ಮೈಸೂರು ನಗರದ ನ್ಯಾಯಾಲಯಗಳನ್ನು ಪ್ರವೇಶಿಸಲು ಹರಸಾಹಸ!
ಮೈಸೂರಿನ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿವೆ ಕಿಷ್ಕಿಂದೆಯಂತಹ ನ್ಯಾಯಾಲಯಗಳಿದೆ. ಆರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ, 7, 8 ಹಾಗೂ 10ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಪ್ರವೇಶಿಸಲು ಹರಸಾಹಸ ಪಡಬೇಕು. ನ್ಯಾಯಾಲಯಗಳಿಂದ ಹೊರ ಬರುವಷ್ಟರಲ್ಲಿ ಹೆರಿಗೆಯಾದ ಅನುಭವ!
ಮೈಸೂರು : ಮೈಸೂರಿನ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿವೆ ಕಿಷ್ಕಿಂದೆಯಂತಹ ನ್ಯಾಯಾಲಯಗಳಿದೆ. ಆರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ, 7, 8 ಹಾಗೂ 10ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಪ್ರವೇಶಿಸಲು ಹರಸಾಹಸ ಪಡಬೇಕು. ನ್ಯಾಯಾಲಯಗಳಿಂದ ಹೊರ ಬರುವಷ್ಟರಲ್ಲಿ ಹೆರಿಗೆಯಾದ ಅನುಭವ!
ಈ ನಾಲ್ಕೂ ನ್ಯಾಯಾಲಯಗಳಿರುವುದು ಮೈಸೂರಿನ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ. ಈ ನ್ಯಾಯಾಲಯಗಳಲ್ಲಿ ಪ್ರತಿದಿನ ನೂರಾರು ಪ್ರಕರಣಗಳು ಇರುತ್ತವೆ. ಒಮ್ಮೊಮ್ಮೆ 150- 200 ಪ್ರಕರಣಗಳೂ ಇರುತ್ತವೆ. ಒಂದೊಂದು ಪ್ರಕರಣದಲ್ಲಿ ಕನಿಷ್ಠ ಇಬ್ಬರು ಪಕ್ಷಗಾರರು ಹಾಗೂ ಇಬ್ಬರು ವಕೀಲರು ಹಾಜರಾಗಬೇಕಾಗುತ್ತದೆ. ಹೀಗಾಗಿ ಬೆಳಗ್ಗೆ 11 ಆಗುತ್ತಿದ್ದಂತೆ ಈ ನಾಲ್ಕೂ ನ್ಯಾಯಾಲಯಗಳ ಎದುರು ನೂರಾರು ಜನ ಜಮಾಯಿಸುತ್ತಾರೆ. ಪ್ರತಿಯೊಬ್ಬರಿಗೂ ಒಂದೇ ಬಾಗಿಲ ಮೂಲಕ ನ್ಯಾಯಾಲಯದೊಳಗೆ ಪ್ರವೇಶಿಸುವುದು ಹೇಗೆ ಎಂಬ ಆತಂಕ. ಕಾರಣ ಈ ನಾಲ್ಕೂ ನ್ಯಾಯಾಲಯಗಳು ಕಿಷ್ಕಿಂಧæ ಯನ್ನು ಹೋಲುತ್ತವೆ.
ಕೇವಲ ಒಂದೂವರೆ ಚದರಕ್ಕೂ ಕಡಿಮೆ ವಿಸ್ತೀರ್ಣದ ಪುಟ್ಟಪುಟ್ಟಕೊಠಡಿಯಲ್ಲಿ ಕಾರ್ಯನಿರ್ವಹಿಸುವ ಈ ನ್ಯಾಯಾಲಯಗಳಿಗೆ ಇರುವುದು ಒಂದೇ ಬಾಗಿಲು. ಈ ಪುಟ್ಟಪುಟ್ಟಕೊಠಡಿಗಳಲ್ಲಿ ಆರು ಜನ ವಕೀಲರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿದೆ. ಹತ್ತು ಜನ ವಕೀಲರು ನಿಲ್ಲಲು ಸ್ಥಳವಿದೆ. ಉಳಿದ ವಕೀಲರಲ್ಲಿ ಕೆಲವರು ಒಂಟಿ ಕಾಲಿನಲ್ಲಿ ನಿಲ್ಲಬೇಕು. ಮತ್ತೊಂದು ಕಾಲನ್ನು ಕೆಳಗಿಡಲು ಜಾಗವಿರುವುದಿಲ್ಲ.
