ನವೆಂಬರ್ 21 ರಿಂದ ಸ್ಟಾರ್ ಏರ್ ಸಂಸ್ಥೆಯು ಶಿವಮೊಗ್ಗ ವಿಮಾನ ನಿಲ್ದಾಣದಿಂದ ತನ್ನ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಿದೆ. ಉಡಾನ್ ಯೋಜನೆಯ ಆರ್ಥಿಕ ನೆರವು ನಿಂತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇದು ಕೇವಲ ತಾತ್ಕಾಲಿಕ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.
ಶಿವಮೊಗ್ಗ (ನ.6): ಮಲೆನಾಡಿನ ಕೇಂದ್ರ ಬಿಂದುವಾಗಿರುವ ಶಿವಮೊಗ್ಗ ನಗರವು ಶೀಘ್ರದಲ್ಲೇ ತನ್ನ ಸಂಪೂರ್ಣ ವಿಮಾನ ಸಂಪರ್ಕವನ್ನು (Air Connectivity) ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ 'ಸ್ಟಾರ್ ಏರ್' (Star Air) ನವೆಂಬರ್ 21 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ತನ್ನ ಎಲ್ಲಾ ಪ್ರಯಾಣಿಕ ವಿಮಾನ ಸೇವೆಗಳು ಹಾಗೂ ಬುಕಿಂಗ್ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ!
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಈಗಾಗಲೇ ಕಮರ್ಷಿಯಲ್ ಸೇವೆ ನೀಡುತ್ತಿದ್ದ ಇಂಡಿಗೋ ಮೇ 1 ರಿಂದ ತನ್ನ ಬೆಂಗಳೂರು ಮಾರ್ಗದ ಸೇವೆಯನ್ನು ಜೂನ್ 9 ರಂದು ಸ್ಪೈಸ್ಜೆಟ್ (SpiceJet) ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಇಷ್ಟಾದ ನಂತರ ಕೊನೆಯ ಸಕ್ರಿಯ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿ ಸೇವೆ ನೀಡುತ್ತಿದ್ದ 'ಸ್ಟಾರ್ ಏರ್' ಕೂಡ ಇದೀಗ ತನ್ನ ಸೇವೆಯನ್ನು ಹಿಂಪಡೆಯುತ್ತಿದ್ದು, ಶಿವಮೊಗ್ಗ ವಿಮಾನ ನಿಲ್ದಾಣವು ಸಂಪೂರ್ಣವಾಗಿ ವಿಮಾನಗಳಿಲ್ಲದೆ ಇರಲಿದೆ.
'ಉಡಾನ್' ಆರ್ಥಿಕ ನೆರವು ನಿಂತಿದ್ದೇ ಕಾರಣ
ವಿಮಾನ ನಿಲ್ದಾಣದ ಅಧಿಕೃತ ಮೂಲಗಳ ಪ್ರಕಾರ, ಪ್ರಾದೇಶಿಕ ಸಂಪರ್ಕ ಯೋಜನೆ 'ಆರ್ಸಿಎಸ್-ಉಡಾನ್' (RCS-UDAN Scheme) ಅಡಿಯಲ್ಲಿ ಇದುವರೆಗೆ ಶಿವಮೊಗ್ಗಕ್ಕೆ ವಿಮಾನಗಳನ್ನು ಓಡಿಸಲಾಗುತ್ತಿತ್ತು. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಆರ್ಥಿಕ ಸಬ್ಸಿಡಿ ಬೆಂಬಲವು ನವೆಂಬರ್ 2026 ಕ್ಕೆ ಮುಕ್ತಾಯಗೊಳ್ಳಲಿದೆ. ಸರ್ಕಾರಿ ಅನುದಾನ ಹಾಗೂ ನೆರವಿಲ್ಲದೆ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ನಡೆಸುವುದು ಅತ್ಯಂತ ಕಷ್ಟಕರವಾಗಿದ್ದು, ಪ್ರಯಾಣಿಕರ ಬೇಡಿಕೆಯೂ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ಈ ಸೇವಾ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. ಸ್ಟಾರ್ ಏರ್ ಸಂಸ್ಥೆಯು ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ನೇರ ವಿಮಾನ ಸೇವೆಯನ್ನು ಒದಗಿಸುತ್ತಿತ್ತು.
ಇದು ತಾತ್ಕಾಲಿಕ ಅಷ್ಟೇ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭರವಸೆ
ಈ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವುದು ತಾತ್ಕಾಲಿಕ ಎಂದಿದ್ದಾರೆ.'ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆ ನಿಂತಿರುವುದು ಕೇವಲ ತಾತ್ಕಾಲಿಕ ವಿದ್ಯಮಾನ. ಕೇಂದ್ರ ಸರ್ಕಾರವು 'ಉಡಾನ್-6' (UDAN-6) ಯೋಜನೆಯ ಅಡಿಯಲ್ಲಿ ನೂತನ ಟೆಂಡರ್ ಕರೆಯಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರವೂ ಸಹ ಶಿವಮೊಗ್ಗದಿಂದ 10 ಹೊಸ ವಿಮಾನ ಮಾರ್ಗಗಳನ್ನು ಆರಂಭಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಶಿವಮೊಗ್ಗದಲ್ಲಿ ಪುನಃ ವಿಮಾನ ಸೇವೆಗಳು ಯಶಸ್ವಿಯಾಗಿ ಆರಂಭಗೊಳ್ಳಲಿವೆ ಎಂಬ ಭರವಸೆ ನನಗಿದೆ' ಎಂದಿದ್ದಾರೆ.
ಪ್ರಾದೇಶಿಕ ವಿಮಾನ ನಿಲ್ದಾಣಗಳ ಭವಿಷ್ಯ ಮಬ್ಬು: ಕೆಎಸ್ಐಐಡಿಸಿ ಅಧ್ಯಕ್ಷರ ಕಳವಳ
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (KSIIDC) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಸ್ತಿತ್ವದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ: 'ಪ್ರಾದೇಶಿಕ ವಿಮಾನ ನಿಲ್ದಾಣಗಳ ಭವಿಷ್ಯ ತೀವ್ರ ಮಬ್ಬಾಗಿದೆ. ಈ ವಿಮಾನ ನಿಲ್ದಾಣಗಳು ಭವಿಷ್ಯದಲ್ಲಿ ಹೇಗೆ ಬದುಕಿ ಉಳಿಯುತ್ತವೆ ಮತ್ತು ಪ್ರತಿದಿನ ಯಾರು ಪ್ರಯಾಣಿಸುತ್ತಾರೆ ಎಂಬುದೇ ನನಗಿರುವ ದೊಡ್ದ ಪ್ರಶ್ನೆ. ಸರ್ಕಾರವು ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ₹450 ಕೋಟಿಗೂ ಹೆಚ್ಚು ತೆರಿಗೆದಾರರ ಹಣವನ್ನು ವೆಚ್ಚ ಮಾಡಿದೆ. ನೈಟ್ ಲ್ಯಾಂಡಿಂಗ್ (Night Landing) ವ್ಯವಸ್ಥೆಯ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇಷ್ಟಾದರೂ ವಿಮಾನ ಏರುವ ಶ್ರಿಮಂತ ಪ್ರಯಾಣಿಕರಿಗೆ ಇಂದಿಗೂ ಸಾರ್ವಜನಿಕರ ತೆರಿಗೆ ಹಣದಿಂದ ಸಬ್ಸಿಡಿ ನೀಡಬೇಕಾಗಿರುವುದು ಅರ್ಥಹೀನ. ಹೀಗೆಯೇ ಮುಂದುವರಿದರೆ ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ವಿಮಾನ ನಿಲ್ದಾಣಗಳು ಸಂಪೂರ್ಣವಾಗಿ ಮುಚ್ಚಲ್ಪಡಬಹುದು' ಎಂದಿದ್ದಾರೆ.
ಅವರ ಮಾಹಿತಿಯಂತೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸುಮಾರು 100 ಸಿಬ್ಬಂದಿಯ ವೇತನ ಹಾಗೂ ಉಪಕರಣಗಳ ನಿರ್ವಹಣೆಗಾಗಿ ನಿಗಮವು ಪ್ರತಿ ತಿಂಗಳು ಸುಮಾರು ₹95 ಲಕ್ಷ ವೆಚ್ಚ ಮಾಡುತ್ತಿದೆ. ಇನ್ನುಳಿದ ನೌಕರರ ವೇತನವನ್ನು ರಾಜ್ಯ ಸರ್ಕಾರವೇ ಪಾವತಿಸುತ್ತಿದೆ.
ಬೀದರ್ - ಬೆಂಗಳೂರು ವಿಮಾನ ಸೇವೆಯೂ ಸಸ್ಪೆಂಡ್!
ಇನ್ನೊಂದೆಡೆ, ಸ್ಟಾರ್ ಏರ್ ಸಂಸ್ಥೆಯು ನವೆಂಬರ್ 1 ರಿಂದ ಜಾರಿಗೆ ಬರುವಂತೆ ತನ್ನ ಬೀದರ್ - ಬೆಂಗಳೂರು ನಿತ್ಯ ವಿಮಾನ ಸೇವೆಯನ್ನು ಸಹ ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ರದ್ದತಿಗೆ ಯಾವುದೇ ನಿರ್ದಿಷ್ಟ ಅಧಿಕೃತ ಕಾರಣವನ್ನು ಸಂಸ್ಥೆ ನೀಡಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರವು ಸ್ಟಾರ್ ಏರ್ ಸಂಸ್ಥೆಗೆ 1 ವರ್ಷದ ಅವಧಿಗೆ ₹13.48 ಕೋಟಿ ಪ್ರೋತ್ಸಾಹಧನ (Incentive) ನೀಡಲು ಒಪ್ಪಿಕೊಂಡಿದ್ದರಿಂದ ಸೇವೆ ಪುನರಾರಂಭವಾಗಿತ್ತು. ಆದರೆ ಪ್ರಸ್ತುತ ವಿಮಾನ ಇಂಧನ ಹಾಗೂ ತೈಲ ಬೆಲೆ ಭಾರಿ ಏರಿಕೆಯಾಗಿರುವುದರಿಂದ ಸಂಸ್ಥೆಯು ಹೆಚ್ಚಿನ ಪ್ರೋತ್ಸಾಹಧನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.






