Asianet Suvarna News Asianet Suvarna News

ಅಪರೂಪದ ಕಾಷ್ಟ ಶಿಲ್ಪದ ಕಾಣಿಯೂರು ಮಠವನ್ನೊಮ್ಮೆ ಕಾಣ ಬನ್ನಿ

ಅಷ್ಟಮಠಗಳ ಪೈಕಿ ಇದೀಗ ಕಾಣೆಯೂರು ಮಠ, ಅಪರೂಪದ ಕಾಷ್ಟ ಶಿಲ್ಪಗಳೊಂದಿಗೆ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ.

witness the beauty of Kaniyoor Mutt skr
Author
First Published Oct 9, 2022, 6:15 PM IST | Last Updated Oct 9, 2022, 6:15 PM IST

ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿಗೆ ಲಕ್ಷಾಂತರ ಜನರು  ಶ್ರೀ ಕೃಷ್ಣ ಮಠವನ್ನು ನೋಡಲು ಬರುತ್ತಾರೆ. ಹೀಗೆ ಬಂದವರು ದೇವರ ದರ್ಶನ ಮಾಡಿ ಹಾಗೆಯೇ ವಾಪಸಾಗುತ್ತಾರೆ. ಆದರೆ ಉಡುಪಿಯ ರಥಬೀದಿ ಅಂದರೆ ಕೇವಲ ಕೃಷ್ಣಮಠ ಮಾತ್ರವಲ್ಲ, ಸುತ್ತಲೂ ಇರುವ ಅಷ್ಟಮಠಗಳು ಹೆಚ್ಚಿನವರ ಗಮನಕ್ಕೆ ಬರುವುದಿಲ್ಲ. ನೋಡಲೇಬೇಕೆನಿಸುವ ಅಷ್ಟಮಠಗಳ ಪೈಕಿ ಇದೀಗ ಕಾಣೆಯೂರು ಮಠ(Kaniyoor Mutt), ಅಪರೂಪದ ಕಾಷ್ಟ ಶಿಲ್ಪಗಳೊಂದಿಗೆ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ.

ಆಚಾರ್ಯ ಮಧ್ವರು ಕೃಷ್ಣಮಠ(Krishna Mutt)ದಲ್ಲಿ ಕಡಗೋಲು ಕೃಷ್ಣನನ್ನು ಸ್ಥಾಪಿಸಿ, ಬಳಿಕ ಕೃಷ್ಣದೇವರ ಪೂಜೆಗೆಂದು ಎಂಟು ಮಂದಿ ಬಾಲ ಯತಿಗಳಿಗೆ ದೀಕ್ಷೆ ಕೊಟ್ಟರು. ಈ 8 ಮಂದಿ ಮಠಾಧೀಶರು ಸರದಿಯಂತೆ ಕೃಷ್ಣದೇವರ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ. ಕಳೆದ ಎಂಟು ಶತಮಾನಗಳಿಂದ ಈ ಪರಂಪರೆ ನಡೆದು ಬಂದಿದೆ .ತಲೆಮಾರುಗಳಿಂದ ನೂರಾರು ಸನ್ಯಾಸಿಗಳು ಅಷ್ಟಮಠಾಧೀಶರಾಗಿ ಕೃಷ್ಣ ಪೂಜೆಯ ಕೈಂಕರ್ಯ ಕೈಗೊಂಡಿದ್ದಾರೆ.

ಈ ಅಷ್ಟಮಠಾಧೀಶರ ವಾಸ್ತವ್ಯ ಸಹಿತ ದೈನಂದಿನ ಪೂಜೆಗೆಂದು ರಥಭೀದಿಯ ಸುತ್ತಲೂ ಆಷ್ಟಮಠಗಳನ್ನು ಸ್ಥಾಪಿಸಲಾಗಿದೆ. ರಥ ಬೀದಿ ಅಷ್ಟ ದಿಕ್ಕುಗಳಲ್ಲಿ ಈ ಅಷ್ಟಮಠಗಳಿವೆ.

ಕೃಷ್ಣ ಮಠದ ಎಡಮಗ್ಗುಲಲ್ಲಿರುವ ಕಾಣಿಯೂರು ಮಠ, ಇಂತಹ ಒಂದು ಪುರಾತನ ಕ್ಷೇತ್ರವಾಗಿದೆ. ನರಸಿಂಹ ದೇವರನ್ನು ಪಟ್ಟದ ಮೇಲೆ ಕೂರಿಸಿ ಪೂಜಿಸುವ ಕಾಣಿಯೂರು ಮಠಾಧೀಶರು, ಇದೀಗ ತಮ್ಮ ಮಠವನ್ನು ಸುಂದರ ಕಾಷ್ಟಶಿಲ್ಪಗಳೊಂದಿಗೆ ಜೀರ್ಣೋದ್ಧಾರಗೊಳಿಸಿದ್ದಾರೆ. ಈ ಅಪರೂಪದ ರಚನೆಗಳು ನೋಡುಗರನ್ನು ಸೆಳೆಯುತ್ತಿದೆ.

ಶಾಸಕ ಹರತಾಳು ಹಾಲಪ್ಪ ಕುಟುಂಬದಿಂದ ಸಂಭ್ರಮದ 'ಭೂಮಿ ಹುಣ್ಣಿಮೆ' ಹಬ್ಬ

ಮಠಕ್ಕೆ ಹೊಸ ರೂಪ ನೀಡುವುದರೊಂದಿಗೆ ನೂತನ ಕಾಷ್ಠಶಿಲ್ಪದ ಸಿಂಹಾಸನ ಅರ್ಪಣೆ ಮಾಡಲಾಗಿದೆ. ಶ್ರೀ ಕಾಣಿಯೂರು ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿದಂತಹ ಸಿಂಹಾಸನವನ್ನು ಪರ್ಯಾಯ ಶ್ರೀ ಕೃಷ್ಣಾಪುರ  ಮಠಾಧೀಶ ಶ್ರೀ  ವಿದ್ಯಾಸಾಗರತೀರ್ಥ ಶ್ರೀಪಾದರು ದೀಪಹಚ್ಚುವ  ಮೂಲಕ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಾರು ಕೋಟಿ ರೊಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಈ ಸಿಂಹಾಸನ ಕಾಷ್ಠಶಿಲ್ಪದ ಮೆರುಗನ್ನು ಎತ್ತಿ ತೋರಿಸುತ್ತಿದೆ.  ಶ್ರೀ ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ (ಸಾಗುವಾನಿ) ಹಾಗೂ ಬೀಟಿ (ರೋಸ್ ವುಡ್) ಮರದಿಂದ  ದಶಾವತಾರಗಳ ಮೂರ್ತಿಗಳನ್ನು ಇದರಲ್ಲಿ ಕೆತ್ತಲಾಗಿದೆ. ದ್ವೈತ ಮತವನ್ನು ಸ್ಥಾಪಿಸಿದ ಮಧ್ವಾಚಾಚಾರ್ಯರು , ಅಷ್ಟಮಠಗಳ ಪರಂಪರೆಯಲ್ಲಿ ಬಂದ ಶ್ರೇಷ್ಟ ಯತಿ ಶ್ರೀ ವಾದಿರಾಜರ ಮೂರ್ತಿಗಳ ಕೆತ್ತನೆ ಕೂಡ ಇದರಲ್ಲಿದೆ. ಈ ರೀತಿ  ನಾನಾ ತರಹವಾದ ಶಿಲ್ಪಕಲೆಯ ಕೆತ್ತನೆಯನ್ನು ಹೊಂದಿರುವ ವಿಶಿಷ್ಟವಾದ ಕಲೆಗಳಿಂದ ಕೂಡಿರುವ ಈ ಸಿಂಹಾಸನ ಗಮನ ಸೆಳೆಯುತ್ತಿದೆ .

ಶ್ರೀ ದುರ್ಗಾ ಪ್ರತ್ಯಂಗಿರಾ ದೇವಿ ಹೋಮಕ್ಕೆ ಮೆಣಸಿನಕಾಯಿ!

ಹಾಲಿ ಮಠಾಧೀಶರಾದ ಶ್ರೀ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು, ಈ ಅಪರೂಪದ ಕಾಷ್ಟ ಶಿಲ್ಪಗಳನ್ನು ದೇವರಿಗೆ ಅರ್ಪಿಸಿದ್ದಾರೆ. ಕೃಷ್ಣಮಠಕ್ಕೆ ಭೇಟಿ ನೀಡುವ ಭಕ್ತರು ಅಷ್ಟಮಠಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ, ಎಂಟು ಶತಮಾನದ ಕಥೆ ಹೇಳುವ ಇಂತಹ ಹಲವು ಅಪರೂಪದ ಮಂದಿರಗಳನ್ನು ದೇವಾಲಯಗಳನ್ನು ಕಾಣಬಹುದು

Latest Videos
Follow Us:
Download App:
  • android
  • ios