ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆ ಇಲಾಖೆಯು ಮೈಸೂರು ಮತ್ತು ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಏಪ್ರಿಲ್ ತಿಂಗಳ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ದಕ್ಷಿಣ ಮತ್ತು ಪೂರ್ವ ಭಾರತದ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿವೆ.

ಮೈಸೂರು: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆ ಇಲಾಖೆ ಮೈಸೂರು–ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಈ ವಿಶೇಷ ಸೇವೆಯಿಂದ ದಕ್ಷಿಣ ಮತ್ತು ಪೂರ್ವ ಭಾರತದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಹತ್ತರ ಅನುಕೂಲವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವೆಲ್ಲ ರೈಲು?

ರೈಲು ಸಂಖ್ಯೆ 06251 ಮೈಸೂರು–ಜಲ್ಪೈಗುಡಿ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್, ಏಪ್ರಿಲ್ 17 ಮತ್ತು 24ರಂದು ಶುಕ್ರವಾರಗಳಂದು ಮೈಸೂರಿನಿಂದ ಸಂಜೆ 4.40ಕ್ಕೆ ಹೊರಟು, ಭಾನುವಾರ ಸಂಜೆ 5.30ಕ್ಕೆ ಜಲ್ಪೈಗುಡಿ ಜಂಕ್ಷನ್ ತಲುಪಲಿದೆ. ಇದೇ ರೀತಿ ಮರುಪಯಣದಲ್ಲಿ ರೈಲು ಸಂಖ್ಯೆ 06252 ಜಲ್ಪೈಗುಡಿ ಜಂಕ್ಷನ್–ಮೈಸೂರು ವಿಶೇಷ ಎಕ್ಸ್‌ಪ್ರೆಸ್, ಏಪ್ರಿಲ್ 20 ಮತ್ತು 27ರಂದು ಸೋಮವಾರಗಳಂದು ಜಲ್ಪೈಗುಡಿ ಜಂಕ್ಷನ್‌ನಿಂದ ಸಂಜೆ 4.45ಕ್ಕೆ ಹೊರಟು, ಬುಧವಾರ ಸಂಜೆ 4.00ಕ್ಕೆ ಮೈಸೂರು ತಲುಪಲಿದೆ.

ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ

ಈ ವಿಶೇಷ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಾಸಾ, ಬ್ರಹ್ಮಪುರ, ಬಾಲುಗಾಂ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್ಪುರ ಕೆ ರೋಡ್, ಭದ್ರಕ್, ಬಾಲಸೋರ್, ಖರಗ್ಪುರ್, ಅಂಡುಲ್, ದಾಂಕುಣಿ, ಬರ್ಧಮಾನ, ಬೋಲ್ಪುರ ಶಾಂತಿನಿಕೇತನ, ರಾಮ್ಪುರಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಕಿಶನ್‌ಗಂಜ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ಈ ರೈಲು ನಿಲ್ಲಲಿದೆ.

ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ 1 ಫಸ್ಟ್ ಎಸಿ ಟು-ಟಯರ್, 2 ಎಸಿ ತ್ರಿ-ಟಯರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಎಸ್‌ಎಲ್‌ಆರ್/ಡಿ (SLR/D) ಬೋಗಿಗಳು ಒಳಗೊಂಡಿರುತ್ತವೆ. ಈ ವಿಶೇಷ ರೈಲು ಸೇವೆ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ, ದೀರ್ಘ ದೂರ ಪ್ರಯಾಣವನ್ನು ಸುಲಭಗೊಳಿಸುವಲ್ಲಿ ಸಹಾಯಕವಾಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.