ಬೆಂಗಳೂರಿನ ಕಟ್ಟಡಗಳ ಮಾಲಿಕರೇ ಎಚ್ಚರ : ಪರಿಶೀಲಿಸಿಕೊಳ್ಳಿ
ಬೆಂಗಳೂರಿನಲ್ಲಿ ಶಿಥಿಲಗೊಂಡ ಕಟ್ಟಡಗಳ ಪರಿಶೀಲನೆಗೆ ಬಿಬಿಎಂಪಿ ಇಳಿಯಲಿದೆ. ಇದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನೇ ರಚನೆ ಮಾಡಲಾಗುತ್ತಿದೆ.
ಬೆಂಗಳೂರು [ಸೆ.10]: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಕಟ್ಟಡಗಳ ಪರಿಶೀಲನೆಗೆ ನಗರ ಯೋಜನಾ ಹಾಗೂ ವಲಯ ಮಟ್ಟದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಳಗೊಂಡ ವಲಯವಾರು ತಂಡ ರಚಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಸೂಚಿಸಿದ್ದಾರೆ.
ಭಾನುವಾರ ಸಂಜೆ ಬನಶಂಕರಿಯ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತದ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಬಿಬಿಎಂಪಿ ಎಂಟು ವಲಯಗಳಲ್ಲಿ ಪ್ರತ್ಯೇಕ ತಂಡ ರಚನೆ ಮಾಡಿಕೊಂಡು ಅವಧಿ ಮೀರಿದ, ಭಾಗಶಃ ಕುಸಿತ ಉಂಟಾಗಿರುವ ಕಟ್ಟಡ ಹಾಗೂ ಶಿಥಿಲಗೊಂಡ ಸ್ಥಿತಿಯಲ್ಲಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕುಸಿಯುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ಮತ್ತು ಕಟ್ಟಡಗಳ ಮಾಲಿಕರು ಕಟ್ಟಡ ಸುರಕ್ಷತೆ ಬಗ್ಗೆ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಜತೆಗೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ದುರಸ್ತಿ ಮಾಡಲು ಮಾಲಿಕರಿಗೆ ನೋಟಿಸ್ ನೀಡಲು ಮತ್ತು ಕುಸಿಯುವ ಹಂತದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲು ಮಾಲಿಕರಿಗೆ ಸೂಚನೆ ನೀಡಲಾಗುವುದು. ಒಂದು ವೇಳೆ ಕಟ್ಟಡ ಮಾಲಿಕರು ಕಟ್ಟಡ ತೆರವು ಮಾಡದ ಪಕ್ಷದಲ್ಲಿ ಬಿಬಿಎಂಪಿಯೇ ತೆರವುಗೊಳಿಸಿ, ಮಾಲಿಕರಿಂದ ತೆರವಿಗೆ ಮಾಡಿದ್ದ ವೆಚ್ಚ ವಸೂಲಿ ಮಾಡುವುದಾಗಿ ತಿಳಿಸಿದರು.