ಸುಳ್ಯ (ಅ.11):  ಕೊರೋನಾ ಆತಂಕದ ಮಧ್ಯೆ ಶಾಲೆಗಳನ್ನ ಆರಂಭಿಸೋದು ಸದ್ಯ ಸರ್ಕಾರಕ್ಕೆ ಸವಾಲಾಗಿದೆ. ಹೀಗಾಗಿ ಅನ್ ಲೈನ್ ತರಗತಿಗಳ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡಲಾಗ್ತಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಆ ಗ್ರಾಮದ ಮಕ್ಕಳಿಗೆ ಮಾತ್ರ ಆನ್ ಲೈನ್ ತರಗತಿಗಳಿಗೆ ಹಾಜರಾಗೋದೇ ಒಂಥರಾ ಸವಾಲಿನ ಕೆಲಸ.  ಸುಳ್ಯ ತಾಲೂಕು ಕೇಂದ್ರದ ಕಟ್ಟ ಕಡೆಯ ಗ್ರಾಮ ಬಾಳುಗೋಡು. 

ಈ  ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತಿದೆ. ಈ ಭಾಗದ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಇದೀಗ ಅನಿವಾರ್ಯವಾಗಿ ಅರಣ್ಯ ಭಾಗದ ಗುಡ್ಡಗಳಿಗೆ ತೆರಳಿ  ಮರ  ಹತ್ತಿ ನೆಟ್‍ವರ್ಕ್‍ಗಾಗಿ ಸರ್ಕಸ್ ಮಾಡಿ ಹರಸಾಹಸ ಪಡುತ್ತಿದ್ದಾರೆ. ಬಾಳುಗೋಡಿನ ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ನೆಟ್ ವರ್ಕ್ ದೊರಕುವ ಎತ್ತರದ ಅರಣ್ಯದಲ್ಲಿ ಟೆಂಟ್ ನಿರ್ಮಿಸಿ ಬೋಧನೆ ಕೇಳುತ್ತಿದ್ದಾರೆ. ಹಾಗಾಗಿ ಮರವೇರಿದರೆ ಮಾತ್ರ ಈ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಅದಕ್ಕಾಗಿ ದಟ್ಟ ಅರಣ್ಯದೊಳಗೆ ನೆಟ್‍ವರ್ಕ್ ಹುಡುಕಾಟ ದಿನನಿತ್ಯ ಗೋಳಾಗಿ ಪರಿಣಮಿಸಿದೆ.

ವಿದ್ಯಾಗಮದಿಂದ ಹೆಚ್ಚುತ್ತಿದೆ ಶಿಕ್ಷಕರ ಸಾವು; ಸ್ಥಗಿತಕ್ಕೆ ಕೇಳಿ ಬರುತ್ತಿದೆ ಒತ್ತಾಯ
               
ಬಾಳುಗೋಡು ಪ್ರದೇಶದಲ್ಲಿ ಯಾವುದೇ ಸಿಮ್‍ನ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆರ್ಟ್‍ವರ್ಕ್ ಇಲ್ಲದಿರುವುದರಿಂದ ಈ ಹಿಂದಿನಿಂದಲೇ ಇಲ್ಲಿನ  ವಾಸಿಗಳು   ಕಂಗಾಲಾಗಿದ್ದರು. ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಕಲಿಯಬೇಕಾದುದರಿಂದ ನೆಟ್‍ವರ್ಕ್‍ನ ಮೊರೆ ಹೋಗುವುದು ಮಕ್ಕಳಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಈ ಪರಿಸರದ ವಿದ್ಯಾರ್ಥಿಗಳು ಗುಡ್ಡ ಹತ್ತಿ ನೆಟ್‍ಗಾಗಿ ತಡಕಾಡುವಂತಾಗಿದೆ. ಇಲ್ಲಿನ  ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ಪಕ್ಕದ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡು ಆನ್‍ಲೈನ್ ಪಾಠ ಪ್ರವಚನ ಆಲಿಸುತ್ತಿದ್ದಾರೆ. ಇನ್ನು ಕೆಲವರು ಕಾಡಿನೊಳಗೆ ಪ್ರವೇಶ ಪಡೆದು ಮರ ಏರಿ ಮೊಬೈಲ್‍ನಲ್ಲಿ ಪಾಠ ಕೇಳುತ್ತಿದ್ದಾರೆ.ಈ ಭಾಗದ ಇತರ ವಿದ್ಯಾರ್ಥಿಗಳು ಮನೆಯ ಛಾವಣೆ ಏರಿ, ಗುಡ್ಡ ಏರಿ ನೆಟ್‍ವರ್ಕ್ ಹುಡುಕಾಡಿ ಪಾಠ ಕೇಳುತ್ತಿದ್ದಾರೆ.

