ತೊಂದರೆಯಾದರೆ ಹೋರಾಟ : ಶಂಕರ್ ಬಿದರಿ ಎಚ್ಚರಿಕೆ

ವಿವೇಕಾನಂದರ ಹೆಸರು ದುರುಪಯೋಗಪಡಿಸಿಕೊಂಡು ವೀರಶೈವ- ಲಿಂಗಾಯತ ಸಮಾಜದ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಲಾಗುತ್ತಿದೆ. ಇಲ್ಲಿನ ಒಂದು ಚದರ ಅಡಿ ಜಾಗಕ್ಕೆ ಕುತ್ತು ಬಂದರೂ ರಾಜ್ಯದ ಮೂರು ಕಡೆಯಿಂದ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಮತ್ತು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಮಹದೇವ ಬಿದರಿ ಹೇಳಿದರು.

Shankar bidari warns On  Niranjan Mutt Land issue snr

 ಮೈಸೂರು (ನ.10):  ವಿವೇಕಾನಂದರ ಹೆಸರು ದುರುಪಯೋಗಪಡಿಸಿಕೊಂಡು ವೀರಶೈವ- ಲಿಂಗಾಯತ ಸಮಾಜದ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಲಾಗುತ್ತಿದೆ. ಇಲ್ಲಿನ ಒಂದು ಚದರ ಅಡಿ ಜಾಗಕ್ಕೆ ಕುತ್ತು ಬಂದರೂ ರಾಜ್ಯದ ಮೂರು ಕಡೆಯಿಂದ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಮತ್ತು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಮಹದೇವ ಬಿದರಿ ಹೇಳಿದರು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಿರಂಜನ ಮಠದ (Niranjana Mutt) ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ- ಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟ ಆಯೋಜಿಸಿದ್ದ ನಿರಂಜನ ಮಠ ಒಂದು ಅವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೀರಶೈವ- ಲಿಂಗಾಯತರು ಅಷ್ಟೊಂದು ಬಲಹೀನರು, ಅಪಾತ್ರರ ಎಂಬ ಪ್ರಶ್ನೆ ಕಾಡುತ್ತಿದೆ. ನಾವು ಈವರೆಗೂ ಯಾವ ಸಮಾಜದಿಂದಲೂ (Socity) ಏನನ್ನೂ ಕಿತ್ತುಕೊಂಡಿಲ್ಲ. ನಮ್ಮಿಂದ ಸಾಕಷ್ಟನ್ನು ಕೊಟ್ಟಿದ್ದೇವೆ. ಆದರೂ ನಮ್ಮ ಅಸ್ತಿತ್ವ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಡುಗಿದರು.

ಈ ವಿಷಯದಲ್ಲಿ ವಿವೇಕಾನಂದರ ಹೆಸರು ದುರುಪಯೋಗವಾಗಿದೆ. ನಮಗೆ ಎಲ್ಲಾ ದಾರ್ಶನಿಕರ ಬಗ್ಗೆ ಗೌರವವಿದೆ. ಬಸವಣ್ಣ, ಕನಕದಾಸರು, ಪುರಂದರದಾಸರು, ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಎಲ್ಲರ ಬಗ್ಗೆಯೂ ಗೌರವವಿದೆ. ಆದರೆ ವಿವೇಕಾನಂದರಿಗೆ ನಿರಂಜನ ಮಠದಲ್ಲಿ ಆತಿಥ್ಯ ನೀಡಲಾಯಿತು ಎಂಬ ಕಾರಣಕ್ಕೆ ಮಠದ ಜಾಗವನ್ನೇ ಕೊಡಿ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಶಿಷ್ಠಾಚಾರಕ್ಕೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ನಿರಂಜನ ಮಠದ ಅಂದಿನ ಶ್ರೀಗಳು ಪಶ್ಚಿಮಬಂಗಾಳದ ಬೇಲೂರು ಮಠಕ್ಕೆ ಹೋಗಿದ್ದರೂ ಅವರಿಗೂ ಅತಿಥ್ಯ ನೀಡಲಾಗುತ್ತಿತ್ತು. ಅಂದ ಮಾತ್ರಕ್ಕೆ ನಮ್ಮ ಶ್ರೀಗಳ ಪ್ರತಿಮೆ ಹಾಕಿ, ಬಸವಣ್ಣನವರ ಪ್ರತಿಮೆ ಹಾಕಿ ಎನ್ನಲು ಸಾಧ್ಯವೇ? ಹಾಗೆಯೇ ವಿವೇಕಾನಂದರ ಆತಿಥ್ಯವಹಿಸಿದ್ದರು ಎಂಬ ಕಾರಣಕ್ಕೆ ಈಗ ಮಠವನ್ನೇ ಕೊಡಿ ಎಂದರು ಅದು ವಿವೇಕ ರಹಿತ ಚಿಂತನೆ, ವಿವೇಕ ರಹಿತ ತೀರ್ಮಾನ ಎಂದು ಅವರು ಕಟುವಾಗಿ ಟೀಕಿಸಿದರು.

