Asianet Suvarna News Asianet Suvarna News

ಕುರುಬ ಸಮಾಜ ಪರಿಶಿಷ್ಟ ಪಂಗಡ ಸೇರ್ಪಡೆಗೆ ಸಹಮತ: ಶಾಸಕ ತಿಪ್ಪಾರೆಡ್ಡಿ

ಕುರುಬ ಸಮಾಜವನ್ನು ಪರಿಶಿಷ್ಟಪಂಗಡಕ್ಕೆ ಸೇರ್ಪಡೆ ಮಾಡುವ ಸಂಬಂಧ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಿದರೆ ಸಿಎಂ ಬಳಿಗೆ ತೆರಳಲು ತಾವು ಸಿದ್ಧರಿರುವುದಾಗಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

Kuruba Community agreed to the inclusion of Scheduled Tribes Says Mla GH Thippareddy gvd
Author
First Published Nov 12, 2022, 2:33 PM IST

ಚಿತ್ರದುರ್ಗ (ನ.12): ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಸಂಬಂಧ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಿದರೆ ಸಿಎಂ ಬಳಿಗೆ ತೆರಳಲು ತಾವು ಸಿದ್ಧರಿರುವುದಾಗಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು. ಇಲ್ಲಿನ ತರಾಸು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಚಾರದಲ್ಲಿ ಸಮುದಾಯದ ನಾಯಕರ ಒಗ್ಗೂಡಿಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯವಿದೆ ಎಂದರು. 

ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಜಾತಿ ಪಂಥಗಳ ಮೀರಿದ ದಾರ್ಶನಿಕ. ಮಹನೀಯರ ವಿಚಾರಧಾರೆಗಳು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪಲಿ ಎಂಬ ಕಾರಣಕ್ಕೆ ಸರ್ಕಾರ ಜಯಂತಿ ಆಚರಿಸುತ್ತಿದೆ. ಇಂದು ಒನಕೆ ಓಬವ್ವ ಜಯಂತಿ ಸಹ ಆಚರಿಸಲಾಗಿದೆ. ಕನಕದಾಸರು ಜಾತಿ, ಪದ್ದತಿಯನ್ನು ನಿರ್ಮೂಲನೆ ಮಾಡಲು ಹೋರಾಟ ಮಾಡಿದರು. ಅಂಬೇಡ್ಕರ್‌ ಸಂವಿಧಾನ ರಚಿಸಿ ಸಮಾಜದ ನಿಮ್ನ ವರ್ಗದವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿದರು. ಬಸವಣ್ಣವರ ತತ್ವಗಳ ಆಶಯ ಸಂವಿಧಾನದಲ್ಲಿ ಅಕಡವಾಗಿದೆ ಎಂದರು.

Shivamogga: ಅಂಗನವಾಡಿ ನೌಕರರಿಗೆ ಸಂಬಳ ಕೊಡದ ಸರ್ಕಾರ?!

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಕನಕದಾಸರು ಹುಟ್ಟಿನಿಂದ ಶ್ರೇಷ್ಠರಾಗಲಿಲ್ಲ. ಮೊದಲು ತಂದೆ ತಾಯಿಯ ಪ್ರೀತಿಯ ತಿಮ್ಮಪ್ಪನಾಗಿ, ವಿಜಯನಗರ ಸಾಮ್ರಾಜ್ಯದಲ್ಲಿ ನಾಯಕನಾಗಿ ದುಡಿದರು. ಬದುಕಿನಲ್ಲಿ ಸಾಕಷ್ಟುಬದಲಾವಣೆಗೊಂಡು ಸಮಾಜದ ಸುಧಾರಣೆಗಾಗಿ ಪ್ರಯತ್ನಿಸಿ, ಆಧ್ಯಾತ್ಮಿಕ ಅನುಭೂತಿ ಪಡೆದುಕೊಂಡು ದಾಸ ಶ್ರೇಷ್ಠರಾದರು. 16ನೇ ಶತಮಾನದಲ್ಲಿ ಇದ್ದ ಸಾಮಾಜಿಕ ಪರಿಸ್ಥಿತಿಯ ಬದಲಾವಣೆ ಪ್ರಯತ್ನಿಸಿದರು. ಈಗಲೂ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿ ತಾರತಮ್ಯಗಳು ನಡೆಯುತ್ತವೆ. ಆದರೆ ಕನಕದಾಸರು ಆತ್ಮ, ಜೀವ,ನೀರು, ಗಾಳಿ ಯಾವ ಕುಲ ಎಂದು ಪ್ರಶ್ನಿಸುವ ಮೂಲಕ ಕುಲವ್ಯವಸ್ಥೆಯನ್ನು ತೊಡೆದು ಹಾಕಿದರು ಎಂದರು.

