ಮುಸ್ಲಿಂ ಸಮಾಜದ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್: ಮುತಾಲಿಕ್
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ| ಕಾಂಗ್ರೆಸ್ ಮುಸ್ಲಿಂ ಸಮಾಜದವರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದೆ| ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ|
ಹೊಸಪೇಟೆ(ಜ.24): ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಗೆ ತಂದಿರುವ ಕುರಿತು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಾ ಮುಸ್ಲಿಂ ಸಮಾಜದವರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ನವರು ನೇರವಾಗಿ ಗಲಭೆಗಳನ್ನು ನಡೆಸಲು ಕಾರಣರಾಗುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿಯಿಂದ ದೇಶದಲ್ಲಿರುವ ಯಾವ ಮುಸ್ಲಿಮರಿಗೂ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದರೂ, ಕಾಂಗ್ರೆಸ್‌ನವರು ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ. ದೇಶದ ಮುಸ್ಲಿಮರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ಮಾಜಿ ಪ್ರಧಾನಿ ಜವಹಾರ್ಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಪೌರತ್ವ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಹೇಳಿದ್ದರು. ಹೀಗಿರುವಾಗ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮುಂದಿಟ್ಟಿಕೊಂಡು ಬೀದಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದು ಸರಿಯಲ್ಲ.
ಶಾಸಕ ಜಿ. ಸೋಮಶೇಖರ ರೆಡ್ಡಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಕೆಲ ಮುಸ್ಲಿಮರ ವರ್ತನೆಗೆ ಬೇಸತ್ತು ಸೋಮಶೇಖರ ರೆಡ್ಡಿ, ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ಅವರು ಹೇಳಿಕೆ ಸರಿಯಿದೆ ಎಂದು ಅವರು ಸಮರ್ಥಿಸಿಕೊಂಡರು.
ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಂತೆ ಪ್ರತಿಕ್ರಿಯೆ ನೀಡಿದ ಅವರು, ಅದಿತ್ಯರಾವ್ ಆಗಿರಲಿ ಮತ್ತು ಯಾರೋ ಆಗರಲಿ ಇಂತಹ ಕೃತ್ಯಗಳನ್ನು ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಅದಿತ್ಯರಾವ್ ಹುಚ್ಚನೋ ಅಥಾವ ಅರೆ ಹುಚ್ಚನೋ ಯಾವುದೇ ಆಗರಲಿ ಅವನಿಗೆ ತಕ್ಷ ಶಿಕ್ಷೆಯಾಗಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೇಶದ ಸೈನಿಕ ಹಾಗೂ ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಬಾರದು. ಇವರ ಹೇಳಿಕೆ ಪೊಲೀಸರನ್ನು ದುರ್ಬಲಗೊಳಿಸುವಂತಿದೆ. ಒಂದು ಪಕ್ಷದ ರಾಜಾಧ್ಯಕ್ಷರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇಂಥಹ ಹೇಳಿಕೆ ಶೋಭೆ ತರುವಂತದಲ್ಲ. ಇವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಶ್ರೀರಾಮ ಸೇನೆಯ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಪ್ರಮೋದ್ ಮುತಾಲಿಕ್ ಅವರ 65ನೇ ಜನ್ಮದಿನಾಚರಣೆ ಅಂಗವಾಗಿ ಇಂದಿನಿಂದ ಒಂದು ವರ್ಷದ ಕಾಲ ಧಾರ್ಮಿಕ, ಸಾಮಾಜಿಕ, ದಲಿತ ಕೇರಿಗಳಿಗೆ ಭೇಟಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 65 ಗ್ರಾಮ ಘಟಕಗಳನ್ನು ರಚಿಸಲಾಗುತ್ತದೆ. 65 ಸಾವಿರ ಹೊಸ ಕಾರ್ಯಕರ್ತರ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಧರ್ಮ ಜಾಗೃತಿ ಸಭೆಗಳನ್ನು ನಡೆಸುವ ಚಿಂತನೆ ಇದೆ ಎಂದು ಅವರು ವಿವರಿಸಿದರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಸಂಜೀವ್ ಮರಡಿ, ತಾಲೂಕು ಅಧ್ಯಕ್ಷ ಜಗದೀಶ್ ಕಾಮಟಗಿ, ನಗರ ಘಟಕದ ಅಧ್ಯಕ್ಷ ಲಕ್ಷ್ಮಣ ಕಿಚಿಡಿ ಹಾಗೂ ಪ್ರವೀಣ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.