ಲಿಂಗಾಯತ ಧರ್ಮ (Lingayat) ಎಂದರೆ ಪ್ರಾಮಾಣಿಕತೆಗೆ ಹೆಸರುವಾಸಿಯಾದದ್ದು. ಬೇರೆಯವರದ್ದನ್ನು ಬಯಸುವುದಿಲ್ಲ. ಪರರ ಆಸ್ತಿ, ಪರರ ವಸ್ತು ಮೇಲೆ ಆಸೆ ಪಡುವುದು, ಪರ ಧರ್ಮದ ಮೇಲೆ ಆಕ್ರಮಣ ಸರಿಯಲ್ಲ. ನಮ್ಮ ವಿಚಾರ, ಆಚಾರ ಬೇರೆ ಇರಬಹುದು. ಆದರೆ ನಾವು ವೈಧಿಕತೆಯನ್ನು ಗೌರವಿಸುತ್ತೇವೆ. ಆದರೆ ನಮ್ಮ 46 ಸಾವಿರ ಚದರ ಅಡಿಗೆ ಕುತ್ತಾದರೆ ನಾವು ಸುಮ್ಮನಿರುವುದಿಲ್ಲ. ಒಂದು ವೇಳೆ ತೊಂದರೆಯಾದರೆ ಬಸವ ಕಲ್ಯಾಣ, ಕೂಡಲಸಂಗಮ ಮತ್ತು ಉಳಿವಿ ಮಠದಿಂದ ಹೋರಾಟ ಆರಂಭಿಸಿ ವೀರಶೈವ- ಲಿಂಗಾಯತರನ್ನು ಜಾಗೃತಿಗೊಳಿಸುತ್ತೇವೆ. ಇದು ಇಡೀ ದೇಶದ ಹೋರಾಟವಾಗುತ್ತದೆ ಎಂದು ಅವರು ಹೇಳಿದರು. 3ನೇ ಸಭೆ ನಡೆದರೆ ಅದು ಹೋರಾಟವೇ ಆಗಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮಾತನಾಡಿ, ಇಂದು ವೀರಶೈವ ಸಮಾಜ ಕವಲು ದಾರಿಯಲ್ಲಿದೆ. ಭವ್ಯ ಪರಂಪರೆ ಇದ್ದ ಧರ್ಮದ ಇಂದಿನ ಸ್ಥಿತಿ ನೋಡಿದರೆ ನೋವಾಗುತ್ತದೆ. ಮಠದ ಆಶ್ರಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಮಠದ ಆಸ್ತಿ ಸಂರಕ್ಷಿಸುವ ಕೆಲಸ ಮಾಡುವ ಬದಲಿಗೆ ಮಾರಲು ಮುಂದಾಗುತ್ತಿವೆ. ನಿಮಗೆ ವಿವೇಕ ಸ್ಮಾರಕ ನಿರ್ಮಿಸಲು ಬೇರೆ ಜಾಗವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ನಿಮ್ಮ ಹೋರಾಟಕ್ಕೆ ವೀರಶೈವ ಮಹಾಸಭಾದ ಬೆಂಬಲ ಇರುತ್ತದೆ. ನಾನು ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ. ನಿರಂಜನ ಮಠದ ಆಸ್ತಿಗೆ ಯಾವುದೇ ಶಕ್ತಿ ಧಕ್ಕೆ ತರಲು ಸಾಧ್ಯವಾಗದು. ಅದಕ್ಕಾಗಿ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗಳು ಮತ್ತು ಸುತ್ತೂರು ಮಠದ ಶ್ರೀಗಳ ಜೊತೆಯೂ ಮಾತನಾಡುತ್ತೇವೆ. ನಿಯಮದ ಪ್ರಕಾರ ಮುಚ್ಚಿದ ಮಠದ ಆಸ್ತಿಯನ್ನು ಅದೇ ಸಮಾಜಕ್ಕೆ ನಿರ್ವಹಣೆ ಮಾಡಲು ನೀಡಬೇಕು ಎಂದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಹಿರಿಯ ನ್ಯಾಯವಾದಿ ಗಂಗಾಧರ ಆರ್‌. ಗುರುಮಠ್‌, ಮಹಾಸಭಾದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಕೆ.ಎಸ್‌. ಮಹದೇವಪ್ರಸಾದ್‌, ನಿರಂಜನ ಮಠ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಚ್‌.ವಿ. ಬಸವರಾಜು ಹಿನಕಲ್‌, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಲ್‌.ಎಸ್‌. ಮಹದೇವಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಬಿ.ಕೆ. ನಾಗರಾಜು, ನಗರ ಘಟಕದ ಅಧ್ಯಕ್ಷ ಎಂ.ಎಚ್‌. ಚಂದ್ರಶೇಖರ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios