ವಿಜಯನಗರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ, ಮುಖ್ಯ ಶಿಕ್ಷಕ ಉಮೇಶ್ ಬಾಳೆಹಣ್ಣಿನ ಆಸೆ ತೋರಿಸಿ ಇಬ್ಬರು ವಿದ್ಯಾರ್ಥಿಗಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಈ ಅಮಾನವೀಯ ಕೃತ್ಯವನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಶಿಕ್ಷಕನ ಅಮಾನತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ವಿಜಯನಗರ (ಮಾ.05): ವಿದ್ಯಾ ದೇಗುಲದಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಗುರುಗಳೇ, ಅಮಾನವೀಯವಾಗಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿರುವ ಆಘಾತಕಾರಿ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ವಿರುದ್ಧ ಗ್ರಾಮಸ್ಥರು ಈಗ ರೊಚ್ಚಿಗೆದ್ದಿದ್ದಾರೆ.
ಘಟನೆಯ ವಿವರ:
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಅವರು ಇಬ್ಬರು ಪುಟ್ಟ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣಿನ ಆಸೆ ತೋರಿಸಿ, ಅವರಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರು ತಕ್ಷಣವೇ ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಯಾವುದೇ ರೀತಿಯ ದೈಹಿಕ ಶ್ರಮದ ಕೆಲಸ ಅಥವಾ ಶೌಚಾಲಯ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡಿಸಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಶಿಕ್ಷಕ ಉಮೇಶ್ ಇವುಗಳನ್ನು ಗಾಳಿಗೆ ತೂರಿದ್ದಾರೆ.
ಪ್ರಶ್ನಿಸಿದವರಿಗೆ ಕೇಸ್ ಹಾಕುವ ಬೆದರಿಕೆ:
ಯುವಕರು ತಪ್ಪು ಒಪ್ಪಿಕೊಳ್ಳುವಂತೆ ಶಿಕ್ಷಕನಿಗೆ ಒತ್ತಾಯಿಸಿದಾಗ, ಶಿಕ್ಷಕ ಉಮೇಶ್ ಉದ್ಧಟತನ ಮೆರೆದಿದ್ದಾರೆ. 'ನನ್ನನ್ನು ಪ್ರಶ್ನಿಸಲು ನೀವ್ಯಾರು? ನಿಮ್ಮ ಮೇಲೆ ಪೊಲೀಸ್ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದಾರೆ. ಶಿಕ್ಷಕನ ಈ ಹಠಮಾರಿ ಧೋರಣೆ ಮತ್ತು ಕಾನೂನಿನ ಬಗ್ಗೆ ಇರುವ ಅಹಂಕಾರ ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದೆ.
ಶಾಲೆಯ ಮುಂದೆ ಗ್ರಾಮಸ್ಥರ ಪ್ರತಿಭಟನೆ:
ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. 'ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಶಿಕ್ಷಕರೇ ಈ ರೀತಿ ವರ್ತಿಸಿದರೆ ಮಕ್ಕಳ ಭವಿಷ್ಯವೇನು? ಇಂತಹ ಶಿಕ್ಷಕರು ನಮ್ಮೂರಿಗೆ ಬೇಡ' ಎಂದು ಘೋಷಣೆ ಕೂಗಿದರು. ಕೂಡಲೇ ಮುಖ್ಯ ಶಿಕ್ಷಕ ಉಮೇಶ್‌ನನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು:
ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (BEO) ಅಧಿಕೃತ ದೂರು ನೀಡಿದ್ದಾರೆ. ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ಬಾಲ ಕಾರ್ಮಿಕರಂತೆ ಬಳಸಿಕೊಂಡಿರುವ ಶಿಕ್ಷಕನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಸದ್ಯ ಬಿಇಓ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವ ಭರವಸೆ ನೀಡಿದ್ದು, ಮುಂದಿನ ಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.


