ಜೈಲಿನಲ್ಲಿರುವ ಪತಿ, ತನ್ನನ್ನು ನೋಡಲು ಬಾರದ ಪತ್ನಿಗೆ ಬೆದರಿಸಲು ನಾಲ್ವರು ಸಹಚರರನ್ನು ಬುರ್ಖಾ ಹಾಕಿ ಕಳುಹಿಸಿದ್ದಾನೆ. ಆದರೆ, ಸ್ಥಳೀಯರಿಗೆ ಅನುಮಾನ ಬಂದು ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ (ಜೂ.12): ಜೈಲಿನಲ್ಲಿರುವ ನನ್ನನ್ನು ನೋಡಲು ಬಂದಿಲ್ಲ, ಖರ್ಚಿಗೆ ಹಣವನ್ನೂ ನೀಡುತ್ತಿಲ್ಲ ಎಂದು ಪತ್ನಿಗೆ ಬೆದರಿಸಲು ಕಳುಹಿಸಲು ನಾಲ್ವರು ಬುರ್ಖಾಧಾರಿಗಳಿಗೆ ಗೂಸಾ ಕೊಟ್ಟು ಪೊಲೀಸರಿಗೊಪ್ಪಿದ ವಿಚಿತ್ರ ಘಟನೆ ಶಿವಮೊಗ್ಗದ ಕೆಆರ್ ಪುರಂನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೈದಿ ತನ್ನ ಪತ್ನಿಗೆ ಬೆದರಿಸಲು ಕಾರಣವೇನು?

ಕೊಲೆ ಪ್ರಕರಣ ಸಂಬಂಧ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಪತಿ. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ಬಳಿಕ ಪತ್ನಿ ಕೈದಿಯನ್ನ ನೋಡಲಾಗಲಿ, ವಿಚಾರಣಿಸಲಾಗಲಿ ಬಂದಿಲ್ಲ. ಇತ್ತ ಜೈಲಿನಲ್ಲಿದ್ದ ಕೈದಿಗೆ ಪತ್ನಿ ಮೇಲೆ ಕೋಪ. ಕನಿಷ್ಟ ಖರ್ಚಿಗಾದರೂ ಹಣ ಕಳಿಸಬೇಕಿತ್ತು. ಹಣ ಕೂಡ ಕಳಿಸಿಲ್ಲವೆಂದು ಪತ್ನಿಗೆ ಬೆದರಿಕೆ ಹಾಕಲು ಮುಂದಾದ ಪತಿ. ತನ್ನ ನಾಲ್ವರು ಸಹಚರರನ್ನು ಮನೆ ಬಳಿ ಕಳಿಸಿದ್ದ.

ಕೈದಿಯ ಪತ್ನಿ ಬೆದರಿಸಲು ಬಂದು ಗೂಸಾ ತಿಂದ ಬುರ್ಖಾಧಾರಿಗಳು!

ಯಾರಿಗೂ ಗುರುತು ಸಿಗಬಾರದೆಂದು ಬುರ್ಖಾಧಾರಿಯಾಗಿ ಕೈದಿಯ ಆದೇಶದಂತೆ ಪತ್ನಿಗೆ ಬೆದರಿಕೆ ಹಾಕಲು ಬಂದಿದ್ದರು. ಕೈದಿಗಳ ಪ್ಲಾನೇ ತಿರುಗುಬಾಣವಾಗಿದೆ. ಬುರ್ಖಾಧಾರಿ ಕೈದಿಗಳು ಮಹಿಳೆಯ ಮನೆ ಬಳಿ ಬರುತ್ತಿದ್ದಂತೆ ಅವರ ವೇಷ, ವರ್ತನೆಯಿಂದ ಸ್ಥಳೀಯರಿಗೆ ಅನುಮಾನ ಬಂದಿದೆ. ತಕ್ಷಣವೇ ನಾಲ್ವರನ್ನು ಸುತ್ತುವರಿದು ವಿಚಾರಿಸಿದ್ದಾರೆ. ಆಗ ಮಾತನಾಡದೇ ತಡವರಿಸಿದ್ದಾರೆ. ಇದರಿಂದ ಇನ್ನಷ್ಟು ಅನುಮಾನಗೊಂಡ ಸ್ಥಳೀಯರು ನಾಲ್ವರನ್ನ ತರಾಟೆಗೆ ತೆಗೆದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾಲ್ವರ ಪೈಕಿ ಒಬ್ಬ ಸ್ಥಳೀಯರಿಂದ ತಪ್ಪಿಸಿಕೊಂಡಿದ್ದಾನೆ. ಇನ್ನುಳಿದ ಮೂವರಿಗೆ ಬಿಸಿಬಿಸಿ ಕಜ್ಜಾಯ ನೀಡಿ ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ.

ವಿಚಾರಣೆ ವೇಳೆ ಬಾಯ್ಬಿಟ್ಟ ಖದೀಮರು

ಕೈದಿಯ ಆದೇಶದಂತೆ ಬೆದರಿಕೆ ಹಾಕಲು ಬಂದಿರುವುದಾಗಿ ಪುಂಡರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಪತಿ-ಪತ್ನಿ ನಡುವಿನ ಜಗಳದಲ್ಲಿ ನಾಲ್ವರು ಮಧ್ಯಪ್ರವೇಶಿಸಿ ಸ್ಥಳೀಯರಿಂದ ಗೂಸಾ ತಿಂದು ಜೈಲು ಸೇರುವಂತಾಗಿದೆ. ಸದ್ಯ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.