ನಗರದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುವ ಶೆಲ್ಟರ್‌ಗಳು ಜನವರಿ ಮೊದಲ ವಾರದ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಬೆಂಗಳೂರು : ನಗರದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುವ ಶೆಲ್ಟರ್‌ಗಳು ಜನವರಿ ಮೊದಲ ವಾರದ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮೊದಲಾದ ಕಡೆ ಬೀದಿ ನಾಯಿಗಳ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಒಂದು ವಾರದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಬೀದಿ ನಾಯಿಗಳನ್ನು ಹಿಡಿಯುವುದಕ್ಕೂ ತಂಡಗಳ ನಿಯೋಜನೆ ಮಾಡಲಾಗಿದೆ. ಶೆಲ್ಟರ್‌ನಲ್ಲಿ ಬೀದಿ ನಾಯಿಗಳಿಗೆ ಮಾಡಬೇಕಾದ ವೆಚ್ಚಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಸೂಚಿಸಿದ ದರಕ್ಕೆ ಅನುಗುಣವಾಗಿ ವೆಚ್ಚ ಮಾಡಲಾಗುವುದು. ಅದರಂತೆ ಟೆಂಡರ್ ಆಹ್ವಾನಿಸಿ ಸ್ವಯಂ ಸೇವಾ ಸಂಸ್ಥೆಯನ್ನು ನಿಗದಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಾಣಿ ಪ್ರಿಯರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುತ್ತಿದ್ದು, ಈವರೆಗೆ ಯಾರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಮಾರ್ಗಸೂಚಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ವಹಿಸಬೇಕಾಗಲಿದೆ. ಅಧಿಕಾರಿಗಳಿಗೆ ಪ್ರಾಣಿ ಪ್ರಿಯರು ಸಹಕಾರ ನೀಡಬೇಕು ಎಂದು ಹೇಳಿದರು.
72 ಬೀದಿ ನಾಯಿಗಳು ಸೆರೆ:
ನಗರದಲ್ಲಿ ಸಾರ್ವಜನಿಕರ ಮೇಲೆ ಅಕ್ರಮಣಕಾರಿ ವರ್ತನೆ ತೋರುವ 72 ಬೀದಿ ನಾಯಿಗಳನ್ನು ಶೆಲ್ಟರ್‌ಗಳಲ್ಲಿ ಬಂಧಿಸಿಲಾಗಿದೆ. ಆ ಬೀದಿ ನಾಯಿಗಳ ಆಕ್ರಮಣಕಾರಿ ಧೋರಣೆ ಕಡಿಮೆ ಆಗುವವರೆಗೆ ಶೆಲ್ಟರ್‌ನಲ್ಲಿ ಮುಂದುವರೆಸಲಾಗುವುದು. ಉಳಿದಂತೆ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ, ಲಸಿಕೆ ನೀಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೇನಕಾ ಗಾಂಧಿ ಜತೆ ಚರ್ಚೆ:
ನಗರದ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುವ ಸಂಬಂಧಿಸಿದಂತೆ ಪ್ರಾಣಿ ಹಕ್ಕು ಕಾರ್ಯಕರ್ತೆ ಹಾಗೂ ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಬೀದಿ ನಾಯಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಬೀದಿ ನಾಯಿ ದತ್ತುಗೆ ಅವಕಾಶ
ಬೀದಿ ನಾಯಿಗಳ ಕಲ್ಯಾಣ ಹಾಗೂ ಮಾನವೀಯ ನಿರ್ವಹಣೆಯ ಭಾಗವಾಗಿ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ದತ್ತು ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ.ದತ್ತು ನೀಡಲಾಗುವ ನಾಯಿಗಳ ಆರೋಗ್ಯ ತಪಾಸಣೆಗೊಳಪಡಿಸಲ್ಪಟ್ಟು, ಲಸಿಕೆ ನೀಡಲ್ಪಟ್ಟು ಹಾಗೂ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗೊಳಪಡಿಸಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿ ಪಡೆಯುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ ಆವರಣದಲ್ಲಿರುವ ಅನೆಕ್ಸ್ ಕಟ್ಟಡದಲ್ಲಿರುವ ಪಶುಪಾಲನೆ ವಿಭಾಗದ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಶಾಖ ಅಲೆ ತಪ್ಪಿಸುವುದಕ್ಕೆ ಕ್ರಮ
ಬೇಸಿಗೆ ಅವಧಿಯಲ್ಲಿ ನಗರದಲ್ಲಿ ಬೀಸಿಲ ತಾಪ ತಪ್ಪಿಸುವುದಕ್ಕೆ ಕ್ರಮ ವಹಿಸುವ ನಿಟ್ಟಿನಲ್ಲಿ ಪಿಎಂ-2.5 ಯೋಜನೆಯಡಿ ನಗರದಲ್ಲಿ ಸೆನ್ಸರ್ ಸೇರಿದಂತೆ ಮೊದಲಾದ ಸಣ್ಣ ಉಪಕರಣ ಅಳವಡಿಕೆಗೆ ಕ್ರಮ ವಹಿಸಲಾಗುವುದು. ಈ ಮಾಹಿತಿ ಆಧಾರಿಸಿ ನಗರದಲ್ಲಿ ಹಸಿರೀಕರಣ ಸೇರಿದಂತೆ ಮೊದಲಾದ ಕಾರ್ಯಕ್ರಮ ಕೈಗೊಳ್ಳುವುದಕ್ಕೆ ಸಹಕಾರಿ ಆಗಲಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.


