ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಅತಿ ಹೆಚ್ಚು ಮಳೆ ಬೀಳುವ ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದ ರೈತರಿಗೆ ಕಟ್ಟಿದ ವಿಮೆ ಹಣಕ್ಕಿಂತಲೂ ಕಡಿಮೆ ಪರಿಹಾರ ಸಿಕ್ಕಿದೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ.

  • ಗೋಪಾಲ್ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ನ.05): ರಾಜ್ಯ ಸರ್ಕಾರ ಮೊನ್ನೆಯಷ್ಟೇ ಬೆಳೆ ವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಅನೇಕ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಿಸುವಲ್ಲಿ ತಾರತಮ್ಯ ಆಗಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಮೊತ್ತ ಸಿಕ್ಕಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದ ಅನೇಕ ರೈತರಿಗೆ ಅಲ್ಪ ಪರಿಹಾರ ವಿತರಿಸಲಾಗಿದೆ. ಕೆಲವೆಡೆ ಕಟ್ಟಿದ ವಿಮೆ ಹಣಕ್ಕಿಂತಲೂ ಕಡಿಮೆ ಪರಿಹಾರ ಸಿಕ್ಕಿದೆ ಎಂಬುದೇ ವಿಪರ್ಯಾಸ. 2024-25ರ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಬಿಡುಗಡೆಯಾದಾಗಲೂ ತಾರತಮ್ಯ ಮಾಡಲಾಗಿತ್ತು. ಈಗ 2025-26ನೇ ಸಾಲಿನ ವಿಮಾ ಪರಿಹಾರ ಬಿಡುಗಡೆಯಾಗಿದೆ. ಈ ವರ್ಷವೂ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಅರೆಕಾಸಿನಂತಾಗಿದೆ. ರಾಜ್ಯದಲ್ಲಿ ಈ ಬಾರಿ ಬರಗಾಲ ತಾಂಡವವಾಡುತ್ತಿದೆ. ಅಡಕೆ ಬೆಳೆಗೆ ಸಾವಿರಾರು ರುಪಾಯಿ ಬೆಳೆವಿಮೆ ಕಂತು ಪಾವತಿಸಿರುವ ರೈತರಿಗೆ ಪ್ರತಿ ಎಕರೆಗೆ ₹ 70 ರಿಂದ 80 ಸಾವಿರ ರು. ವಿಮಾ ಪರಿಹಾರ ಸಿಗಬೇಕಿದೆ. ಆದರೆ, ಅನೇಕ ರೈತರ ಬ್ಯಾಂಕ್ ಖಾತೆಗೆ ಕೇವಲ 2000 ರು., 3000 ರು. ವಿಮೆ ಪರಿಹಾರ ಪಾವತಿಯಾಗಿದೆ. ಹೀಗಾಗಿ ಜಿಲ್ಲೆಯ ರೈತರು ಆಡಳಿತ ವ್ಯವಸ್ಥೆ ಹಾಗೂ ವಿಮೆ ಕಂಪನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಟ್ಟಿದ ಪ್ರೀಮಿಯಂ ಹಣವಿರಲಿ, ಕೆಲವರಿಗೆ ಅದರ ಬಡ್ಡಿಯೂ ಬಂದಿಲ್ಲ.

ಅಲ್ಪ ಮೊತ್ತದ ಪರಿಹಾರ

ಜಿಲ್ಲೆಯ ಅಡಕೆ ಬೆಳೆಗಾರರ ವಲಯದಲ್ಲಿ ಬೆಳೆ ವಿಮೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅಡಕೆ ಬೆಳೆಗಾರರಿಗೆ ಹೆಕ್ಟೇರ್‌ಗೆ 87,400 ರು. ಪರಿಹಾರ ಬಿಡುಗಡೆಯಾಗಿದ್ದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುತ್ತಿರುವ ಹೊಸನಗರ ತಾಲೂಕಿನ ನಿಟ್ಟೂರು ಸಂಪೆಕಟ್ಟೆ, ಅರಮನೆಕೊಪ್ಪ, ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ 1150 ರು., ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ರೈತರಿಗೆ 2200 ರು., ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ 2200 ರು., ಹೀಗೆ ಅತ್ಯಲ್ಪ ಮೊತ್ತದ ಪರಿಹಾರ ಬಿಡುಗಡೆಯಾಗಿದೆ.

