ತುಮಕೂರು(ಜು.01): ಕುಣಿಗಲ್‌ ಮಠದ ಜಮೀನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿ ಹಾನಿ ಉಂಟು ಮಾಡಿರುವ ಘಟನೆ ತಾಲೂಕಿನ ಅಲ್ಕೆರೆ ಸಿದ್ದಗಂಗಾ ಶಾಖಾ ಮಠದಲ್ಲಿ ಭಾನುವಾರ ರಾತ್ರಿ ನಡೆದಿದೆ.

ತಾಲೂಕಿನ ಸಿದ್ಧಂಗಾ ಶಾಖಾ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರೆ ಒತ್ತುವರಿದಾರರಿಂದ ಹಲ್ಲೆಗೊಳಗಾದವರು. ತುಮಕೂರು ಸಿದ್ಧಗಂಗಾ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಅಲ್ಕೆರೆ ಸಿದ್ಧಗಂಗಾ ಮಠದ ಹೆಸರಿನಲ್ಲಿ 20 ಎಕರೆ ಜಮೀನು ಇದ್ದು ಈ ಪೈಕಿ ಗ್ರಾಮಸ್ಥರ ಮನವಿ ಮೇರೆಗೆ ಲಿಂಗೈಕ್ಯ ಶಿವಕುಮಾರ ಮಹಾ ಸ್ವಾಮೀಜಿ ಅವರು ಗ್ರಾಮದ ಸರಕಾರಿ ಪ್ರೌಢಶಾಲೆಗೆ 2ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಉಳಿಕೆ ಜಮೀನಿನಲ್ಲಿ ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಲ್ಕೆರೆ ಸಿದ್ಧಗಂಗಾ ಮಠದ ಸ್ವಾಮೀಜಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಸರ್ವೆ ಮಾಡಿಸಿ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ಸಂಬಂಧ ಸರ್ವೆ ಕಾರ್ಯವೂ ಮುಗಿದು ಒತ್ತುವರಿ ತೆರವು ಮಾಡಿಕೊಡಲು ಒತ್ತುವರಿದಾರರಿಗೂ ತಿಳಿಸಲಾಗಿತ್ತು. ಭಾನುವಾರ ಸಂಜೆ ಮಠದ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಸ್ವಾಮೀಜಿ ಕೆಲಸ ಮಾಡಿಸುತ್ತಿರುವ ವೇಳೆ ಒತ್ತುವರಿದಾರರು ಏಕಾಏಕಿ ದಾಳಿ ಮಾಡಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠದ ಮೇಲೆ ಕಲ್ಲು ತೂರಿ ಮಠದ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಸ್ವಾಮೀಜಿ ಅವರಿಗೆ ಯಾವುದೇ ಗಾಯವಾಗಿಲ್ಲ. ಈ ವೇಳೆ ಮಠಕ್ಕೆ ಜಮೀನು ನೀಡಲು ಈ ಹಿಂದೆ ಸಹಕಾರ ನೀಡಿದ್ದ ದಿವಂಗತ ಪಟೇಲ್‌ ಗಂಗಪ್ಪ ಗೌಡ ಅವರ ಮಕ್ಕಳು ಮಠದ ಪರವಾಗಿ ನಿಂತು ಬೆಂಬಲ ನೀಡಿದ್ದಾರೆ.

ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿರುವ ಒತ್ತುವರಿದಾರರಾದ ಗ್ರಾಮದ ಶಿವಣ್ಣ, ಗಂಗಾಧರ್‌, ಕೆಂಪಯ್ಯ, ನಾರಾಯಣ್‌, ರಂಗಮ್ಮ, ರಾಮಣ್ಣ, ರಂಗಸ್ವಾಮಿ, ರಾಮಕೃಷ್ಣ ಎಂಬರ ಮೇಲೆ ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಷಯ ತಿಳಿದು ಸೋಮವಾರ ಶಾಸಕ ಡಾ.ರಂಗನಾಥ್‌, ಡಿವೈಎಸ್‌ಪಿ ಜಗದೀಶ್‌ ಸ್ಥಳಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಗ್ರಾಮಸ್ಥರ ಸಭೆ ನಡೆಸಿ ಒತ್ತವರಿಯಾಗಿರುವ ಮಠದ ಜಮೀನು ತೆರವು ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.

ಸೋಂಕು ಕಂಡು ಬಂದರೆ ಮನೆ ಬದಲು ಗ್ರಾಮವೇ ಸೀಲ್ ಡೌನ್

ಮಠದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಸಂಬಂಧ ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸುತ್ತಿರುವಾಗ ಒತ್ತುವರಿದಾರರು ಬಂದು ಗಲಾಟೆ ಮಾಡಿ ಮಠಕ್ಕೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ನನ್ನ ಮೇಲೂ ನೂಕಾಟ ನಡೆಸಿ ಹಲ್ಲೆ ಮಾಡಿದರು ಎಂದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಒತ್ತುವರಿ ತೆರವು ಮಾಡಿಕೊಡಬೇಕೆಂದು ಕೇಳಿದ್ದಕ್ಕೆ ಮಠದ ಮೇಲೆ ಕಲ್ಲು ತೂರಾಟ ನಡೆಸಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವ ಒತ್ತುವರಿದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂದ ಗ್ರಾಮದಲ್ಲೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಕುಣಿಗಲ್ ‌ಡಿವೈಎಸ್‌ಪಿ ಜಗದೀಶ್‌ ತಿಳಿಸಿದ್ದಾರೆ.