ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಯನ್ನು 'ಬಸ್ ಪ್ರಯಾಣಿಕರ ವೇದಿಕೆ' ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಹಿಂಪಡೆಯಲು ಒತ್ತಾಯಿಸಿದೆ. ಈ ದರ ಏರಿಕೆಯು ಶ್ರಮಿಕ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದ್ದು, ಬಿಎಂಟಿಸಿಗೆ ನಷ್ಟದ ಭೀತಿ ತಂದೊಡ್ಡಲಿದೆ ಎಂದು ಎಚ್ಚರಿಸಿದೆ.
ಬೆಂಗಳೂರು (ನ.6): ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು 'ಬಸ್ ಪ್ರಯಾಣಿಕರ ವೇದಿಕೆ' (Bus Prayanikara Vedike) ತೀವ್ರವಾಗಿ ಖಂಡಿಸಿದೆ. ಈ ದರ ಏರಿಕೆಯು ದುಡಿಯುವ ವರ್ಗದ ಸಾರ್ವಜನಿಕರ ಮೇಲೆ ತೀವ್ರ ಆರ್ಥಿಕ ಹೊರೆಯನ್ನು ಹೇರಲಿದ್ದು, ಜನರನ್ನು ಸಾರ್ವಜನಿಕ ಸಾರಿಗೆಯಿಂದ ದೂರ ತಳ್ಳಲಿದೆ. ಹೀಗಾಗಿ ಹೆಚ್ಚಿಸಲಾಗಿರುವ ಬಸ್ ದರಗಳನ್ನು ತಕ್ಷಣವೇ ಹಿಂಪಡೆಯಬೇಕು (Rollback) ಎಂದು ವೇದಿಕೆ ಒತ್ತಾಯಿಸಿದೆ.
ಸಾರ್ವಜನಿಕ ಸಾರಿಗೆ ಹಕ್ಕುಗಳಿಗಾಗಿ ಹೋರಾಡುವ 'ಬಸ್ ಪ್ರಯಾಣಿಕರ ವೇದಿಕೆ' ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಬಸ್ ದರಗಳ ಪರಿಷ್ಕರಣೆ ಮಾಡುವ ಮೊದಲು ಪ್ರಯಾಣಿಕರು, ಕಾರ್ಮಿಕ ಸಂಘಟನೆಗಳು ಹಾಗೂ ಪ್ರಯಾಣಿಕರ ಹಿತರಕ್ಷಣಾ ಗುಂಪುಗಳೊಂದಿಗೆ ಸರ್ಕಾರ ಸಮಾಲೋಚನೆ ನಡೆಸಬೇಕಿತ್ತು ಎಂದು ಹೇಳಿದೆ. ಇದರ ಜೊತೆಗೆ ಬಸ್‌ಗಳ ಸಂಖ್ಯೆ, ಮಾರ್ಗಗಳ ಲಭ್ಯತೆ, ಸಮಯ ಪಾಲನೆ, ತಲುಪುವಿಕೆ, ಸುರಕ್ಷತೆ ಹಾಗೂ ಮೂಲಸೌಕರ್ಯಗಳನ್ನು ಸುಧಾರಿಸುವ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದೆ.
ಶ್ರಮಿಕ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಆಘಾತ
ದಿನನಿತ್ಯದ ಪ್ರಯಾಣಕ್ಕೆ ಸಂಪೂರ್ಣವಾಗಿ ಬಿಎಂಟಿಸಿ ಬಸ್‌ಗಳನ್ನೇ ನೆಚ್ಚಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಕಾರ್ಮಿಕರು, ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಈ ದರ ಏರಿಕೆಯು ಭಾರಿ ಹೊರೆಯಾಗಿ ಪರಿಣಮಿಸಲಿದೆ.
ಟಿಕೆಟ್ ದರದಲ್ಲಿನ ಸಣ್ಣ ಪ್ರಮಾಣದ ಏರಿಕೆಯೂ ಸಹ ಈ ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರಲಿದೆ. ದರ ಏರಿಕೆಯ ಭೀತಿಯಿಂದಾಗಿ ಅನೇಕ ಪ್ರಯಾಣಿಕರು ಅನಿವಾರ್ಯವಾಗಿ ದ್ವಿಚಕ್ರ ವಾಹನಗಳು ಅಥವಾ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಇನ್ನು ಹಣ ಉಳಿಸುವ ಸಲುವಾಗಿ ಹಲವು ಸಾರ್ವಜನಿಕರು ಸುದೀರ್ಘ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವಂತಾಗಿದೆ ಎಂದು ವೇದಿಕೆ ಕಳವಳ ವ್ಯಕ್ತಪಡಿಸಿದೆ.