--------------------

ತಾರತಮ್ಯ ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ

ಕಳೆದ ವರ್ಷದ ಬೆಳೆ ವಿಮೆ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಕಳೆದ ಬಾರಿ ಹೊಸನಗರ ತಾಲೂಕಿನ ಭಾಗದಲ್ಲಿ ಮಳೆಯಿಂದಾಗಿ ತುಂಬಾ ಸಮಸ್ಯೆಯಾಗಿತ್ತು. ಆದರೆ, ಕಡಿಮೆ ಮಳೆ ಬೀಳುವ ಪ್ರದೇಶದ ರೈತರಿಗೆ ಹೆಚ್ಚು ಬೆಳೆ ವಿಮೆ ಪರಿಹಾರ ಬಂದಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಮೊತ್ತ ಸಿಕ್ಕಿದೆ. ನಗರ, ಅರಮನೆಕೊಪ್ಪ, ಸಂಪೇಕಟ್ಟೆ, ನಿಟ್ಟೂರು, ರಾಮಚಂದ್ರಪುರ ಹೀಗೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ರೈತರಿಗೆ ಕಟ್ಟಿದ ಹಣವೂ ವಾಪಸ್‌ ಬಂದಿಲ್ಲ.

ಈ ಬಾರಿ ತಾಲೂಕಿನ ಕರಿಮನೆ, ಮಾಸ್ತಿಕಟ್ಟೆ, ಯಡೂರು ಭಾಗದ ರೈತರಿಗೆ ಎಕರೆಗೆ 74 ಸಾವಿರ ರು.ವರೆಗೆ ಪರಿಹಾರ ಬಂದಿದೆ. ಈ ಗ್ರಾಪಂಗಳ ಗಡಿಯಲ್ಲೇ ಬರುವ ನಗರ, ಅರಮನೆಕೊಪ್ಪ, ಸಂಪೇಕಟ್ಟೆ, ನಿಟ್ಟೂರು, ರಾಮಚಂದ್ರಪುರ ಗ್ರಾಮದ ರೈತರಿಗೆ ಎಕರೆಗೆ ಬರೀ 2 ಸಾವಿರ ರು.ವರೆಗೆ ಪರಿಹಾರ ಬಿಡುಗಡೆಯಾಗಿದೆ. ಇದು ಯಾವ ಮಾನದಂಡ ಎಂಬುದೇ ಗೊತ್ತಾಗುತ್ತಿಲ್ಲ.

ಸರ್ಕಾರಿ ಅಧಿಕಾರಿಗಳು ಬೆಳೆ ವಿಮೆ ಪರಿಹಾರ ಯೋಜನೆಯನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಳೆ ವಿಮೆ ಪರಿಹಾರ ತಾರತಮ್ಯಕ್ಕೆ ಮಳೆಮಾಪನವೇ ಕಾರಣ. ಕಳೆದ ಬಾರಿ ಇದೇ ರೀತಿ ಸಮಸ್ಯೆ ಉಂಟಾದಾಗ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆಯಲ್ಲಿ ಎಲ್ಲೆಲ್ಲಿ ಮಳೆ ಮಾಪನಗಳು ಸರಿ ಇಲ್ಲದಿದ್ದರೆ ಬೇರೆ ಮಾನದಂಡಗಳನ್ನು ಪರಿಗಣಿಸಿ ಪರಿಹಾರ ಘೋಷಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕಳೆದ ಬಾರಿಯೂ ಇದೇ ರೀತಿ ಸಮಸ್ಯೆಯಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ಆಗಿದೆ. ಈ ಎರಡು ಸಾಲಿನ ಪರಿಹಾರ ಮೊತ್ತದಲ್ಲಿ ನಮಗೆ ಅನ್ಯಾಯವಾಗಿದೆ. ಹೀಗಾಗಿ ಶಾಸಕರು, ಸಂಸದರು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳೊಂದಿಗೆ ಕೂತು ಚರ್ಚೆ ಮಾಡಿ ಈಗ ಆಗಿರುವ ಸಮಸ್ಯೆಯನ್ನು ಕೂಡಲೇ ಸರಿಪಡಿಬೇಕು. ರೈತರಿಗೆ ನ್ಯಾಯಯುತ ಬೆಳೆ ವಿಮೆಯನ್ನು ಒದಗಿಸಬೇಕು. ಇಲ್ಲವಾದರೆ ರೈತರು ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ. ಅಗತ್ಯ ಬಿದ್ದರೆ ಮತ ಬಹಿಷ್ಕಾರಕ್ಕೂ ನಾವು ಸಿದ್ಧ ಎಂದು ಅರಮನೆಕೊಪ್ಪ, ನಿಟ್ಟೂರು, ಸಂಪೇಕಟ್ಟೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.