ಭಾಗಶ: ಪದ ತಂದ ಸಂಕಷ್ಟ..ಹಕ್ಕು ಪತ್ರಕ್ಕಾಗಿ ಅಲೆದಾಡಿ ಹೈರಾಣ
ತೆರಿಗೆ ಮಾತ್ರ ಕಟ್ಟಿಸ್ಕೋತಾರೆ, ಎ ಖಾತ್ರಾ ಕೇಳಿದ್ರೆ ಎಸ್ಕೇಪ್/ ಬೆಂಗಳೂರು ಮಹಾನಗರದ ಈ ಅಪಾರ್ಟ್‌ಮೆಂಟ್ ಹಾಗೂ ಏರಿಯಾ ನಿವಾಸಿಗಳ ಗೋಳು ಕೇಳೋರಿಲ್ಲ/ ಮನವಿ ಮಾಡಿ ಹೈರಾಣರಾದ ನಿವಾಸಿಗಳು/
ಬೆಂಗಳೂರು[ಸೆ. 11]: ಆಸ್ತಿ ತೆರಿಗೆ ಪಾವತಿಸಬೇಕು. ರಸ್ತೆ ಮಾಡಿಕೊಡಿ.. ದಾಖಲೆ ಕೊಡಿ.. ಹಕ್ಕು ಪತ್ರ ಬೇಕೆಂದರೆ ಸಿಗೋಲ್ಲ. ಆಡಳಿತ ಮಾತ್ರ ದೂರ..ದೂರ.. ಓಡುತ್ತಲೇ ಇದೆ ..ದಿನ ಓಡುತ್ತಲೆ ಇದೆ. ವ್ಯಾಪ್ತಿಯಲ್ಲಿದ್ದರೂ ಬಿಬಿಎಂಪಿಗೆ ಸೇರಿಲ್ಲ. ಅತ್ತ ಗ್ರಾಮ ಪಂಚಾಯತಿಗೂ ಸೇರಿಲ್ಲ. ಒಂದು ರೀತಿ ಈ ಪ್ರದೇಶಗಳು 'No man's land' ನಂತಾಗಿರೋದು ಸುಳ್ಳಲ್ಲ.
2008ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ 110 ಹಳ್ಳಿಗಳ ಅಂಚಿನ ನಾಗರಿಕರ, ಅಪಾರ್ಟ್ ಮೆಂಟ್ ಖರೀದಿಸಿ, ನೆಲೆ ಕಂಡು ಕೊಂಡವರ ಸಮಸ್ಯೆ ಮಾತ್ರ ಕಚೇರಿ ಎಡತಾಕಿದರೂ ಬಗೆಹರಿದಿಲ್ಲ.
ಸರ್ಕಾರ ಅಥವಾ ಆಡಳಿತಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಸೇರಿದಂತೆ ಎಲ್ಲ ತೆರಿಗೆ ಪಾವತಿಸಬೇಕು. ಹತ್ತಿರ ಹೋಗಿ ‘ಎ’ ಖಾತಾ ಕೇಳಿದರೆ ಬಿಬಿಎಂಪಿ ವ್ಯಾಪ್ತಿಗೆ ಬರೋಲ್ಲ, ಎಂಬ ಸಿದ್ಧ ಉತ್ತರ. ಸಾವಿರಾರು ರೂ ವ್ಯಯಿಸಿದರೆ ನೆಪಕ್ಕೆ ಒಂದು ದಾಖಲೆ ನೀಡಿ ಕಳುಹಿಸುತ್ತಾರೆ. ಕಳೆದ 8 ವರ್ಷಗಳಿಂದ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಬಿಎಂಪಿ ನೋಂದಾಯಿತ ಮತದಾರರಾಗಿಯೇ ವಾರ್ಡ್ 198 ರಲ್ಲಿ ಇಲ್ಲಿನ ನಿವಾಸಿಗಳು ಮತ ಚಲಾಯಿಸಿದ್ದಾರೆ. ಆದರೂ ಇದು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವುದೇ ಇಲ್ಲ. ಒಟ್ಟಿನಲ್ಲಿ ಬೆಂಗಳೂರಿನಲ್ಲಿಯೇ ಇರುವ ಈ ಜನರದ್ದು ಒಂದು ರೀತಿಯ ತ್ರಿಶಂಕು ಸ್ಥಿತಿ!
ಎ ಖಾತೆಗಾಗಿ ಅಲೆದಾಟ-ಹೋರಾಟ
ಕನಕಪುರ ಮುಖ್ಯ ರಸ್ತೆಯಿಂದ ನೈಸ್ ರಸ್ತೆವರೆಗಿನ ಪ್ರದೇಶಗಳೆಲ್ಲ ಅಧಿಕೃತವಾಗಿ ಬಿಬಿಎಂಪಿ ವ್ಯಾಪ್ತಿಗೆ ಬಂದಿದೆಯೇ ಎಂಬುದಕ್ಕೆ ಅಧಿಕಾರಿಗಳ ಬಳಿಯೇ ಉತ್ತರ ಇಲ್ಲ.