ಉಳಿದ ಕಕ್ಷಿಗಾರರು, ಸಾಕ್ಷಿದಾರರು, ಪಕ್ಷಗಾರರು ಹಾಗೂ ಪೊಲೀಸರು ನ್ಯಾಯಾಲಯದ ಏಕೈಕ ಬಾಗಿಲು ಹಾಗೂ ಕಿಟಕಿಯ ಬಳಿ ಕಷ್ಟಪಟ್ಟು ನಿಲ್ಲಲೂ ಸ್ಥಳಾವಕಾಶ ಇಲ್ಲ. ಕೆಲವು ನ್ಯಾಯಾಲಯಕ್ಕೆ ಕಿಟಕಿಯ ಪಕ್ಕ ನಿಲ್ಲಲೂ ಸಾಧ್ಯ ಇಲ್ಲ. ಈ ನ್ಯಾಯಾಲಯದೊಳಗೆ ಬಂದು ಹೊರ ಹೋಗುವಷ್ಟರಲ್ಲಿ ಸಿಟಿ ಬಸ್ ಹತ್ತಿ ಇಳಿದಷ್ಟೇ ತ್ರಾಸಾಗುತ್ತದೆ.
ಈ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಹಾಗೂ ಸಿಬ್ಬಂದಿ ಹೊರತಾಗಿ ಉಳಿದವರು ಉಸಿರಾಡಲೂ ಹರಸಾಹಸ ಪಡಬೇಕಾಗಿದೆ.
ವಿಪರ್ಯಾಸವೆಂದರೆ ಮೈಸೂರಿನ ಮಳಲವಾಡಿಯಲ್ಲಿ ನಿರ್ಮಾಣವಾದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಇರುವ ನ್ಯಾಯಾಲಯಗಳು ಸಾವಿರಾರು ಚದರ ಅಡಿಗಳಷ್ಟುವಿಸ್ತಾರವಾಗಿವೆ. ಆದರೆ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿರುವ ಈ ನಾಲ್ಕೂ ನ್ಯಾಯಾಲಯಗಳು ಕಿಷ್ಕಂದೆಯಂತೆ ಇರುವುದರಿಂದ ನ್ಯಾಯದೇವತೆಯ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ.
ಪ್ರಕರಣದಲ್ಲಿ ತನ್ನ ಹೆಸರನ್ನು ಕರೆದಾಗ ನ್ಯಾಯಾಲಯದೊಳಗೆ ಹೋಗಲು ಸಾಧ್ಯವಾಗದಿದ್ದರೆ ವಾರಂಟ್ ಹೊರಡಬಹುದೆಂಬ ಆತಂಕದಿಂದ ನ್ಯಾಯಾಲಯದ ಏಕೈಕ ಬಾಗಿಲ ಬಳಿ ಜಮಾಯಿಸುವ ಶ್ರೀಸಾಮಾನ್ಯ ಹಾಗೂ ವಕೀಲರ ಗೋಳು ಹೇಳತೀರದು. ರಾಜ್ಯಾದ್ಯಂತ ಹೊಸ ಹೊಸ ನ್ಯಾಯಾಲಯಗಳನ್ನು ಸ್ಥಾಪಿಸುವ ಸರ್ಕಾರ ಹಾಗೂ ಹೈಕೋರ್ಚ್ ಈ ವಿಚಾರವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕಾಗಿದೆ. ನ್ಯಾಯ ಕೋರಿ ನ್ಯಾಯಾಲಯಕ್ಕೆ ಆಗಮಿಸುವ ಶ್ರೀಸಾಮಾನ್ಯನು ನ್ಯಾಯಾಲಯದೊಳಗೆ ಪ್ರವೇಶಿಸುವಂತಾದರೆ ಆತನಿಗೆ ಪ್ರಾಥಮಿಕ ನ್ಯಾಯ ದೊರಕಿದಂತಾಗುತ್ತದೆ.
- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು