ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಶಿವಮೊಗ್ಗ: ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯಾ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ 1951 ಜೂನ್‌ 13ರಂದು ಮಧ್ಯರಾತ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ರಾಮ ಮನೋಹರ ಲೋಹಿಯಾ ಅವರ 50 ವರ್ಷದ ಬಂಧನದ ನೆನಪಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದಂತೆ, ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯಾ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

50ನೇ ವರ್ಷದ ನೆನಪಿನ ಸುವರ್ಣ ಮಹೋತ್ಸವ

ಈ ಹಿಂದೆ ಕಾಗೋಡು ಹೋರಾಟದ ರೂವಾರಿಗಳು, ಸ್ವಾತಂತ್ರ್ಯ ಹೋರಾಟಗಾರ ಡಾ. ಗಣಪತಿಯವರ ನೇತೃತ್ವದಲ್ಲಿ ನವದೆಹಲಿಗೆ ತೆರಳಿ ಅಂದಿನ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಡಾ. ಲೋಹಿಯಾ ಅವರ ಬಂಧನದ 50ನೇ ವರ್ಷದ ನೆನಪಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದಂತೆ ಸಾಗರದ ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ಲೋಹಿಯಾ ಅವರ ಹೆಸರನ್ನು ಮರುನಾಮಕರಣ ಮಾಡಲು ಮನವಿ ಸಲ್ಲಿಸಿದ್ದವು. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಂದಿನ ಗೃಹ ಸಚಿವ ಎಲ್. ಕೆ. ಅಡ್ವಾಣಿಯವರಿಗೆ ಈ ಸಂಬಂಧ ಮನವಿ ಮಾಡಿಕೊಟ್ಟಿದ್ದರು. ಈ ಕೋರಿಕೆಯಂತೆ 2020ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಎಲ್. ಕೆ. ಅಡ್ವಾಣಿಯವರು ಕೇಂದ್ರದ ಗೃಹ ಸಚಿವಾಲಯದ ಐದು ಅಂಶಗಳ ಮಾರ್ಗಸೂಚಿ ಅನ್ವಯ ಶಿಫಾರಸು ಪತ್ರ ಕಳುಹಿಸುವಂತೆ ಅಂದಿನ ರಾಜ್ಯ ಸರ್ಕಾರಕ್ಕೆ ಸೂಚಿಸಿದರು ಎಂದು ತಿಳಿಸಿದರು.

ರಾಜ್ಯ ಸರ್ಕಾರ 2001ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ

ರಾಜ್ಯ ಸರ್ಕಾರ 2001ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ಲೋಹಿಯಾ ಅವರ ಹೆಸರನ್ನು ಮರುನಾಮಕರಣ ಮಾಡಲು ಶಿಫಾರಸು ಮಾಡಿರುವುದಾಗಿ ತಿಳಿಸಿತು. ಆದರೆ, ಇದುವರೆಗೆ ಕೇಂದ್ರ ಸರ್ಕಾರದಿಂದ ಸಾಗರ ಜಂಬಗಾರು ನಿಲ್ದಾಣಕ್ಕೆ ಡಾ. ಲೋಹಿಯಾ ಅವರ ಹೆಸರನ್ನು ಮರುನಾಮಕರಣ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಈ ಹಿನ್ನೆಲೆ ಕೂಡಲೇ ಸಾಗರ ಜಂಬಗಾರು ರೈಲ್ವೆ ನಿಲ್ದಾಣವನ್ನು ಡಾ. ರಾಮ ಮನೋಹರ ಲೋಹಿಯಾ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಶಿವಾನಂದ ಕುಗ್ವೆ, ಪ್ರಮುಖರಾದ ಜಿನೇಶ್‌ ಕುಮಾರ್‌, ರಮೇಶ್‌ ಐಗಿನಬೈಲು, ಅಲೀಂ ಖಾನ್‌, ಶಂಕ್ರಾ ನಾಯ್ಕ, ಸಂಧ್ಯಾ ರಾಗಿಗುಡ್ಡ, ಎಸ್‌.ಪಿ.ಶಿವಣ್ಣ, ಕಣ್ಣನ್‌, ಎಲ್‌.ಆದಿಶೇಷ ಮತ್ತಿತರರು ಇದ್ದರು