ವಿಕೃತ ಕಾಮಿಗೆ ಕನಿಕರ ಬೇಡ, ಉಮೇಶ್ ರೆಡ್ಡಿ ಈಗಲೇ ಗಲ್ಲಿಗೇರಿಸಿ: ಸಂತ್ರಸ್ತೆ ಪುತ್ರ
* ವಿಕೃತ ಕಾಮಿಯ ಕೃತ್ಯಕ್ಕೆ ಪ್ರತ್ಯಕ್ಷ ದರ್ಶಿಯಾಗಿದ್ದ ಪುತ್ರನ ನೋವು
* ಇಂದಿನ ವ್ಯವಸ್ಥೆಯೇ ಸರಿಯಿಲ್ಲ: ಗಲ್ಲು ವಿಳಂಬಕ್ಕೆ ಬೇಸರ
* ಸಂತ್ರಸ್ತ ಹೆಂಗಸರು ಮರ್ಯಾದೆಗೆ ಅಂಜಿ ದೂರು ಕೊಡುತ್ತಿರಲಿಲ್ಲ
ಬೆಳಗಾವಿ(ಅ.01): ‘ವಿಕೃತ ಕಾಮಿ ಉಮೇಶ ರೆಡ್ಡಿಯಂತಹ ಕ್ರೂರಿಗಳಿಗೆ ತ್ವರಿತ ಶಿಕ್ಷೆಯಾಗಬೇಕು. ಆದರೆ, ಇಂದಿನ ವ್ಯವಸ್ಥೆಯೇ ಸರಿ ಇಲ್ಲ. ಹಾಗಾಗಿ, ಇಂತಹ ಕ್ರೂರಿಗಳು ಹುಟ್ಟುತ್ತಲೇ ಇದ್ದಾರೆ. ಇಂತಹವರನ್ನು ಮಟ್ಟಹಾಕಲು ಗಲ್ಲು ಶಿಕ್ಷೆಯನ್ನು ತ್ವರಿತವಾಗಿ ವಿಧಿಸಬೇಕು.’
ಇದು ವಿಕೃತ ಕಾಮಿ ಉಮೇಶ ರೆಡ್ಡಿಯಿಂದ ಅತ್ಯಾಚಾರ, ಹತ್ಯೆಗೀಡಾದ ಸಂತ್ರಸ್ತೆಯೊಬ್ಬರ ಪುತ್ರನ ಒತ್ತಾಯ. ಉಮೇಶ್ ರೆಡ್ಡಿಯಿಂದ ತನ್ನ ತಾಯಿ ದೌರ್ಜನ್ಯಕ್ಕೊಳಗಾಗಿದ್ದ ವೇಳೆ ಪ್ರತ್ಯಕ್ಷ ದರ್ಶಿಯಾಗಿದ್ದ ಅವರು ಕನ್ನಡಪ್ರಭದ ಜೊತೆ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಇಂತಹ ಕ್ರೂರಿಗಳಿಗೆ ಶಿಕ್ಷೆ ವಿಧಿಸುವಲ್ಲಿ ವಿಳಂಬವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಇಂದಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಮೇಶ ರೆಡ್ಡಿ ಅತ್ಯಂತ ಕ್ರೂರಿ. ಆತನಿಗೆ ಮನುಷ್ಯತ್ವದ ಬೆಲೆಯೇ ಗೊತ್ತಿಲ್ಲ. ಇಂತಹ ಕ್ರೂರಿಗಳನ್ನು ಬೇರುಮಟ್ಟದಲ್ಲಿ ಕಿತ್ತು ಹಾಕಬೇಕಿದೆ. ಹಾಗಾದಾಗ ಮಾತ್ರ ಇಂತಹವರು ಹುಟ್ಟುವುದಿಲ್ಲ ಎಂದಿದ್ದಾರೆ.
ಉಮೇಶ್ ರೆಡ್ಡಿಗೆ ಗಲ್ಲು ಕಾಯಂ.. ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು
ಯಾವ ಕನಿಕರವೂ ಅನಗತ್ಯ:
ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು(Hanging) ಹೈಕೋರ್ಟ್ ಕಾಯಂಗೊಳಿಸಿದೆ ನಿಜ. ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು 6 ವಾರಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಜೈಲಿನಲ್ಲಿ ಆತ ಕೊಳೆಯುತ್ತ ಬಿದ್ದಿದ್ದಾನೆ. ಆತನ ಬಗ್ಗೆ ಯಾರೂ ಕನಿಕರ ತೋರುವ ಅಗತ್ಯವೂ ಇಲ್ಲ. ಇಂತಹ ಕ್ರೂರಿಗಳಿಗೆ ಶಿಕ್ಷೆ ವಿಧಿಸುವಲ್ಲಿ ವಿಳಂಬವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾನೂನು ವ್ಯವಸ್ಥೆಯನ್ನು ಮತ್ತಷ್ಟುಬಲಪಡಿಸಬೇಕು. ಇಂತಹ ಕ್ರೂರಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಈ ಮೂಲಕ ಉಮೇಶ ರೆಡ್ಡಿಯಿಂದ ಅತ್ಯಾಚಾರ, ಹತ್ಯೆಗೀಡಾದ ಮಹಿಳೆಯರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸಂತ್ರಸ್ತ ಹೆಂಗಸರು ಮರ್ಯಾದೆಗೆ ಅಂಜಿ ದೂರು ಕೊಡುತ್ತಿರಲಿಲ್ಲ
ವಿಕೃತ ಕಾಮಿ ಉಮೇಶ ರೆಡ್ಡಿಯ ಭಯಾನಕ ಕರಾಳ ಇತಿಹಾಸವನ್ನು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನ್ಯಾಮಗೌಡ ಅವರು ಕನ್ನಡಪ್ರಭಕ್ಕೆ ಬಿಚ್ಚಿಟ್ಟಿದ್ದಾರೆ. ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ ಆಗಿರುವುದರಿಂದ ನನಗೆ ಖುಷಿಯಾಗಿದೆ. 1998ರಲ್ಲಿ ಸಂತ್ರಸ್ತೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿಕಾರಿ ನಾನೇ ಆಗಿದ್ದೆ. ಆಗ ನಾನು ಪೀಣ್ಯ ಪೊಲೀಸ್(Police) ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದೆ.
ಹೆಣ್ಮಕ್ಕಳ ಒಳ ಉಡುಪಿನಲ್ಲಿ ವಿಕೃತ ಮೋಜು... ಉಮೇಶ್ ರೆಡ್ಡಿಗೆ ಗಲ್ಲು ಫಿಕ್ಸ್!
1998ರ ಫೆ.28ರಂದು ಮಹಿಳೆಯ ಕೊಲೆ ಮಾಡಿದ್ದ ಉಮೇಶ ರೆಡ್ಡಿಯನ್ನು ಅವರ ಮಗ ನೋಡಿದ್ದ. ಮನೆಯ ಹತ್ತಿರ ಒಂದು ಬೈಕ್ ಪತ್ತೆಯಾಗಿತ್ತು. ನಗ್ನವಾಗಿಸಿ ಕೊಲೆ ಮಾಡಿದ್ದ. ಸಂತ್ರಸ್ತೆಯ ಪುತ್ರನಿಗೆ ನಿಮ್ಮ ತಾಯಿ ಮೈಮೇಲೆ ದೆವ್ವ ಬಂದಿದೆ. ಡಾಕ್ಟರ್ ಕರೆದುಕೊಂಡು ಬರುತ್ತೇನೆ ಎಂದು ಹೇಳಿ, ಕೃತ್ಯ ಎಸಗಿದ ಮೇಲೆ ಪರಾರಿಯಾಗಿದ್ದ. ಎರಡು ದಿನಗಳ ಬಳಿಕ 1998ರ ಮಾ.2ರಂದು ಮಾಡರ್ನ್ ಕಾಲೋನಿಯಲ್ಲಿ ಕೃತ್ಯ ಎಸಗುವಾಗ ಪೀಣ್ಯ ಠಾಣೆಯ ಪೊಲೀಸರು ಬಂಧಿಸಿದ್ದೆವು. ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟುಸಾಕ್ಷ್ಯಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಿದ್ದೇವೆ. ಸಂತ್ರಸ್ತೆಯ ಮಗ ಇಂದಿಗೂ ನನ್ನ ಜೊತೆ ಸಂಪರ್ಕದಲ್ಲಿದ್ದಾನೆ ಎಂದಿದ್ದಾರೆ.
ಉಮೇಶ್ ರೆಡ್ಡಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಒಂಟಿ ಮಹಿಳೆಯರಿದ್ದ ಮನೆಗೆ ನುಗ್ಗುತ್ತಿದ್ದ. ರೂಮಿನಲ್ಲಿ ಮಹಿಳೆಯನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಬಹಳಷ್ಟು ಮಂದಿ ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.