ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರೇಯಸಿ ಹಾಗೂ ಆಕೆಯ ಪೋಷಕರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ, ಪ್ರೇಯಸಿಯ ತಾಯಿ ಮಂಜಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಗಂಭೀರವಾಗಿ ಗಾಯಗೊಂಡಿರುವ ಪ್ರೇಯಸಿ ಸುಮಲತಾ ಮತ್ತು ಆಕೆಯ ತಂದೆಗೆ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಆಟೋ ಚಾಲಕ ಪಾಂಡು ಸದ್ಯ ಪೊಲೀಸರ ವಶದಲ್ಲಿದ್ದಾನೆ.

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರೇಯಸಿ ಹಾಗೂ ಆಕೆಯ ತಂದೆ ತಾಯಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರೇಯಸಿ ಸುಮಲತಾ ತಾಯಿ ಮಂಜಮ್ಮ ಮೃತಪಟ್ಟಿದ್ದಾರೆ. ಘಟನೆ ಬಳಿಕ ಅವರನ್ನು ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅಂದರೆ ಮಾರ್ಚ್ 11ರಂದು ಚಿಕಿತ್ಸೆ ಪಲಕರಿಯಾಗದೆ ಮಂಜಮ್ಮ ಅಸುನೀಗಿದ್ದಾರೆ. ಇನ್ನು ಗಂಬೀರವಾಗಿ ಗಾಯಗೊಂಡಿರುವ ಪ್ರೇಯಸಿ ಸುಮಲತಾ ಹಾಗೂ ತಂದೆಗೆ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆರೋಪಿ ಆಟೋ ಚಾಲಕ ಪಾಂಡು ಅಲಿಯಾಸ್ ಚಂದು ಪೊಲೀಸರ ವಶದಲ್ಲಿದ್ದಾನೆ.

Add Asianetnews Kannada as a Preferred SourcegooglePreferred

ಘಟನೆ ಹಿನ್ನೆಲೆ:

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಪಾಂಡುರಂಗ ಅಲಿಯಾಸ್‌ ಚಂದು (32) ಬಂಧಿತ ಆರೋಪಿ. ಮಾ.6 ರಂದು ಮಧ್ಯಾಹ್ನ ತರಬನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪಾಂಡುರಂಗನ ಪ್ರೇಯಸಿ ಸುಮಲತಾ (27), ಈಕೆಯ ತಂದೆ ಶ್ರೀರಾಮ್ (48) ಅವರಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುರೆದಿದೆ. ಮೃತ ತಾಯಿ ಮಂಜುಳಾಗೆ 43 ವರ್ಷವಾಗಿತ್ತು.

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಪಾಂಡುರಂಗ ಆಟೋ ಚಾಲಕ ವೃತ್ತಿ ಮಾಡುತ್ತಿದ್ದಾನೆ. ಕೌಟುಂಬಿಕ ಕಾರಣಕ್ಕೆ ನಾಲ್ಕು ವರ್ಷಗಳಿಂದ ಮೊದಲ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದ ಸುಮಲತಾ, ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪಾಂಡುರಂಗನಿಗೆ ಸುಮಲತಾಳ ಪರಿಚಯವಾಗಿತ್ತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಕೆಲ ತಿಂಗಳ ಹಿಂದೆ ಮದುವೆಯಾಗಿದೆ ಎನ್ನಲಾಗುತ್ತಿದೆ. ಮದುವೆಗೂ ಮುನ್ನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಲೀವ್ ಇನ್ ಟುಗೆದರ್ ಇದ್ದರಂತೆ. ಇತ್ತೀಚೆಗೆ ಇಬ್ಬರ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ನಡೆದಿದೆ. ಅದರಿಂದ ಬೇಸತ್ತಿದ್ದ ಆಕೆ, ಕೆಲ ದಿನಗಳ ಹಿಂದೆ ಚಂದುವನ್ನು ಬಿಟ್ಟು ಮನೆಯಿಂದ ತರಬನಳ್ಳಿಯಲ್ಲಿರುವ ತವರು ಮನೆಗೆ ಸುಮಲತಾ ವಾಪಸ್ಸಾಗಿದ್ದಳು.

ದ್ವಿಚಕ್ರ ವಾಹನ ಕೊಡದ್ದಕ್ಕೆ ಗಲಾಟೆ

ಮಾ.6 ರಂದು ಮಧ್ಯಾಹ್ನ ಸುಮಲತಾ ತವರು ಮನೆಗೆ ಬಂದಿದ್ದ ಆರೋಪಿ, ತಾನು ಕೊಡಿಸಿರುವ ದ್ವಿಚಕ್ರ ವಾಹನವನ್ನು ವಾಪಸ್ ಕೊಡುವಂತೆ ಕೇಳಿದ್ದ. ಆಗ ಪ್ರೇಯಸಿ ಹಾಗೂ ಆಕೆಯ ಮನೆಯವರು ಕೊಡಲು ಹಿಂದೇಟು ಹಾಕಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಪೆಟ್ರೋಲ್‌ ತಂದು ಸುಮಲತಾ ಮತ್ತು ಆಕೆಯ ಪಾಲಕರ ಮೇಲೆ ಎರಚಿ ಬೆಂಕಿ ಹಚ್ಚಿದ್ದ. ಸ್ಥಳೀಯರು ಕೂಡಲೇ ಮೂವರನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದರಲ್ಲಿ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲಿವಿಂಗ್ ಟುಗೆದರ್‌ ನಂತರ ಮದುವೆ

ಮಹಾಲಕ್ಷ್ಮೀ ಲೇಔಟ್​ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಪಾಂಡುರಂಗ ಮತ್ತು ಸುಮಲತಾ ಆರಂಭದಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದು, ಕಳೆದ ವರ್ಷ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ, ಆರೋಪಿ ಇತ್ತೀಚೆಗೆ ಬೇರೊಂದು ಯುವತಿ ಜತೆ ಓಡಾಡುತ್ತಿದ್ದ ವಿಚಾರ ತಿಳಿದು ಸುಮಲತಾ ಎರಡು ತಿಂಗಳ‌ ಹಿಂದೆ ಆತನಿಂದಲೂ ದೂರವಾಗಿದ್ದಳು. ಮೊದಲ ಪತ್ನಿಯಿಂದ ಆತನಿಗೆ ಎರಡು ಮಕ್ಕಳಿದ್ದಾರೆನ್ನಲಾಗುತ್ತಿದೆ.