ಶಿವಮೊಗ್ಗದ ದುಮ್ಮಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳ ಕಟಾವು ಮಾಡುತ್ತಿದ್ದ ರೈತ ತಿಮ್ಮನಾಯ್ಕ ಅವರ ಮೇಲೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಮೊಗ್ಗ (ಅ.09): ಜಮೀನಿನಲ್ಲಿ ಬೆಳೆ ಕಟಾವು ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಹೆಜ್ಜೇನುಗಳು ಎರಗಿಬಂದು ಭೀಕರವಾಗಿ ದಾಳಿ ನಡೆಸಿದ ಪರಿಣಾಮ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲವಗೊಪ್ಪ ನಿವಾಸಿ ತಿಮ್ಮನಾಯ್ಕ (56) ಮೃತಪಟ್ಟ ದುರ್ದೈವಿ ರೈತ.
ಮೆಕ್ಕೆಜೋಳ ಕಟಾವಿನ ವೇಳೆ ದುರಂತ:
ಬುಧವಾರ ಸಂಜೆ ತಿಮ್ಮನಾಯ್ಕ ಅವರು ದುಮ್ಮಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಮಾಡುವ ಕೃಷಿ ಕೆಲಸದಲ್ಲಿ ಮಗ್ನರಾಗಿದ್ದರು. ಈ ಸಂದರ್ಭದಲ್ಲಿ ಸಮೀಪದ ಮರದಲ್ಲಿದ್ದ ಹೆಜ್ಜೇನುಗಳ ಹಿಂಡು ಏಕಾಏಕಿ ರೊಚ್ಚಿಗೆದ್ದು ಅವರ ಮೇಲೆ ದಾಳಿ ನಡೆಸಿವೆ. ನೂರಾರು ಹೆಜ್ಜೇನುಗಳು ಮೈತುಂಬ ಕಚ್ಚಿದ ಪರಿಣಾಮ, ತಪ್ಪಿಸಿಕೊಳ್ಳಲಾಗದೆ ಅವರು ಸ್ಥಳದಲ್ಲೇ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು:
ವಿಷಯ ತಿಳಿದ ತಕ್ಷಣವೇ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ಜಮೀನಿನ ರೈತರು ಸ್ಥಳಕ್ಕೆ ಧಾವಿಸಿ, ಗಂಭೀರ ಸ್ಥಿತಿಯಲ್ಲಿದ್ದ ತಿಮ್ಮನಾಯ್ಕ ಅವರನ್ನು ರಕ್ಷಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಹೆಜ್ಜೇನುಗಳ ವಿಷ ಮೈತುಂಬ ಹರಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ಸಾವನ್ನಪ್ಪಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆಗೆ ತರುವ ಸಂಭ್ರಮದಲ್ಲಿದ್ದ ರೈತನ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ದುರ್ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