ಕನಕದಾಸರ ಕುರಿತು ಉಪನ್ಯಾಸ ನೀಡಿದ ಪ್ರೊ.ಸಿ.ಕೆ.ಮಹೇಶ್‌, ಕನಕ ದಾಸನಲ್ಲ, ಕೆಳ ವರ್ಗಗಳ ನಾಯಕ. ಜನರ ಒಳಿತಿಗಾಗಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ. ರಾಜ್ಯಾಧಿಕಾರವಿದ್ದ ವೇಳೆಯಲ್ಲಿ ಕನಕನಿಗೆ ಅಸ್ಪೃಶ್ಯತೆ ಸನ್ನಿವೇಶ ಉಂಟಾಗಲಿಲ್ಲ. ಆದರೆ ಆಧ್ಯಾತ್ಮಕ ಸಾಧನೆ ಮಾಡಲು ಹೊರಟ ಕನಕನಿಗೆ ಉಡುಪಿಯಲ್ಲಿ ಅಸ್ಪೃಶ್ಯತೆಯ ಕಹಿ ಘಟನೆ ಎದುರಾಯಿತು ಎಂದರು.

ಇಂದಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಯಾವ ಸಿದ್ಧಾಂತಗಳು ಕನಕದಾಸರಿಗೆ ಅವಮಾನ ಮಾಡಿದ್ದವೋ ಅವು ಇಂದಿಗೂ ಮುಂದುವರಿದಿವೆ. ಇದನ್ನು ಒಪ್ಪಿ ಸುಧಾರಣೆ ಪ್ರಯತ್ನಿಸಬೇಕು. ಉಡುಪಿಯಲ್ಲಿ ಕನಕ ಕಿಂಡಿ ಕುರಿತು ವಿದ್ವಾಂಸರಲ್ಲಿ ಜಿಜ್ಞಾಸೆಯಿದೆ. ಭೌತಿಕ ಬಲವಿಲ್ಲದೆ ವಸ್ತುಗಳು ಚಲಿಸುವುದಿಲ್ಲ ಎಂಬುದು ವಿಜ್ಞಾನದ ಸಾರ್ವತ್ರಿಕ ಸತ್ಯ. ಉಡುಪಿಯ ಕೃಷ್ಣನ ವಿಗ್ರಹದ ಚಲನೆಯ ಭೌತಿಕ ವಿವರಣೆ ಇಂದಿಗೂ ಸ್ಪಷ್ಟವಾಗಿಲ್ಲ. ಬದುಕಿನ ವೈರಾಗ್ಯ ತಾಳಿ, ರಾಜಮಾರ್ಗ ಬಿಟ್ಟು, ಭಕ್ತಿ ಮಾರ್ಗ ಹಿಡಿದ ಕನಕರಿಗೆ ಜಾತಿ ಕಾರಣದಿಂದ ಅವಮಾನವಾದದ್ದು ಸತ್ಯ. ತಳ ವರ್ಗದವರು ರಾಜಕೀಯ ಅಧಿಕಾರ ಹಿಡಿಯುವವರೆಗೂ ದೇಶದಲ್ಲಿ ಅಸ್ಪೃಶ್ಯತೆ ತೊಡೆದು ಹಾಕಲು ಸಾಧ್ಯವಾಗುವುದಿಲ್ಲ ಎಂದರು.

ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಸದಸ್ಯರಾದ ಪಿ.ಕೆ.ಮೀನಾಕ್ಷಿ, ಮಲ್ಲಿಕಾರ್ಜುನ್‌, ಪೂಜಾ ಮಂಜುನಾಥ, ಜಿಪಂ ಸಿಇಓ ದಿವಾಕರ್‌, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಧಿಕಾರಿ ಆರ್‌.ಚಂದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ಮಲ್ಲಿಕಾರ್ಜುನ್‌, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್‌.ಶ್ರೀರಾಮ್‌, ಕರ್ನಾಟಕ ಪ್ರದೇಶ ಕುರುಬರ ಸಂಘ ಉಪಾಧ್ಯಕ್ಷ ಬಿ.ಟಿ.ಜಗದೀಶ್‌ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಕುರುಬ ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.

ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್

ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದಿಂದ ಕಲಾವಿದರು ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ತರಾಸು ರಂಗಮಂದಿರದವರೆಗೂ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.

Follow Us:
Download App:
  • android
  • ios