ಶಿವಮೊಗ್ಗ: ಎಲ್ಲೆಂದರಲ್ಲಿ ನೆನೆದ ಹಾಸಿಗೆ ದಿಂಬು, ಸ್ವಚ್ಛತೆಯೇ ಸವಾಲು
ಪ್ರವಾಹದ ನಂತರ ನಗರವನ್ನು ಸ್ವಚ್ಛಗೊಳಿಸುವುದು ಪೌರ ಕಾರ್ಮಿಕರಿಗೆ ತಲೆ ನೋವಾಗಿ ಪರಿಣಮಿಸಿದೆ. ನಗರಸಭೆ ಅಧಿಕಾರಿಗಳು ಬಿಡುವಿಲ್ಲದೆ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇವರ ಸ್ವಚ್ಛತೆಯ ಕೆಲಸದಲ್ಲಿ ನೆರ ಸಂತ್ರಸ್ತರು ಎಸೆದ ಹಾಸಿಗೆ, ದಿಂಬುಗಳ ರಾಶಿ ಇವರನ್ನು ಕಂಗಾಲಾಗಿಸಿದೆ.
ಶಿವಮೊಗ್ಗ(ಆ.17): ನೆರೆ ಸಂತ್ರಸ್ತರಿಗೆ ನೆರವು ನೀಡುವ, ಸ್ವಚ್ಛಗೊಳಿಸುವ ಕೆಲಸದಲ್ಲಿ ನಗರಸಭೆ ಅಧಿಕಾರಿಗಳು ಬಿಡುವಿಲ್ಲದೆ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇವರ ಸ್ವಚ್ಛತೆಯ ಕೆಲಸದಲ್ಲಿ ನೆರ ಸಂತ್ರಸ್ತರು ಎಸೆದ ಹಾಸಿಗೆ, ದಿಂಬುಗಳ ರಾಶಿ ಇವರನ್ನು ಕಂಗಾಲಾಗಿಸಿದೆ.
ನೆರೆ ಬಂದ ಪ್ರದೇಶದಲ್ಲಿ ಸ್ವಚ್ಛತೆ ಸುಲಭದ ಕೆಲಸವಾಗಿಲ್ಲ. ಎಲ್ಲೆಂದರಲ್ಲಿ ಕೆಸರು, ಕೊಳಚೆ ಬಂದು ನಿಂತಿದೆ. ಎಲ್ಲೆಡೆ ವಾಸನೆ ಅಸಾಧ್ಯವಾಗಿದೆ. ಕಳೆದ ಮೂರು ದಿನಗಳಿಂದ ನೆರೆ ಇಳಿದಿದ್ದರೂ ಮೋಡ ಮುಸುಕಿದ ವಾತಾವರಣದಿಂದಾಗಿ ಇಡೀ ಪ್ರದೇಶದಲ್ಲಿ ಇನ್ನೂ ತೇವಾಂಶವಿದ್ದು, ಯಾವ ವಸ್ತುಗಳೂ ಒಣಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಾಂಕ್ರಾಮಿಕ ರೋಗ ಹರಡಬಹುದು ಎಂಬ ಗಾಬರಿ, ಆತಂಕ ನಗರಸಭೆಯ ಅಧಿಕಾರಿಗಳಲ್ಲಿದೆ. ಹೀಗಾಗಿ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಆದರೆ ಇದರ ನಡುವೆ ನಿತ್ಯ ರಸ್ತೆಯ ಬದಿಗೆ ಬಂದು ಬೀಳುತ್ತಿರುವ ಹಾಸಿಗೆ ರಾಶಿ ರಾಶಿ ನೋಡಿ ಅವರು ಕಂಗಾಲಾಗುತ್ತಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಬಹುತೇಕ ಮನೆಗಳಲ್ಲಿ ಹಾಸಿಗೆ ಕೊಳಚೆ ನೀರಿನಲ್ಲಿ ನೆನೆದಿದೆ.
ಒಳ್ಳೆಯ ನೀರಿನಲ್ಲಿ ನೆನೆದ ಬಟ್ಟೆಗಳನ್ನೇ ಬಳಸಲು ಕಷ್ಟ. ಇನ್ನು ಕೊಳಚೆ ನೀರಿನಲ್ಲಿ ನೆನೆದ ಹಾಸಿಗೆಯ ಕತೆ ಹೇಳತೀರದು. ಒಣಗಿಸುವ ಸಾಧ್ಯತೆಯೇ ಇಲ್ಲ. ತೀರಾ ಗಬ್ಬು ವಾಸನೆಯ ಈ ಹಾಸಿಗೆಯನ್ನು ಅನಿವಾರ್ಯವಾಗಿ ಮನೆಯವರು ಹೊರಗೆ ಎಸೆಯುತ್ತಿದ್ದಾರೆ. ಏನಿಲ್ಲವೆಂದರೂ ಸುಮಾರು 5 ಸಾವಿರಕ್ಕೂ ಅಧಿಕ ಹಾಸಿಗೆ ರಸ್ತೆ ಬದಿಗೆ ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಸಾವಿರಾರು ಹಾಸಿಗೆಗಳು ಕಸದ ತೊಟ್ಟಿಯ ಬಳಿ ರಾಶಿ ರಾಶಿಯಾಗಿ ಬಿದ್ದಿವೆ.
ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ ಗ್ಯಾಸ್ ಸ್ಟೌ, ಪಾತ್ರೆ ಸೆಟ್
ಇದನ್ನು ತೆಗೆದುಕೊಂಡು ಹೋಗುವುದು ನಗರಸಭೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಒಂದೆಡೆ ಕೊಳೆಯುತ್ತಿರುವ ಈ ಹಾಸಿಗೆಗಳಿಂದ ಬರುತ್ತಿರುವ ವಾಸನೆ ಒಂದೆಡೆಯಾದರೆ, ಸಂಗ್ರಹಿಸಿದ ಈ ಹಾಸಿಗೆಯನ್ನು ಎಲ್ಲಿ ವಿಲೇ ಮಾಡುವುದು ಎಂಬ ಚಿಂತೆ.