ಗದಗ ಜಿಲ್ಲೆಯ ಕಪ್ಪತಗುಡ್ಡ ಅಭಯಾರಣ್ಯದಿಂದ 55 ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಕೈಬಿಟ್ಟಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದೆ. ಈ ಪ್ರದೇಶವನ್ನು ಮರಳಿ ಅಭಯಾರಣ್ಯಕ್ಕೆ ಸೇರಿಸಲು ಆದೇಶಿಸುವ ಮೂಲಕ, ಗಣಿಗಾರಿಕೆಯ ಗಂಡಾಂತರವನ್ನು ತಪ್ಪಿಸಿ ಐತಿಹಾಸಿಕ ತೀರ್ಪು ನೀಡಿದೆ.

ಗದಗ (ಮಾ.11): ಗದಗ ಜಿಲ್ಲೆ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿ ಬಿಟ್ಟು ಹೋಗಿರುವ 55 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವನ್ನು ಪುನಃ ಅಭಯಾರಣ್ಯ ವ್ಯಾಪ್ತಿಗೆ ಸೇರಿಸಿ ಎಂದು ಹೈಕೋರ್ಟ್‌ ಆದೇಶಿಸುವ ಮೂಲಕ ಗಣಿಗಾರಿಕೆಯ ಗಂಡಾಂತರ ತಪ್ಪಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾ. ಸಿ.ಎಂ.ಪೂಣಚ್ಚ ಅವರ ಪೀಠ, ಉತ್ತರ ಕರ್ನಾಟಕದ ಸಹ್ಯಾದ್ರಿ, ಆಯುರ್ವೇದ ಸಸ್ಯಕಾಶಿ ಎಂದೇ ಖ್ಯಾತಿಯಾಗಿರುವ ಕಪ್ಪತಗುಡ್ಡವನ್ನು ಗಣಿಗಾರಿಕೆಯ ಕಪಿಮುಷ್ಠಿಯಿಂದ ಮುಕ್ತಗೊಳಿಸುವಲ್ಲಿ ಐತಿಹಾಸಿಕ ತೀರ್ಪು ನೀಡಿದೆ.

ಘೋಷಣೆಯಾಗಿದ್ದ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿಗೆ ಒಳಪಡುತ್ತಿದ್ದ 55 ಚ.ಕಿ.ಮೀ ಅರಣ್ಯವನ್ನು ಸರ್ಕಾರ ಪರೋಕ್ಷವಾಗಿ ಗಣಿಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಯಾರಣ್ಯ ಘೋಷಣಾ ಪ್ರದೇಶ ವ್ಯಾಪ್ತಿಯಿಂದ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಪರಿಸರ ಹೋರಾಟಗಾರರು ಅರ್ಜಿ ಸಲ್ಲಿಸಿದ್ದರು.

ಸ್ಟೋನ್ ಕ್ರಶರ್ ಲಾಬಿ:

ಹಿಂದೆ ಕಪ್ಪತ್ತಗುಡ್ಡ ವನ್ಯಧಾಮಕ್ಕೆ ಹೊಂದಿಕೊಂಡಿದ್ದ ಹಲವಾರು ಸ್ಟೋನ್ ಕ್ರಶರ್ ಗಳನ್ನು ಸುಪ್ರೀಂ ಕೋರ್ಟನ ಆದೇಶದಂತೆ ಇತ್ತೀಚೆಗಷ್ಟೇ ಬಂದ್‌ ಮಾಡಲಾಗಿತ್ತು. ಪುನಃ ಅವುಗಳ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಕ್ರಶರ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳು, ಅರಣ್ಯ ಭೂಮಿಯನ್ನು ಕಡಿತಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟರು.

ಈ ಪ್ರಕರಣವನ್ನು ಸುಧೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಯಾವುದೇ ವನ್ಯಧಾಮದಿಂದ ಭೂಮಿಯನ್ನು ಕೈಬಿಡುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಅದರ ಅಡಿಯಲ್ಲಿಯೇ ಎಲ್ಲವೂ ನಡೆಯಬೇಕು. ಆದರೆ ಕಪ್ಪತ್ತಗುಡ್ಡ ವಿಷಯದಲ್ಲಿ ನಿಯಮ ಗಾಳಿಗೆ ತೂರಿ ವಿಸ್ತೀರ್ಣ (55 ಚದರ ಕಿಲೋ ಮೀಟರ್) ಕಡಿತಗೊಳಿಸಿರುವುದು ಅಕ್ಷಮ್ಯ ಮತ್ತು ಕಾನೂನುಬಾಹಿರ. ತಕ್ಷಣವೇ ಒಟ್ಟು ಘೋಷಣೆಯಾಗಬೇಕಿದ್ದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿರುವ 55 ಚದರ ಕಿಲೋ ಮೀಟರ್, ಅರಣ್ಯ ಪ್ರದೇಶವನ್ನು ಪುನಃ ಅಭಯಾರಣ್ಯ ವ್ಯಾಪ್ತಿಗೆ ಸೇರಿಸುವಂತೆ ಹೈಕೋರ್ಟನ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠ ಸೂಚಿಸಿದೆ.

ನಿರಂತರ ಪ್ರಯತ್ನ:

ಕಪ್ಪತಗುಡ್ಡದ ಹೊಟ್ಟೆಯಲ್ಲಿರುವ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಖಾಸಗಿ ಕಂಪನಿಯೊಂದು ಕಳೆದ ಹಲವಾರು ವರ್ಷಗಳಿಂದ ಕಪ್ಪತ್ತಗುಡ್ಡದಲ್ಲಿರುವ ಬಂಗಾರದ ಅದಿರನ್ನು ಪಡೆಯಬೇಕು ಎಂದು ಹವಣಿಸುತ್ತಲೇ ಇದೆ. ಇದಕ್ಕಾಗಿ ಸಾಕಷ್ಟು ಕಾನೂನು ತೊಡಕುಗಳನ್ನು ಸೃಷ್ಟಿಸಿ ಹೋರಾಟಗಳನ್ನು ಹತ್ತಿಕ್ಕುತ್ತಲೇ ಬಂದಿದೆ. ಅದರೊಟ್ಟಿಗೆ ಆಳುವ ಸರ್ಕಾರಗಳ ಮೇಲೆ ವಿವಿಧ ರೀತಿಯ ಒತ್ತಡಗಳನ್ನು ಕಾಲಕಾಲಕ್ಕೆ ತರುತ್ತಲೇ ಇರುವುದನ್ನು ಸ್ಮರಿಸಬಹುದು.

ಸರ್ಕಾರ ತೆರೆಮರೆಯಲ್ಲಿ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಯತ್ನಿಸಿತ್ತು ಎನ್ನುವುದು ಈ ಹಿಂದಿನ ಸರ್ಕಾರದ ನಡೆಗಳನ್ನು ನೋಡಿದಾಗಲೇ ಸ್ಪಷ್ಟವಾಗುತ್ತದೆ. ನ್ಯಾಯಾಲಯ ಈ ಕುರಿತು ಸ್ಪಷ್ಟ ಸಂದೇಶ ನೀಡಿದ್ದು, ಕಪ್ಪತ್ತಗುಡ್ಡ ಉಳಿಯಲು ಸಾಧ್ಯವಾಗಲಿದೆ.

ರಾಜೂ ಖಾನಪ್ಪನವರ, ಸಾಮಾಜಿಕ ಹೋರಾಟಗಾರ