ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ದರಿದ್ರ ಅಧಿಕಾರಿಗಳೇ ಕಾರಣ: ಬಸವರಾಜ ಹೊರಟ್ಟಿ
* ಶಿಕ್ಷಣ ಇಲಾಖೆಯಲ್ಲಿ ವ್ಯವಸ್ಥೆ ಸರಿಯಿಲ್ಲ
* ಮೊದಲಿಗೆ 3, 4, 5ನೇ ತರಗತಿಗಳನ್ನು ಆರಂಭಿಸುವುದು ಸೂಕ್ತ
* ರಾಜ್ಯದಲ್ಲಿ ಕಡ್ಡಾಯ ವರ್ಗಾವಣೆ ಕಾನೂನಿಲ್ಲ
ಹುಬ್ಬಳ್ಳಿ(ಸೆ.30): ಶಿಕ್ಷಣ ಇಲಾಖೆಯ ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮುಂದೆ ಹೋಗುತ್ತಲೇ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದಲೂ ಶಿಕ್ಷಣ ಇಲಾಖೆಯಲ್ಲಿ ಯಾವುದೇ ವ್ಯವಸ್ಥೆಗಳು ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು(Officers) ಸರಿಯಾದ ಮಾಹಿತಿ ನೀಡುವುದಿಲ್ಲ. ಸುಗ್ರೀವಾಜ್ಞೆ ತರುವ ಮೂಲಕ ಶಿಕ್ಷಕರ ವರ್ಗಾವಣೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವರ್ಗಾವಣೆ ವಿಳಂಬವಾಗಿದೆ ಎಂದರು.
3 ತಿಂಗಳು ಬೇಕಂತಲೇ ದಾಟಿಸಿ ಆಮೇಲೆ ವರ್ಗಾವಣೆ(Transfer) ಪ್ರಕ್ರಿಯೆ ನಡೆಸುತ್ತಿದ್ದಾರೆ. ಅ. 4ರಂದು ವರ್ಗಾವಣೆಗೆ ಸಂಬಂಧಿಸಿದಂತೆ ಕೋರ್ಟ್‌ಲ್ಲಿ ವಿಚಾರಣೆ ಇದೆ. ಇದರ ನಂತರ ವರ್ಗಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಡ್ಡಾಯ ವರ್ಗಾವಣೆ ಕಾನೂನಿಲ್ಲ. ಹೀಗಾಗಿ ಹಿಂದೆ ಕಡ್ಡಾಯ ವರ್ಗಾವಣೆಯಾದವರನ್ನು ವಾಪಸ್ ತರಲಿ. ಇದಾದ ನಂತರ ಉಳಿದವರ ವರ್ಗಾವಣೆ ಮಾಡಲಿ. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಪಾತ್ರವಿಲ್ಲ. ಅಧಿಕಾರಿಗಳೇ ಇದೆಲ್ಲಕ್ಕೂ ಮುಖ್ಯ ಕಾರಣ ಎಂದರು.
8ನೇ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ: ಇದು ಲಾಸ್ಟ್ ಎಂದು ಗರಂ
ನ್ಯಾಯಾಲಯ(Court) ವರ್ಗಾವಣೆಗೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವಾದ ನಂತರ ಮೂರು ತಿಂಗಳಲ್ಲಿ ಮಾಡಬೇಕಾಗಿತ್ತು. ಆದರೆ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಮೂರ್ಖತನದಿಂದ ಈ ರೀತಿಯಾಗಿದೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವರ್ಗಾವಣೆ ಮಾಡುತ್ತಿಲ್ಲ. ಮ್ಯೂಚುವಲ್ ವರ್ಗಾವಣೆಗೆ ಯಾರು ಕೇಳುತ್ತಾರೋ ಅವರಿಗೆ ವರ್ಗಾವಣೆ ಕೊಡುವುದು ಉತ್ತಮ ಎಂದರು.
ಇನ್ನು ಒಂದನೆಯ ತರಗತಿಯಿಂದ ಶಾಲೆ ಆರಂಭಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ 1ನೇ ತರಗತಿಯಿಂದ ಆರಂಭಿಸುವ ಬದಲು ಮೊದಲಿಗೆ 3, 4, 5ನೇ ತರಗತಿಗಳನ್ನು ಆರಂಭಿಸುವುದು ಸೂಕ್ತ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ತಾವು ಮಾತನಾಡುವುದಾಗಿ ತಿಳಿಸಿದರು.
ಈ ಬಾರಿ ವಿಧಾನ ಮಂಡಳ ಅಧಿವೇಶನ ಉತ್ತಮ ರೀತಿಯಲ್ಲಿ ನಡೆದಿದೆ. ಸುದೀರ್ಘ ಚರ್ಚೆ ನಡೆಸಿ ವಿಧೇಯಕಗಳು ಪಾಸು ಮಾಡಲಾಗಿದೆ. ಇದು ಉತ್ತಮ ಬೆಳವಣಿಗೆ ಎಂದರು. ನಾನು ಸರ್ಕಾರಿ ಬಂಗಲೆಯನ್ನು ಕೇಳಿದ್ದೆ, ಸರ್ಕಾರ ಕೊಟ್ಟಿದೆ. ಅ. 1ರಂದು ಸರ್ಕಾರಿ ಮನೆಗೆ ತೆರಳುತ್ತೇನೆ ಎಂದರು.