ಕೊಪ್ಪಳದ ಬಹದ್ದೂರಬಂಡಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರ ವರ್ಗಾವಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆಯ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ್ದರು.
ಕೊಪ್ಪಳ: ಇತ್ತೀಚೆಗೆ ಮಕ್ಕಳನ್ನು ತನ್ನ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಪ್ರವಾಸ ಕರೆದುಕೊಂಡು ಹೋಗಿ ಸುದ್ದಿಯಾಗಿದ್ದ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಬೀರಪ್ಪ ಅಂಡಗಿ ವರ್ಗಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಾಲಾ ಮುಖ್ಯ ಶಿಕ್ಷಕರನ್ನ ಕಳಸಲ್ಲ ಅಂತಾ ಶಾಲಾ ಗೇಟ್ ಬಂದ ಮಾಡಿ ಪ್ರತಿಭಟನೆ ಕೂಡ ಮಾಡಿದ್ದಾರೆ. ಬಹದ್ದೂರ ಬಂಡಿ ಗ್ರಾಮದ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಮುಖ್ಯೋಪಾಧ್ಯಾಯ ರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಅಲ್ಲಿಂದ ವರ್ಗಾವಣೆಯಾದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಶಾಲೆಯ ಗೇಟ್ ಬಂದ್ ಮಾಡಿ ನಮಗೆ ಬೀರಪ್ಪ ಸರ್ ಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಗೆ ಶಿಕ್ಷಕ ಕೂಡ ಕಣ್ಣೀರಾದ ಘಟನೆ ನಡೆಯಿತು.
ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ ಭಾಗ್ಯ ಕರುಣಿಸಿದ್ದ ಶಿಕ್ಷಕ
ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಅವರು ಇತ್ತೀಚಿಗೆ ತಮ್ಮ ಶಾಲೆಯ 24 ವಿದ್ಯಾರ್ಥಿಗಳನ್ನು ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದನ್ನು ರಾಜ್ಯಮಕ್ಕಳ ರಕ್ಷಣಾ ಆಯೋಗ ಅಭಿನಂದಿಸಿತ್ತು.
ಈ ಕುರಿತಂತೆ ಅಭಿನಂದನಾ ಪತ್ರ ಬರೆದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು, ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿಯ ಕಾರ್ಯವನ್ನು ಶ್ಲಾಘಿಸಿದ್ದರು. ಬೀರಪ್ಪ ಅಂಡಗಿ ತಮ್ಮ ಶಾಲೆಯ 24 ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಜಿಂದಾಲ್ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಎರಡು ದಿನಗಳ ಕಾಲ ವಿಧಾನಸೌಧ, ಲಾಲ್‌ಬಾಗ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ತೋರಿಸಿದ್ದರು.
ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೋಸಂಬೆ ಅವರು ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರ ಕಾರ್ಯವನ್ನು ಶ್ವಾಘಿಸಿ ಅಭಿನಂದನಾ ಪತ್ರ ಕಳಿಸಿದ್ದರು.
ಪರೀಕ್ಷೆ ಮೂಲಕ ಆಯ್ಕೆ:
ಬೀರಪ್ಪ ಅಂಡಗಿ ಅವರು ವಿದ್ಯಾರ್ಥಿಗಳಿಗೆ ವಿಮಾನಯಾನದ ಅವಕಾಶ ಕಲ್ಪಿಸಲು ಕಳೆದ ಏಪ್ರಿಲ್‌ನಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದರು. ಅದರಲ್ಲಿ ತೇರ್ಗಡೆಯಾದ 24 ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಪ್ರವಾಸಕ್ಕೆ ಬೆಂಗಳೂರಿಗೆ ಕರೆದೊಯ್ಯಲಾಯಿತು. 220 ಮಕ್ಕಳು ಪರೀಕ್ಷೆ ಬರೆದಿದ್ದರು.
ಬೀರಪ್ಪ ಅಂಡಗಿ ಅವರು 3.5 ಲಕ್ಷ ರು.ವ್ಯಯಿಸಿ ಚಾರ್ಟರ್ಡ್ ವಿಮಾನವನ್ನು ಬುಕ್ ಮಾಡಿದ್ದರಂತೆ. ಬಳಿಕ, ಉಳಿದ ವೆಚ್ಚ ಸೇರಿ 5 ಲಕ್ಷ ರು.ವೆಚ್ಚ ಬರಬಹುದೆಂದು ಅವರು ತಿಳಿಸಿದ್ದರು. ಶಾಲೆಯ ಮಕ್ಕಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರಲ್ಲದೇ ಬಿಸಿಯೂಟ ನೌಕರರನ್ನೂ ಸೇರಿ 40 ಜನರನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದಿದ್ದರು. ಬೀರಪ್ಪ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.