ಬಿಎಂಟಿಸಿಗೆ ಮತ್ತೆ ಭಾರಿ ನಷ್ಟದ ಭೀತಿ!
ಈ ದರ ಏರಿಕೆಯು ಸಾರ್ವಜನಿಕರಷ್ಟೇ ಅಲ್ಲದೆ, ಸ್ವತಃ ಬಿಎಂಟಿಸಿಯ ಆರ್ಥಿಕ ಸ್ಥಿತಿಗೂ ಭಾರಿ ಪೆಟ್ಟು ನೀಡಲಿದೆ ಎಂದು ವೇದಿಕೆ ಎಚ್ಚರಿಸಿದೆ. ವರದಿಯೊಂದರ ಪ್ರಕಾರ, ಜನವರಿ 2025 ರಲ್ಲಿ ಕೈಗೊಳ್ಳಲಾಗಿದ್ದ ಹಿಂದಿನ ದರ ಪರಿಷ್ಕರಣೆಯ ಬಳಿಕ ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆಯು ಬರೋಬ್ಬರಿ 38.03 ಲಕ್ಷದಿಂದ 35.85 ಲಕ್ಷಕ್ಕೆ ಕುಸಿತ ಕಂಡಿತ್ತು. ಇದೀಗ ಮತ್ತೆ ದರ ಹೆಚ್ಚಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಇಳಿಮುಖವಾಗಿ ನಿಗಮದ ಆದಾಯವೇ ಕುಸಿಯುವ ಭೀತಿಯಿದೆ.
ತಲೆಕೆಳಗಾದ ಸಾರಿಗೆ ನೀತಿ: ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರದ ಸಾರಿಗೆ ನೀತಿಯನ್ನು ತಲೆಕೆಳಗಾದ ನೀತಿ ಎಂದು ಕಟುವಾಗಿ ವಿಮರ್ಶಿಸಿರುವ ವೇದಿಕೆ, 'ಖಾಸಗಿ ವಾಹನಗಳ ಸುಗಮ ಸಂಚಾರಕ್ಕಾಗಿ ಸರ್ಕಾರವು ಫ್ಲೈಓವರ್‌ಗಳು, ಎಲಿವೇಟೆಡ್ ಕಾರಿಡಾರ್‌ಗಳು ಹಾಗೂ ರಸ್ತೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಆದರೆ ಸಾಮಾನ್ಯ ಬಡಜನರು ಸಂಚರಿಸುವ ಬಸ್ ಪ್ರಯಾಣವನ್ನು ಮಾತ್ರ ದಿನದಿಂದ ದಿನಕ್ಕೆ ಭಾರಿ ದುಬಾರಿ ಮಾಡುತ್ತಿದೆ' ಎಂದು ಆಕ್ರೋಶ ಹೊರಹಾಕಿದೆ.ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರವು ತನ್ನ ಆಯವ್ಯಯದಲ್ಲಿ (Budget) ನೀಡುವ ಹಣಕಾಸಿನ ನೆರವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.
ಡಿಕೆ ಶಿವಕುಮಾರ್‌ಗೆ ನೇರ ಸವಾಲು
"ಕೇಂದ್ರ ಸರ್ಕಾರವು ಇಂಧನ ದರಗಳನ್ನು ಇಳಿಕೆ ಮಾಡಿದರೆ ರಾಜ್ಯದಲ್ಲೂ ಬಸ್ ದರ ಹಿಂಪಡೆಯಲಾಗುವುದು" ಎಂಬ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ವೇದಿಕೆ, ಡೀಸೆಲ್ ಮೇಲಿನ ತೆರಿಗೆ ಕಡಿತ ಹಾಗೂ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಆಗ್ರಹಿಸಿದೆ. ಕೇಂದ್ರ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಕೆ ಹಾಗೂ ನೇರ ಆರ್ಥಿಕ ನೆರವು ಪಡೆಯಲು ಪ್ರಯತ್ನಿಸಬೇಕು. ಜೊತೆಗೆ, ಸಾರಿಗೆ ನಿಗಮಗಳಿಗೆ ದೀರ್ಘಾವಧಿಯಲ್ಲಿ ಭಾರಿ ಆರ್ಥಿಕ ಹೊರೆಯಾಗಿ ಪರಿಣಮಿಸಲಿರುವ ಲೀಸ್ ಆಧಾರಿತ ವಿದ್ಯುತ್ ಬಸ್ (Electric Bus) ಖರೀದಿ ಮಾದರಿಯನ್ನು ಮರುಪರಿಶೀಲಿಸುವಂತೆ ಬಸ್ ಪ್ರಯಾಣಿಕರ ವೇದಿಕೆ ಸರ್ಕಾರವನ್ನು ಕೋರಿದೆ.






