ರಾಜ್ಯದಲ್ಲಿ 13 ವರ್ಷದ ಬಳಿಕ ದಾಖಲೆಯ ಬಿತ್ತನೆ
ಈ ಬಾರಿ ರಾಜ್ಯಾದ್ಯಂತ ಮುಂಗಾರು ಹಂಗಾಮಿನ ವೇಳೆ ಸಕಾಲದಲ್ಲಿ ವರುಣನ ಕೃಪೆ ತೋರಿದ ಪರಿಣಾಮ ರಾಜ್ಯದಲ್ಲಿ ಕೃಷಿ ಇಲಾಖೆ ಗುರಿ ಮೀರಿ ಬಿತ್ತನೆ ಕಾರ್ಯ ನಡೆದಿದೆ. ಒಟ್ಟು 73 ಲಕ್ಷ ಹೆಕ್ಟೇರ್‌ನಲ್ಲಿ ಗುರಿ ಇದ್ದ ಬಿತ್ತನೆ ಪ್ರಮಾಣ 75.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿ ಬಂಪರ್ ಬೆಳೆ ನಿರೀಕ್ಷಿಸಲಾಗಿದೆ.
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.20): ಬರೋಬ್ಬರಿ 13 ವರ್ಷಗಳ ಬಳಿಕ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಪ್ರಗತಿ ಸಾಧಿಸಿದೆ. 2020-21ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಒಟ್ಟಾರೆ ಇದುವರೆಗೂ ಶೇ.103.49 ರಷ್ಟುಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಹೌದು, ಈ ಬಾರಿ ರಾಜ್ಯಾದ್ಯಂತ ಮುಂಗಾರು ಹಂಗಾಮಿನ ವೇಳೆ ಸಕಾಲದಲ್ಲಿ ವರುಣನ ಕೃಪೆ ತೋರಿದ ಪರಿಣಾಮ ರಾಜ್ಯದಲ್ಲಿ ಕೃಷಿ ಇಲಾಖೆ ಗುರಿ ಮೀರಿ ಬಿತ್ತನೆ ಕಾರ್ಯ ನಡೆದಿದೆ. ಒಟ್ಟು 73 ಲಕ್ಷ ಹೆಕ್ಟೇರ್‌ನಲ್ಲಿ ಗುರಿ ಇದ್ದ ಬಿತ್ತನೆ ಪ್ರಮಾಣ 75.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿ ಬಂಪರ್ ಬೆಳೆ ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ನೀರಾವರಿ ಪ್ರದೇಶದಲ್ಲಿ ಒಟ್ಟು 19.40 ರಷ್ಟುಹೆಕ್ಟೇರ್ ಗುರಿ ಪೈಕಿ 19.64 ರಷ್ಟುಗುರಿ ಸಾಧಿಸಿ ಶೇ.101.21 ಪ್ರಗತಿ ಸಾಧಿಸಿದರೆ ಮಳೆಯಾಶ್ರಿತ ಒಟ್ಟು 53.60 ಹೆಕ್ಟೇರ್ ಪೈಕಿ ಈ ವರ್ಷ 55.91 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೊಂಡು ಶೇ.104.31 ರಷ್ಟುಗುರಿ ಸಾಧಿಸಲಾಗಿದೆ. ಕಳೆದ 2019-20 ರಲ್ಲಿ ಶೇ.84 ರಷ್ಟುಬಿತ್ತನೆ ಪ್ರಮಾಣ ಮಾತ್ರ ಇಡೀ ರಾಜ್ಯಾದ್ಯಂತ ದಾಖಲುಗೊಂಡಿತ್ತು.
ಬಿಸಿಲು, ಬಯಲು ಸೀಮೆ ಜಿಲ್ಲೆಗಳಲ್ಲಿ ಜಾಸ್ತಿ:
ಸತತ ಹತ್ತಾರು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ತೀವ್ರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಬಯಲು ಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಹಾಗೂ ಬಿಸಿಲುನಾಡು ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರುಗಿ, ವಿಜಯಪುರ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಈ ವರ್ಷ ಮಳೆರಾಯನ ಕೃಪೆಗೆ ನಿರೀಕ್ಷೆಗೂ ಮೀರಿ ಬಿತ್ತನೆ ಪ್ರಗತಿ ಆಗಿದೆ.
ಏಕದಳದಾನ್ಯಗಳಲ್ಲಿ ಶೇ.106 ಪ್ರಗತಿ:
ರಾಜ್ಯದಲ್ಲಿ ಈ ಬಾರಿ ರಾಗಿ, ಭತ್ತ, ಮೆಕ್ಕೆಜೋಳ, ಸಜ್ಜೆ, ತೃಣಧಾನ್ಯಗಳು ಮತ್ತಿತರ ಏಕದಳ ಧಾನ್ಯಗಳ ಬಿತ್ತನೆ ಗುರಿ ನೀರಾವರಿ, ಮಳೆಯಾಶ್ರಿತ ಸೇರಿ ಒಟ್ಟು 31.34 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದು ಈ ವರ್ಷ ಉತ್ತಮ ಮಳೆಯಿಂದ 33.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.106 ರಷ್ಟುಗುರಿ ಸಾಧಿಸಲಾಗಿದೆ. ಇನ್ನು ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮಟಕಿ ಮತ್ತಿತರ ದ್ವಿದಳ ಧಾನ್ಯಗಳು ಒಟ್ಟು 18.81 ಲಕ್ಷ ಹೆಕ್ಟೇರ್ ಗುರಿ ಮೀರಿ 19.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೇಳು, ಸಾಸಿವೆ ಮತ್ತಿತರ ಎಣ್ಣೆಕಾಳು ಒಟ್ಟು ನೀರಾವರಿ, ಮಳೆಯಾಶ್ರಿತ ಸೇರಿ 11 ಲಕ್ಷ ಹೆಕ್ಟೇರ್ ಪೈಕಿ 10.13 ರಷ್ಟುಪ್ರಗತಿ ಸಾಧಿಸಿ ಶೇ.92 ರಷ್ಟುಗುರಿ ಸಾಧಿಸಲಾಗಿದೆ. ಈ ತಿಂಗಳಾಂತ್ಯದವರೆಗೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಅವಕಾಶ ಇರುವುದರಿಂದ ರಾಜ್ಯದಲ್ಲಿ ಈ ಬಾರಿ ಬಿತ್ತನೆ ಪ್ರಮಾಣ ಶೇ.120 ರಷ್ಟುಗುರಿ ಸಾಧಿಸುವ ಅಂದಾಜು ಮಾಡಲಾಗಿದೆ.
ಕೊರೋನಾ ಎಫೆಕ್ಟ್: ಭತ್ತದ ಬೆಳೆ ಭರ್ಜರಿ ಹೆಚ್ಚಳ! ..
ಜಿಲ್ಲಾವಾರು ಬಿತ್ತನೆ ಪ್ರಗತಿ ಶೇಕಡವಾರು:
ಬೆಂಗಳೂರು ನಗರ ಶೇ.125, ಬೆಂಗಳೂರು ಗ್ರಾಮಾಂತರ ಶೇ.98, ರಾಮನಗರ ಶೇ.95, ಕೋಲಾರ ಶೇ.108, ಚಿಕ್ಕಬಳ್ಳಾಪುರ ಶೇ.93, ತುಮಕೂರು ಶೇ.94, ಶಿವಮೊಗ್ಗ ಶೇ.97, ಚಿತ್ರದುರ್ಗ ಶೇ.124, ದಾವಣಗೆರೆ ಶೇ.98, ಮೈಸೂರು ಶೇ.94, ಚಾಮರಾಜನಗರ ಶೇ.93, ಮಂಡ್ಯ ಶೇ.83, ಕೊಡಗು ಶೇ.83, ಹಾಸನ ಶೇ.97, ಚಿಕ್ಕಮಂಗಳೂರು ಶೇ.108, ದಕ್ಷಿಣ ಕನ್ನಡ ಶೇ.98, ಉಡುಪಿ ಶೇ.99, ಧಾರವಾಡ ಶೇ.103, ಗದಗ ಶೇ.114, ಹಾವೇರಿ ಶೇ.105, ಉತ್ತರ ಕನ್ನಡ ಶೇ.95, ಬೆಳಗಾವಿ ಶೇ.100, ವಿಜಯಪುರ ಶೇ.103, ಬಾಗಲಕೋಟೆ ಶೇ.112, ರಾಯಚೂರು ಶೇ.135, ಕೊಪ್ಪಳ ಶೇ.131, ಬಳ್ಳಾರಿ ಶೇ.102, ಕಲಬುರುಗಿ ಶೇ.98, ಯಾದಗಿರಿ ಶೇ.99, ಬೀದರ್ ಶೇ.102 ಬಿತ್ತನೆ ಪೂರ್ಣಗೊಂಡಿದೆ.