2019ರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆಯನ್ನು CAT ರದ್ದುಗೊಳಿಸಿದೆ. ನ್ಯಾಯಾಲಯದ ಆದೇಶದ ಅನ್ವಯ, 8 ತಿಂಗಳ ಕಾನೂನು ಹೋರಾಟದ ನಂತರ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಅವರಿಗೆ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಬಡ್ತಿ ನೀಡಿದೆ.

ಬೆಂಗಳೂರು(ಡಿ.10): 2019ರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಗೊಳಿಸಿದ್ದು ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಲೋಕ್ ಕುಮಾರ್‌ಗೆ ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ನೀಡಿದೆ.

ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕವಾಗಿರುವ ಹಿನ್ನೆಲೆ, ಕಾರಾಗೃಹ ಇಲಾಖೆಯ ಎಡಿಜಿಪಿ ಆಗಿದ್ದ ಬಿ. ದಯಾನಂದ್ ಅವರನ್ನು ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಫೋನ್ ಟ್ಯಾಪಿಂಗ್ ಪ್ರಕರಣ 8 ತಿಂಗಳ ಹೋರಾಟಕ್ಕೆ ಜಯ:

ಅಲೋಕ್ ಕುಮಾರ್ ಅವರ ಬಡ್ತಿ ಆದೇಶದ ಹಿಂದಿರುವ ದೊಡ್ಡ ಹಿನ್ನೆಲೆ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತಾದ ಕಾನೂನು ಹೋರಾಟವಾಗಿದೆ. 2019 ರಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿ 'ಬಿ ರಿಪೋರ್ಟ್' ಸಲ್ಲಿಸಿತ್ತು. ಆದರೆ, 2025ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು. ಈ ಅವಧಿಯಲ್ಲಿ ಅವರು ನಗರ ಪೊಲೀಸ್ ಆಯುಕ್ತರಾಗಿದ್ದರು.

ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ಮೊರೆ ಹೋಗಿದ್ದರು. ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ವಾದಿಸಿದ್ದ ಅಲೋಕ್ ಕುಮಾರ್ ಪರವಾಗಿ ಸಿಎಟಿ ತೀರ್ಪು ನೀಡಿತ್ತು.

ಸಿಎಟಿ, ಹೈಕೋರ್ಟ್ ಆದೇಶದ ಅನ್ವಯ ಭಡ್ತಿ:

ಸಿಎಟಿ ನ್ಯಾಯಮಂಡಳಿಯು ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ರದ್ದುಗೊಳಿಸಿತ್ತು ಮತ್ತು ಅಲೋಕ್ ಕುಮಾರ್ ಅವರಿಗೆ ಬಡ್ತಿ ಹಾಗೂ ಸವಲತ್ತುಗಳನ್ನು ನೀಡುವಂತೆ ಆದೇಶಿಸಿತ್ತು. ಸಿಎಟಿ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಕೂಡ ಸಿಎಟಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ನ್ಯಾಯಾಲಯಗಳ ಈ ತೀರ್ಪುಗಳ ಹಿನ್ನೆಲೆಯಲ್ಲಿ, ಸುಮಾರು 8 ತಿಂಗಳ ಕಾನೂನು ಹೋರಾಟದ ನಂತರ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ.