ವರದಿ : ಜೆ. ಸತ್ಯರಾಜ್‌

 ಕೋಲಾರ (ಸೆ.30):  ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಈ ಸೋಂಕು ಹೈನೋದ್ಯಮದ ನಿದ್ದೆಗೆಡಿಸಿದೆ.

ಜಿಲ್ಲೆಯಲ್ಲಿ ಹೈನುಗಾರಿಕೆಯೇ ನಂಬಿಕೊಂಡಿರುವ ರೈತ ಕುಟುಂಬಗಳಿಗೆ ಹೈನುಗಾರಿಕೆಯೇ ಪ್ರಮುಖ ಆದಾಯ ಮೂಲವಾಗಿದೆ. ಬಹುಪಾಲು ರೈತರು ಕೃಷಿಯ ಜತೆಗೆ ರಾಸುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 8.47 ಲಕ್ಷ ಜಾನುವಾರುಗಳಿವೆ.

ಕೋವಿಡ್‌ 19 ಹಾಗೂ ಲಾಕ್‌ಡೌನ್‌ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿರುವ ಅನ್ನದಾತರಿಗೆ ಈಗ ಮತ್ತೊಂದು ಸಂಕಷ್ಟಎದುರಾಗಿದೆ. ಹಸು ಮತ್ತು ಎಮ್ಮೆಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ರೋಗ ಉಲ್ಭಣಗೊಳ್ಳುತ್ತಿದೆ. ಈ ಕಾಯಿಲೆ ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ- ಪೂರ್ವ ಯುರೋಪ್‌, ರಷ್ಯಾ ಮತ್ತು ಕಜಕಿಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. 2019ರಲ್ಲಿ ದೇಶದ ಕೇರಳ ಮತ್ತು ಒಡಿಶಾ ರಾಜ್ಯದ ರಾಸುಗಳಿಗೆ ಈ ಕಾಯಿಲೆ ಬಂದಿತ್ತು.

ಆಗಸ್ಟ್‌ನಲ್ಲಿ ರಾಜ್ಯದ ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬೀದರ್‌, ಕೊಪ್ಪಳ, ಕಲಬುರ್ಗಿ, ಯಾದಗಿರಿ, ಹಾಸನ ಹಾಗೂ ರಾಯಚೂರು ಜಿಲ್ಲೆಯಲ್ಲಿ ಚರ್ಮ ಗಂಟು ರೋಗದ ಪ್ರಕರಣಗಳು ವರದಿಯಾಗಿದ್ದವು. ಇದೀಗ ಈ ರೋಗ ಜಿಲ್ಲೆಗೂ ಕಾಲಿಟ್ಟಿದ್ದು, ಗಡಿ ಭಾಗದ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲೂಕಿನ ಹಲವೆಡೆ ರಾಸುಗಳಿಗೆ ರೋಗ ತಗುಲಿದೆ.

ರಾಜ್ಯದಲ್ಲಿ 13 ವರ್ಷದ ಬಳಿಕ ದಾಖಲೆಯ ಬಿತ್ತನೆ ..

ರೋಗ ಲಕ್ಷಣ:  ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತದೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ. ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈಮೇಲೆ ದೊಡ್ಡ ಗಂಟುಗಳ ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೆಲ ರಾಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು.

ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಿ, ದೀರ್ಘ ಕಾಲದವರೆಗೆ ಗರ್ಭ ಧರಿಸದಂತೆ ಆಗಬಹುದು. ಅಲ್ಲದೇ, ಮಾಸು ಚೀಲದ ಮೂಲಕ ರೋಗ ಪ್ರಸರಣದ ಸಾಧ್ಯತೆಯಿದೆ. ರೋಗಕ್ಕೆ ಶೀಘ್ರವೇ ಚಿಕಿತ್ಸೆ ಕೊಡಿಸದಿದ್ದರೆ ಗಂಟುಗಳು ಕೊಳೆತು, ನೊಣ ಮತ್ತು ಉಣ್ಣೆ ಕಡಿತದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ರೋಗದ ಸ್ಥಿತಿ ಗಂಭೀರವಾದರೆ ರಾಸುಗಳು ಸಾವು ಸಂಭವಿಸಬಹುದು.

ಚಿಕಿತ್ಸೆ ಏನು: ರೋಗಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಪ್ರತ್ಯೇಕಿಸಬೇಕು. ರಾಸುಗಳಿಗೆ ಸೊಳ್ಳೆ, ನೊಣ, ಮತ್ತು ಉಣ್ಣೆ ನಿವಾರಕ ಮುಲಾಮು ಹಚ್ಚಬೇಕು. ರಾಸುಗಳಿಗೆ ಕಡ್ಡಾಯವಾಗಿ ಮೇಕೆ ಸಿಡುಬು (ಗೋಟ್‌ ಪಾಕ್ಸ್‌) ನಿರೋಧಕ ಲಸಿಕೆ ಹಾಕಿಸಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು. ಟೆಟ್ರಾ ಸೈಕ್ಲಿನ್‌, ಪೆನ್ಸಿಲಿನ್‌ನಂತಹ ಆಂಟಿ ಬಯೋಟಿಕ್‌ ಚುಚ್ಚುಮದ್ದು ನೀಡಬಹುದು. ರೋಗ ಹತೋಟಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ರಾಸುಗಳಿಗೆ ಮೇಕೆ ಸಿಡುಬು ಲಸಿಕೆ ಹಾಕಲಾಗುತ್ತಿದೆ.

ಹರಡುವ ಪರಿ ಹೇಗೆ?

ಸೊಳ್ಳೆ, ನೊಣ, ಉಣ್ಣೆ ಹಾಗೂ ರೋಗಪೀಡಿತ ಪ್ರಾಣಿಗಳ ನೇರ ಸಂಪರ್ಕದಿಂದ ಈ ರೋಗ ರಾಸುಗಳಿಗೆ ಹರಡುತ್ತದೆ. ಅಲ್ಲದೇ, ರೋಗದಿಂದ ಬಳಲುತ್ತಿರುವ ರಾಸುಗಳು ತಿಂದು ಬಿಟ್ಟಮೇವು ಮತ್ತು ಕುಡಿದು ಬಿಟ್ಟನೀರಿನ ಸೇವನೆಯಿಂದಲೂ ಈ ರೋಗ ಬರುತ್ತದೆ. ಜೊತೆಗೆ ಸೋಂಕಿತ ರಾಸುವಿನ ರಕ್ತ, ಕೀವು, ದೈಹಿಕ ಸ್ರಾವದ ನೇರ ಸಂಪರ್ಕದಿಂದಲೂ ಬರುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಕ್ಯಾಪ್ರೈನ್‌ ಪಾಕ್ಸ್‌ ವೈರಾಣುವಿನಿಂದ ಬರುವ ಈ ರೋಗವು ಕುರಿ ಮತ್ತು ಮೇಕೆಗಳಲ್ಲಿ ಸಿಡುಬಿನ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ. ರಾಸುಗಳ ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಯಲ್ಲಿ ಇರುವ ಈ ವೈರಾಣು 35 ದಿನಗಳ ಕಾಲ ಬದುಕಿರುತ್ತದೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ರೈತರು ಆತಂಕಪಡದೆ ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಗಪೀಡಿತ ರಾಸುಗಳಿಗೆ ಶೀಘ್ರವೇ ಲಸಿಕೆ ಹಾಕಿಸಬೇಕು.

ಡಾ.ಎನ್‌.ಜಗದೀಶ್‌ಕುಮಾರ್‌, ಉಪ ನಿರ್ದೇಶಕ, ಪಶುಪಾಲನಾ ಇಲಾಖೆ