Asianet Suvarna News Asianet Suvarna News

ಜ.1 ರಿಂದ ಮನೆಗಳಿಗೆ ಶ್ರೀರಾಮನ ಮಂತ್ರಾಕ್ಷತೆ ವಿತರಣೆ ಅಭಿಯಾನ

ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ನೆಲಅಂತಸ್ತಿನ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ (ಬಾಲರಾಮ) ನೂತನ ವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮನೆಮನೆಗಳಿಗೆ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ವಿತರಿಸುವ ಅಭಿಯಾನವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿದೆ. 

Shri Rama's Mantrakshat Distribution Campaign on Dec 1st in Dakshina Kannada grg
Author
First Published Dec 21, 2023, 11:30 PM IST

ಮಂಗಳೂರು(ಡಿ.21):  ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಸಲುವಾಗಿ ಮಂಗಳೂರು ವಿಭಾಗದ ಎಂಟು ಲಕ್ಷ ಮನೆಗಳಿಗೆ ಮಂತ್ರಾಕ್ಷತೆ ವಿತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜನವರಿ 22 ರಂದು 3,000 ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ನೇರಪ್ರಸಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ಇಲ್ಲಿನ ವಿಹಿಂಪ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ನೆಲಅಂತಸ್ತಿನ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ (ಬಾಲರಾಮ) ನೂತನ ವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮನೆಮನೆಗಳಿಗೆ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ವಿತರಿಸುವ ಅಭಿಯಾನವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಮಂಗಳೂರು ವಿಭಾಗದಲ್ಲಿ ಎಂಟು ಲಕ್ಷ ಮನೆಗಳಿಗೆ ಮಂತ್ರಾಕ್ಷತೆ ವಿತರಣೆಯ ಕಾರ್ಯಕ್ರಮದ ಯೋಜನೆ ಈಗಾಗಲೇ ನಡೆದಿದೆ. ಜನವರಿ 1 ರಿಂದ 15 ರ ತನಕ ನಮ್ಮ ಕಾರ್ಯಕರ್ತರು ಮಂತ್ರಾಕ್ಷತೆಯನ್ನು ಮನೆಗಳಿಗೆ ವಿತರಿಸಲಿದ್ದಾರೆ ಎಂದರು.

ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!

ಶ್ರೀರಾಮನ ನೂತನ ವಿಗ್ರಹ ಪ್ರತಿಷ್ಠಾಪನೆಯ ದಿನದಂದು ಕೊಡಗು ಸೇರಿದಂತೆ ಕರಾವಳಿಯ ಸಾವಿರಾರು ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದರೊಂದಿಗೆ ಅಯೋಧ್ಯೆಯಲ್ಲಿ ನಡೆಯುವ ಎಲ್ಲ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನೂ ರಾಮಭಕ್ತರಿಗೆ ದೂರದರ್ಶನ ಮೂಲಕ ನೇರಪ್ರಸಾರದ ಮೂಲಕ ನೋಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಮನೆ ಸಂಪರ್ಕ ಅಭಿಯಾನ:

ಜನವರಿ 22 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ಸುಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇಡೀ ದೇಶದಲ್ಲಿ ಈ ಸಂಧರ್ಭದಲ್ಲಿ ಅಪೂರ್ವಭೂತ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ. ಈ ಅಮೃತ ಗಳಿಗೆಯನ್ನು ಪ್ರತಿಯೊಬ್ಬ ರಾಮಭಕ್ತರು ತಮ್ಮ ತಮ್ಮ ಊರು ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸುವಂತಾಗಲು ಮನೆ ಮನೆ ಸಂಪರ್ಕ ಅಭಿಯಾನವನ್ನು ಕೈಗೊಂಡಿದ್ದು, ಪ್ರತೀ ಮನೆಗೆ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ಆಮಂತ್ರಣ ಪತ್ರವನ್ನು ಕೊಡಲಾಗುವುದು. ಹಾಗೂ 22 ರಂದು ದಿನವಿಡೀ ನಡೆಯುವ ಕಾರ್ಯಕ್ರಮದ ವಿವರವನ್ನು ತಿಳಿಸಲಾಗುವುದು. ಈಗಾಗಲೇ ಬೂತ್, ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ತಲುಪಿಸಿದ್ದು, ಮಂತ್ರಾಕ್ಷತೆಯನ್ನು ವಿತರಿಸುವ ಈ ಅಭಿಯಾನದಲ್ಲಿ ಈಗಾಗಲೇ ತಂಡಗಳು ರಚನೆಯಾಗಿವೆ. ಈ ಅಭಿಯಾನದಲ್ಲಿ ಸಂಘಟನೆಗಳು, ಸಂಘಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಕೈಜೋಡಿಸಿವೆ. ಜನವರಿ 7ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದರು.

ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಅಧ್ಯಕ್ಷ ಎಚ್ ಕೆ ಪುರುಷೋತ್ತಮ್, ಪ್ರಾಂತ ಸಹ ಸೇವಾ ಪ್ರಮುಖ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಇದ್ದರು.

ಉಡುಪಿ ಶ್ರೀಕೃಷ್ಣನ ನೈವೇದ್ಯಕ್ಕೆ ಶುದ್ಧ ಸಾವಯವ ಭತ್ತ ಅಭಿಯಾನ!

ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ

ಶ್ರೀ ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ ಶುಕ್ಲಪಕ್ಷ, ದ್ವಾದಶಿಯ ಸೋಮವಾರದ ಪುಣ್ಯ ದಿನದಂದು ಶ್ರೀ ರಾಮದೇವರ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮ, ಬೂತ್ ಕೇಂದ್ರಗಳ ಎಲ್ಲ ಮಠ, ಮಂದಿರ, ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ರಾಮ ಜಯರಾಮ ಜಯ ಜಯ ರಾಮ ಎಂಬ ತಾರಕಮಂತ್ರದ 108 ಬಾರಿ ಜಪ, ಹನುಮಾನ್ ಚಾಲೀಸಾ ಪಠಣ, ಭಜನೆ, ಕೀರ್ತನೆ, ಸುಂದರ ಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರದ ಪಠಣ, ನಮ್ಮ ನಮ್ಮಇಷ್ಟ ದೇವರ ಜಪ ಮತ್ತು ಪ್ರಸಾದ ವಿತರಣೆ ಮಾಡಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕರೆ ಕೊಟ್ಟಿದೆ. ಈಗಾಗಲೇ ಸಾವಿರಾರು ಧಾರ್ಮಿಕ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಗಳ ಸಿದ್ಧತೆ ನಡೆಸಿದ್ದು, ಲಕ್ಷಾಂತರ ಭಕ್ತರು ಈ ವೈದಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಮತ್ತೊಮ್ಮೆ ದೀಪಾವಳಿ ಸಡಗರ:

ಪ್ರಾಣ ಪ್ರತಿಷ್ಠಾಪನೆಯ ದಿನದ ಸಂಜೆ ಸೂರ್ಯಾಸ್ತವಾದ ಮೇಲೆ ಪ್ರತಿಯೊಬ್ಬ ರಾಮಭಕ್ತರು ತಮ್ಮ ತಮ್ಮ ಮನೆಯ ಮುಂದೆ ಎಲ್ಲ ದೇವಾದಿ ದೇವತೆಗಳನ್ನು ಪ್ರಸನ್ನಗೊಳಿಸಲು ಕನಿಷ್ಠ 5 ದೀಪಗಳನ್ನು ಬೆಳಗುವುದರೊಂದಿಗೆ ಮತ್ತೊಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರತೀ ಮನೆಯಲ್ಲಿ ಮನೆಯವರೆಲ್ಲ ಸೇರಿ ಅಯೋಧ್ಯೆ ಶ್ರೀರಾಮ ಮಂದಿರವಿರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾ ಮಂಗಳಾರತಿಯನ್ನು ಮಾಡುವುದರ ಮೂಲಕ ಶ್ರೀರಾಮಚಂದ್ರ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

Follow Us:
Download App:
  • android
  • ios