ತಲಘಟ್ಟಪುರ ಸಮೀಪದ ಉತ್ತರಹಳ್ಳಿ ಮನವರ್ತಿ ಕಾವಲ್ ಶೋಭಾ ಹಿಲ್ ವ್ಯೂ, ಮತ್ತು ಶೊಭಾ ಸನ್ ಕ್ರೆಸ್ಟ್ ಅಪಾರ್ಟ್ ಮೆಂಟ್‌ನ 650 ಕುಟುಂಬಗಳು ‘ಎ’ ಖಾತಾಗಾಗಿ ಹೋರಾಡಿ ಹೈರಾಣವಾಗಿದ್ದಾರೆ. ಗ್ರಾಪಂ ಬಳಿ ಕೇಳಿದ್ರೆ ಬಿಬಿಎಂಪಿ ಬಳಿ ಹೋಗಿ.. ಬಿಬಿಎಂಪಿ ಬಳಿ ಕೇಳಿದ್ರೆ ಗ್ರಾಪಂ ಬಳಿ ಹೋಗಿ.. ಒಟ್ಟಿನಲ್ಲಿ ಎಲ್ಲಿಯೂ ಸಲ್ಲದವರು ಇವರು! ಹತ್ತಿರದಲ್ಲಿಯೇ ಇರುವ ಮಲ್ಲಸಂದ್ರ ಗ್ರಾಮದ ಪರಿಸ್ಥಿತಿಯೂ ಹೀಗೆನೇ ಇದೆ.
2011-12ರವರೆಗೆ ಗ್ರಾಪಂ ಕಂದಾಯವೇ ಇತ್ತು. ಇದಾದ ಮೇಲೆ ಬಿಬಿಎಂಪಿ ಪ್ರಾಪರ್ಟಿ ತೆರಿಗೆ ಬಂತು. ಗ್ರಾಪಂ ಆಗಲಿ ಅಥವಾ ಬಿಬಿಎಂಪಿಯಾಗಲಿ ಮೊದಲು ಎ ಖಾತಾ ಸೇರಿ ಇತರೆ ಸೌಲಭ್ಯ ನೀಡಬೇಕು ಎಂದು ನಿವಾಸಿ ಸುಬ್ರಹ್ಮಣ್ಯ ಒತ್ತಾಯಿಸುತ್ತಾರೆ.
ಬೆಂಗಳೂರಿನ ಕಟ್ಟಡಗಳ ಮಾಲಿಕರೇ ಎಚ್ಚರ : ಪರಿಶೀಲಿಸಿಕೊಳ್ಳಿ
ಒಂದಿಷ್ಟು ಇತಿಹಾಸ ಮತ್ತು ಮನವಿಗಳ ಮಹಾಪೂರ
2016ರಲ್ಲಿ ಶೋಭಾ ಹಿಲ್‌ವ್ಯೂನಲ್ಲಿ ಇತಿಹಾಸದಲ್ಲಿಯೇ ಮೊದಲು ಎನ್ನಬಹುದಾದ ಖಾತಾ ಮೇಳವೊಂದನ್ನು ಆಯೋಜಿಸಲಾಗಿತ್ತು. ಆಗಲೇ ಪರಿಹಾರ ಕಂಡುಕೊಳ್ಳಲು ಅವಿರತ ಯತ್ನವೂ ನಡೆಯಿತು. 2018ರಲ್ಲಿ ಬಿಬಿಎಂಪಿ ಆಯುಕ್ತರೂ ಈ ಪ್ರದೇಶವನ್ನು ಬಿಬಿಎಂಪಿಗೆ ಸೇರಿಸಿ ಎಂದು ಆಗ್ರಹಿಸಿ... ಸರ್ಕಾರಕ್ಕೆ ಪತ್ರ ಬರೆದರು. ಆದರೆ 2018ರಿಂದಲೂ ಈ ಸಂಬಂಧ ಯಾವ ಉತ್ತರವೂ ಬಂದಿಲ್ಲ. ಇದೀಗ ಕೇಂದ್ರ ಸಚಿವ ಸದಾನಂದ ಗೌಡರಿಗೂ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಆದ ತಪ್ಪಿಗೆ ಪರಿಹಾರ ಏನು?
110 ಹಳ್ಳಿಗಳನ್ನು ಸೇರಿಸುವಾಗ ಈ ಪ್ರದೇಶಕ್ಕೆ ಸಂಬಂಧಿಸಿ ಬಳಸಿದ 'ಭಾಗಶಃ' ಎಂಬ ಪದವೇ ಸಮಸ್ಯೆಯ ಮೂಲ ಕಾರಣ.. ಅಧಿಕಾರಿಗಳು ಇದೇ ಪದವನ್ನಿಟ್ಟುಕೊಂಡು, ಉತ್ತರ ನೀಡುತ್ತಿದ್ದಾರೆ. ಅರಿತೋ, ಗೊತ್ತಾಗದೆಯೋ ಆಗಿರುವ ಪ್ರಮಾದವನ್ನು ಸರಿಪಡಿಸಿ ನಿವಾಸಿಗಳಿಗೆ ಹಕ್ಕು ಪತ್ರ ಸೇರಿದಂತೆ ಇತರೇ ಸೌಲಭ್ಯ ಕೊಡಮಾಡಬೇಕಾದದ್ದು ಬಿಬಿಬಿಎಂಪಿ ಕರ್ತವ್ಯ ಎಂಬುದು ನಿವಾಸಿಗಳ ಆಗ್ರಹ.
ಈ ತಪ್ಪನ್ನು ಸರಿ ಪಡಿಸುವ ಸಂಬಂಧ ರಾಜ್ಯ ಸಂಪುಟ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ನಗರಾಭಿವೃದ್ಧಿ ಖಾತೆ ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಳಿಯೇ ಇದೆ. ದಯಮಾಡಿ ಈ ಸಂಬಂಧ ಗಮನಹರಿಸಿ, ನಿವಾಸಿಗಳ ಬೇಡಿಕೆ ಈಡೇರಿಸಬೇಕು, ಎನ್ನುತ್ತಾರೆ ನಿವಾಸಿ ಸಂಘಗಳ ಒಕ್ಕೂಟದ ಚೈತನ್ಯಾ.