಾರ್ಯಕ್ರಮ?: ಶಾಲಾ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ ಸರ್ಕಾರದ ಎಲ್ಲ ಇಲಾಖೆಗಳ ರಾಜ್ಯ, ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಸೇರಿದ ಒಂದು ಸರ್ಕಾರಿ, ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು ದತ್ತು ಪಡೆಯುವುದು. ತಮ್ಮ ಕೆಲಸದ ಸ್ಥಳದಲ್ಲಿ ಸ್ಥಳೀಯವಾಗಿ ಇರುವ ಶಾಲಾ-ಕಾಲೇಜುಗಳನ್ನು ದತ್ತು ಪಡೆಯುವುದು. ಅಧಿಕಾರಿಗಳು ತಾವು ದತ್ತು ಪಡೆದ ಶಾಲೆಗಳಿಗೆ ತಿಂಗಳಿಗೆ ಕನಿಷ್ಟ ಒಂದು ಅಥವಾ ಎರಡು ಬಾರಿ ಭೇಟಿ ನೀಡುವುದು.
ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ, ಸಲಹೆ, ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದು, ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿಗಳನ್ನು ನಿಗದಿಪಡಿಸಿಕೊಂಡು, ಅವುಗಳನ್ನು ಸಾಧಿಸಲು ಪ್ರೇರಣೆ ನೀಡುವುದು, ಅಧಿಕಾರಿಗಳು ತಮ್ಮ ವೃತ್ತಿಯ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಳ್ಳುವುದು. ಪ್ರಾಂಶುಪಾಲರು, ಶಿಕ್ಷಕರ ಜೊತೆ ಸಂವಾದ ನಡೆಸಿ, ಶಾಲೆ ಕೈಗೊಳ್ಳುತ್ತಿರುವ ಉತ್ತಮ ಕಾರ್ಯಗಳ ಮಾಹಿತಿ ಪಡೆದು, ಅಗತ್ಯವಾದ ಮಾರ್ಗದರ್ಶನ, ಪ್ರೇರಣೆ ನೀಡುವುದು.
ಶಾಲೆ, ಕಾಲೇಜಿನ ಕುಂದು-ಕೊರತೆಗಳನ್ನು ಸಾವಧಾನದಿಂದ ಆಲಿಸಿ, ಗಮನಿಸಿ, ಅವುಗಳ ನಿವಾರಣೆಗೆ ಸರ್ಕಾರ ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ದಾನಿಗಳ ನೆರವಿನಿಂದ ಅಗತ್ಯ ಕ್ರಮ ಕೈಗೊಳ್ಳುವುದು. ವಿದ್ಯಾರ್ಥಿಗಳ ಸಾಮಾರ್ಥ್ಯ ವೃದ್ಧಿ ಚಟುವಟಿಕೆಗಳಿಗೆ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡುವುದು. ಕಲಿಕಾ ಪೂರಕ ಚಟುವಟಿಕೆ ಗಳಿಗೆ ಅಗತ್ಯವಾದ ಸಲಹೆ, ಮಾರ್ಗದರ್ಶನ ನೀಡುವುದು. ಅಕ್ಷರ ದಾಸೋಹದ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ಮುಖ್ಯ ಶಿಕ್ಷಕರಿಗೆ ಸಲಹೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
Shivamogga: ಶಾಮನೂರು ನೀಡಿದ್ದ ಆನೆ ಸಕ್ರೆಬೈಲ್ ಬಿಡಾರದಲ್ಲಿ ಸಾವು
ಅಧಿಕಾರಿಗಳು ದತ್ತು ಸ್ವೀಕರಿಸಿದ ಸರ್ಕಾರಿ ಶಾಲೆಗಳು ಹೊರತು ಪಡಿಸಿ ಶಿಕ್ಷಣ ಇಲಾಖೆಯ ವಿವಿಧ ಮಟ್ಟದ ಅಧಿಕಾರಿಗಳು ಪ್ರತಿ ಶಾಲೆಗಳಿಗೆ ಭೇಟಿ ನೀಡಿ, ಪ್ರಗತಿ ಗಮನಿಸುವ ಕೆಲಸ ನಿರಂತರವಾಗಿ ಆಗುತ್ತಿದೆ. ಅಧಿಕಾರಿಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಗಮನಕ್ಕೆ ಬರಲಿದೆ. ಮಕ್ಕಳ ಜೊತೆ ಸಂವಾದ ಮಾಡುವು ದರಿಂದ ಮಕ್ಕಳ ಕಲಿಕಾ ಗುಣಮಟ್ಟವೂ ಹೆಚ್ಚುತ್ತದೆ. ಜೊತೆಗೆ ಶಿಕ್ಷಕರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಸಹಕಾರಿ ಆಗಲಿದೆ.
-ಪರಮೇಶ್ವರಪ್ಪ, ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