ಜನಾ​ಕ್ರೋ​ಶಕ್ಕೆ ಮಣಿದ ಸರ್ಕಾ​ರ: ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್‌! ...

ಹಲವು ವರ್ಷಗಳ ಹಿಂದೆಯೇ ನೆಟ್ ಸಮಸ್ಯೆಯನ್ನು ವಿವರಿಸಿ ಜನಪ್ರತಿನಿಧಿಗಳಿಗೆ ಜನತೆ ಮನವಿ ಆದರೆ ಇದಕ್ಕೆ ಸ್ಪಂಧನೆ ದೊರಕಿಲ್ಲ. ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನೇ ನೋಡಲಾಗದ ಸ್ಥಿತಿ ನಮ್ಮದಾಗಿದೆ. ಮಾತನಾಡಲು ನೆಟ್‍ವರ್ಕ್ ಸಿಗುತ್ತಿಲ್ಲ. ಇನ್ನು ಇಂಟರ್‍ನೆಟ್ ಬಳಸುವುದು ಕನಸಿನ ಮಾತಾಗಿದೆ. ಲಾಕ್‍ಡೌನ್ ಬಳಿಕ  ವಿದ್ಯಾಭ್ಯಾಸಕ್ಕಾಗಿ ಇಂಟರ್‍ನೆಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ನೆಟ್ ಸಿಗದ ಕಾರಣ ಸಮಸ್ಯೆ ಎದುರಾಗಿದೆ. ಮೊಬೈಲ್ ಹಿಡಿದು ಎತ್ತರದ ಪ್ರದೇಶ, ಗುಡ್ಡ, ಮನೆಯ ಮಾಡಿಗೆ ಹತ್ತಿ ಪರದಾಡಿಕೊಂಡು ಆನ್‍ಲೈನ್ ತರಗತಿ ಪಡೆಯುತ್ತಿದ್ದೇವೆ. ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

 ಬಾಳುಗೋಡು ಸೇರಿ ಸಮೀಪದ ಕೊಲ್ಲಮೊಗ್ರು-ಕಲ್ಮಕಾರು  ಗ್ರಾಮೀಣ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾದಾಗ ನೆಟ್‍ವರ್ಕ್ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಇಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಸಂಪರ್ಕ ವ್ಯವಸ್ಥೆಗೆ ಅಡ್ಡಿಯಾಗಿದೆ. ಬಿಎಸ್‍ಎನ್‍ಎಲ್ ಟವರ್‍ನ ಜನರೇಟರ್‍ಗೆ ಈ ಹಿಂದೆ ಗ್ರಾಮಸ್ಥರು ಡೀಸೆಲ್ ಒದಗಿಸುತ್ತಿದ್ದರು.ಆದರೆ ಪ್ರಸ್ತುತ ಬ್ಯಾಟರಿ ಹಾಳಾದ ಕಾರಣ ಜನರೇಟರ್ ವ್ಯವಸ್ಥೆ ಫಲ ನೀಡುತ್ತಿಲ್ಲ ಆದುದರಿಂದ ಶೀಘ್ರ ನೂತನ ಬ್ಯಾಟರಿ ಒದಗಿಸಲು ಜನತೆ ವಿನಂತಿಸಿದ್ದಾರೆ.ಕೊಲ್ಲಮೊಗ್ರುವಿನಲ್ಲಿ ಖಾಸಾಗಿ ಟವರ್ ಚಾಲ್ತಿಯಲ್ಲಿ ಇದ್ದರೂ ಅದರ ಸಂಪರ್ಕ ಕೇವಲ ಪೇಟೆಗೆ ಸೀಮಿತವಾಗಿದೆ.ಇತರ ಗ್ರಾಮೀಣ ಜನರು ಸಂಪರ್ಕ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ.