*  ಜೂ.12ಕ್ಕೆ ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ರ‍್ಯಾಲಿ ಆಯೋಜನೆ*  ಪೀರ್‌ಪಾಷಾ ದರ್ಗಾವೇ ಅನುಭವ ಮಂಟಪದ ಮೂಲ ಕಟ್ಟಡ: ಲಿಂಗಾಯತ ಶ್ರೀಗಳು*  ನೂರಾರು ವೀರಶೈವ ಲಿಂಗಾಯತ ಸ್ವಾಮೀಜಿ ಭಾಗವಹಿಸುವ ಸಾಧ್ಯತೆ 

ಬೀದರ್‌/ಬೆಳಗಾವಿ(ಮೇ.28): ಕಾಶಿಯ ಗ್ಯಾನ್‌ವ್ಯಾಪಿ ಮಸೀದಿ, ಮಂಡ್ಯದ ಶ್ರೀರಂಗಪಟ್ಟಣ, ದಕ್ಷಿಣ ಕನ್ನಡದ ಮಳಲಿ, ಕಲಬುರಗಿಯ ಬಹಮನಿ ಕೋಟೆಗಳ ಬಳಿಕ ಇದೀಗ ಭಕ್ತಿಭಂಡಾರಿ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲೂ ಮಸೀದಿಗೆ ಸಂಬಂಧಿಸಿದ ವಿವಾದ ತಲೆದೋರಿದೆ. ಬಸವಕಲ್ಯಾಣದ ಪೀರಪಾಷಾ ಬಂಗ್ಲಾ ದರ್ಗಾದ ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಬಸವಾದಿ ಶರಣರ ಕಾಲದ ಅನುಭವ ಮಂಟಪದ ಮೂಲ ಕಟ್ಟಡವಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜೂ.12ರಂದು ವೀರಶೈವ ಲಿಂಗಾಯತ ಸಂಘಟನೆಗಳು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎಂಬ ರಾರ‍ಯಲಿಗೆ ಕರೆ ನೀಡಿವೆ.

ದೇಗುಲ-ಮಸೀದಿಗಳ ಗುದ್ದಾಟದ ಮಧ್ಯೆಯೇ ಈ ಹೊಸ ವಿವಾದ ಸೃಷ್ಟಿಯಾಗಿದೆ. ದರ್ಗಾದಲ್ಲಿ ಸಿಕ್ಕಿರುವ ಕುರುಹುಗಳು ಅನುಭವ ಮಂಟಪದ ಕುರುಹುಗಳು ಎಂಬ ವಾದ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾಗಿರುವ 12ನೇ ಶತಮಾನದ ಅನುಭವ ಮಂಟಪವೇ ಈಗಿನ ಪೀರಪಾಷಾ ದರ್ಗಾ ಎಂದು ಹೇಳಲಾಗುತ್ತಿದೆ. ನಿಜಾಮರ ಆಡಳಿತ ಕಾಲದಲ್ಲಿ ಅನುಭವ ಮಂಟಪವನ್ನು ಕಬ್ಜಾ ಮಾಡಿ ದರ್ಗಾ ಮಾಡಲಾಗಿದೆ. ಇಲ್ಲಿ ದೇವಸ್ಥಾನ ಶೈಲಿ ಕಟ್ಟಡಗಳು, ಗೋಪುರ ಶೈಲಿಯ ಮೇಲ್ಛಾವಣಿ, ದೇವಾಲಯ ಕಟ್ಟಡ ಮಾದರಿಯ ಕಂಬಗಳು, ಶಿಲಾಬಾಲಿಕೆಯರ ಮೂರ್ತಿಗಳು ಇರುವುದು ತಿಳಿದುಬಂದಿದೆ ಎಂದು ಕೆಲವು ವೀರಶೈವ ಲಿಂಗಾಯತ ಸ್ವಾಮೀಜಿಗಳು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದಷ್ಟುಫೋಟೋಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಗ್ಯಾನವಾಪಿ ಶಿವಲಿಂಗ ಒಡೆದು ಕಾರಂಜಿ ನಿರ್ಮಾಣಕ್ಕೆ ಯತ್ನ!

ಸದ್ಯ ಪೀರಪಾಷಾ ದರ್ಗಾ ಹೈದ್ರಾಬಾದ್‌ ನವಾಬರ ಮನೆತನದವರ ವಶದಲ್ಲಿದೆ. ಆ ಮನೆತನದವರು ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ದರ್ಗಾದಲ್ಲಿ ಅಂಥ ಯಾವುದೇ ಕುರುಹುಗಳಿಲ್ಲ ಎಂದು ಅವರು ಹೇಳಿದ್ದಾರೆ.

12ರಂದು ರ‍್ಯಾಲಿ:

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಮೂಲ ಅನುಭವ ಮಂಟಪವನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಜೊತೆಗೆ, ವಿವಾದಿತ ಸ್ಥಳದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆಯೂ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಜೂ.12ರಂದು ಮಠಾಧೀಶರ ರ‍್ಯಾಲಿಯನ್ನು ಆಯೋಜಿಸಲಾಗಿದ್ದು, ನೂರಾರು ವೀರಶೈವ ಲಿಂಗಾಯತ ಸ್ವಾಮೀಜಿ ಭಾಗವಹಿಸುವ ಸಾಧ್ಯತೆ ಇದೆ.

ವಿವಾದದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ವಿಶ್ವದ ಮೊದಲ ಸಂಸತ್ತು ಬಸವಣ್ಣನವರ ಅನುಭವ ಮಂಟಪ. ಬಸವಣ್ಣನವರ ಮೂಲ ಅನುಭವ ಮಂಟಪ ಪೀರಪಾಷಾ ಬಂಗ್ಲೆಯಾಗಿದೆ. ನಾವೆಲ್ಲ ಇದನ್ನು ನೋಡಿ ಸುಮ್ಮನೆ ಕುಳಿತುಕೊಂಡರೆ ಹೇಗೆ? ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಅನುಭವ ಮಂಟಪದ ಪೂರ್ತಿ ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Mangaluru ಮಸೀದಿಯಲ್ಲಿ ದೈವೀ ಶಕ್ತಿ ಇತ್ತೆಂದ ತಾಂಬೂಲ ಪ್ರಶ್ನೆ

ಮುಸ್ಲಿಮರು ಸೌಹಾರ್ದತೆಯಿಂದ ಬಿಟ್ಟು ಕೊಡಲಿ

ಇಂದು ಸರ್ಕಾರ ಅನುಭವ ಮಂಟಪದ ನಿರ್ಮಾಣಕ್ಕೆ ಸಾಕಷ್ಟುಖರ್ಚು ಮಾಡುತ್ತಿದ್ದಾರೆ. ಇದನ್ನು ನಾವು ಅಭಿನಂದಿಸಿಬೇಕು. ಆದರೆ ಮೊದಲು ಮೂಲ ಮಂಟಪವನ್ನು ಅಭಿವೃದ್ಧಿ ಮಾಡುವುದು ತುಂಬಾ ಮುಖ್ಯವಲ್ಲವೇ? ಮುಸ್ಲಿಂ ಸಮಾಜದವರು ಸೌಹಾರ್ದತೆಯಿಂದ ಚರ್ಚಿಸಿ ಮೂಲ ಅನುಭವ ಮಂಟಪ ಬಿಟ್ಟುಕೊಡಬೇಕು ಅಂತ ಬೆಳಗಾವಿ ಹುಕ್ಕೇರಿ ಹಿರೇಮಠ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ. 

ವೀರಶೈವ ಲಿಂಗಾಯತ ಸಂಘಟನೆಗಳ ವಾದವೇನು?

- 12ನೇ ಶತಮಾನದ ಅನುಭವ ಮಂಟಪ ನಿಜಾಮರ ಕಾಲದಲ್ಲಿ ಅತಿಕ್ರಮಣ
- ಅನುಭವ ಮಂಟಪ ಆಕ್ರಮಿಸಿಕೊಂಡು ಪೀರ್‌ಪಾಷಾ ದರ್ಗಾ ನಿರ್ಮಾಣ
- ದೇಗುಲ ಶೈಲಿ ಕಟ್ಟಡ, ಗೋಪುರ, ಕಂಬ, ಶಿಲಾಬಾಲಿಕೆಗಳೇ ಇದಕ್ಕೆ ಸಾಕ್ಷ್ಯ
- ಸರ್ಕಾರ ಪೀರ್‌ಪಾಷಾ ಬಂಗ್ಲೆ ವಶಕ್ಕೆ ಪಡೆದು ಅನುಭವ ಮಂಟಪ ಮಾಡಬೇಕು
- ವಿವಾದಿತ ಸ್ಥಳದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು: ಚಂದ್ರಶೇಖರ ಶ್ರೀಗಳು