ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ, ರಸ್ತೆಗೆ ಅಡ್ಡಬಂದ ಕುರಿಗಳಿಗೆ ಹಾರ್ನ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಕುರಿಗಳ ಮಾಲೀಕ ಮತ್ತು ಗ್ರಾಮಸ್ಥರು ಸೇರಿ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಚಾಲಕ ಮಂಜುನಾಥ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ರಾಮನಗರ(ಡಿ.10): ರಸ್ತೆಗೆ ಕುರಿಗಳು ಅಡ್ಡಬಂದ ಹಿನ್ನೆಲೆಯಲ್ಲಿ ಹಾರ್ನ್ ಮಾಡಿದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರಿಗೆ ಗ್ರಾಮಸ್ಥರು ಥಳಿಸಿರುವ ಆಘಾತಕಾರಿ ಘಟನೆ ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಕುರಿಗಳ ಮಾಲೀಕನಿಂದ ಹಲ್ಲೆ:

ಇಂದು ಸಂಜೆ ರಾಮನಗರದಿಂದ ಮಾಗಡಿ ಕಡೆಗೆ ಹೊರಟಿದ್ದ ಮಾಗಡಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್, ಲಕ್ಷ್ಮೀಪುರ ಗ್ರಾಮದ ಬಳಿ ಸಾಗುತ್ತಿದ್ದಾಗ ರಸ್ತೆಯ ಮಧ್ಯೆ ಕುರಿಗಳನ್ನು ಅಟ್ಟಿಕೊಂಡು ಹೋಗುತ್ತಿದ್ದ ರೈತ. ಈ ವೇಳೆ ಬಸ್‌ ಮುಂದೆ ಸಾಗಲು ದಾರಿ ಮಾಡಿಕೊಡುವಂತೆ ಡ್ರೈವರ್ ಮಂಜುನಾಥ ಹಾರ್ನ್ ಮಾಡಿದ್ದಾನೆ. ಸಾಕಷ್ಟು ಬಾರಿ ಹಾರ್ನ್ ಮಾಡಿದ್ದಾರೆ. ಆದರೆ ಕುರಿಗಳ ಮಾಲೀಕ ಹಾರ್ನ್‌ಗೆ ಪ್ರತಿಕ್ರಿಯಿಸದೆ ರಸ್ತೆ ಬಿಡಲು ನಿರಾಕರಿಸಿದ್ದಾನೆ. ಪದೇ ಪದೇ ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡ ಕುರಿಗಳ ಮಾಲೀಕ, ಇತರ ಗ್ರಾಮಸ್ಥರು ಸೇರಿ ಚಾಲಕ ಮಂಜುನಾಥ್ ನನ್ನು ಬಸ್‌ನಿಂದ ಹೊರಗೆಳೆದು ಗುಂಪು ಸೇರಿ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಡಿಯೋದಲ್ಲಿ ಕೂಡ ದಾಖಲಾಗಿದೆ.

ಪೊಲೀಸ್ ದೂರು ದಾಖಲು:

ಗ್ರಾಮಸ್ಥರ ಥಳಿತದಿಂದ ಗಾಯಗೊಂಡ ಚಾಲಕ ಮಂಜುನಾಥ್ ಅವರು, ಕೂಡಲೇ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.