ಎಸ್‌.ಎಂ. ಸೈಯದ್‌

ಗಜೇಂದ್ರಗಡ(ಮೇ.11): ರಾಜ್ಯದಲ್ಲಿ ಕೊರೋನಾ ವೈರಸ್‌ ತಡೆಗಟ್ಟಲು ಸರ್ಕಾರ ಜಾರಿ ಮಾಡಿರುವ ಲಾಕ್‌ಡೌನ್‌ ಅನುದಾನರಹಿತ ಶಾಲಾ- ಕಾಲೇಜುಗಳಲ್ಲಿನ ಸೇವೆ ಸಲ್ಲಿಸುತ್ತಿರುವ ಮತ್ತು ಗೌರವ ಉಪನ್ಯಾಸಕರ ‘ಬದುಕೇ ಲಾಕ್‌ಡೌನ್‌‘ ಆದಂತಾಗಿದೆ!

ರಾಜ್ಯದ ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಲಕ್ಷಾಂತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ ಸರ್ಕಾರಿ ಪಿಯು, ಪದವಿ ಕಾಲೇಜುಗಳಲ್ಲೂ ಹತ್ತಾರು ಸಾವಿರ ಜನ ಗೌರವ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲಾ-ಕಾಲೇಜು ಬಂದ್‌ ಆಗಿದ್ದರಿಂದ ಇವರಾರ‍ಯರಿಗೂ ಸಂಬಳ ಸಿಗುವುದಿಲ್ಲ.

RMP ವೈದ್ಯನಿಗೂ ಕೊರೋನಾ ಭೀತಿ: ಆತಂಕದಲ್ಲಿ ಜನತೆ

ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಉಪನ್ಯಾಸಕರ ಸಮೂಹವು ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ಪೂರ್ವದಲ್ಲಿ ಪಡೆಯುವ ಸಂಬಳ ಪ್ರತಿ ತಿಂಗಳಿಗೆ ಅಂದಾಜು 5000 ರಿಂದ . 15000 ಅಂದರೆ ದಿನಕ್ಕೆ 200 ರಿಂದ 500 ಅಷ್ಟೇ. ಅಲ್ಲದೆ ಶೇ. 85ರಷ್ಟು ಖಾಸಗಿ ಸಂಸ್ಥೆಗಳು ವರ್ಷದ ಮೂರು ತಿಂಗಳು ತನ್ನ ಸಿಬ್ಬಂದಿಗೆ ಸಂಬಳ ನೀಡುವದಿಲ್ಲ. ಮೇಲಾಗಿ ಈಗ ಲಾಕ್‌ಡೌನ್‌ ಹೇರಿಕೆಯಾಗಿದ್ದರಿಂದ ಸಂಬಳವಿಲ್ಲದೇ ಹಲವು ಕುಟುಂಬಗಳು ಕನಿಷ್ಠ ಸೌಕರ್ಯ ಇಲ್ಲದೇ ಪರದಾಡುತ್ತಿವೆ.

ಬೋಧನೆಯೇ ಧರ್ಮ :

ಕಳೆದ 10-15 ವರ್ಷದಿಂದ ಬೋಧನೆಯೇ ಶ್ರೇಷ್ಠ ಧರ್ಮ ಎಂದು ನಂಬಿಕೊಂಡು ಬೇರೆ ದುಡಿಮೆ, ಆದಾಯ ಇಲ್ಲದೆ ಬದುಕುವ ಸಿಬ್ಬಂದಿ ಬದುಕು ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಬೀದಿಗೆ ಬಂದಿದೆ. ಖಾಸಗಿ ಸಂಸ್ಥೆಗಳ ಶಾಲಾ ಕಾಲೇಜುಗಳು ಆಗಸ್ಟ್‌ವರೆಗೆ ಆರಂಭ ಆಗುವುದು ಅನುಮಾನ. ಆರಂಭವಾದರೂ ವಿದ್ಯಾರ್ಥಿಗಳು ಶುಲ್ಕ ತುಂಬುವುದು ವಿಳಂಬವಾದರೆ ಅಲ್ಲಿಯ ಸಿಬ್ಬಂದಿ ಕಡಿತವಾಗಬಹುದು. ಸಂಬಳ ಇಲ್ಲದೆ 6 ತಿಂಗಳ ದುಡಿಯುವ ಅನಿವಾರ್ಯತೆ ಎದುರಾಗುವ ಅಪಾಯವಿದೆ.

ಅನುದಾನರಹಿತ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ವರ್ಗ ಉಪವಾಸ ಬಿದ್ದರೂ, ಕಷ್ಟಇದ್ದರೂ ಯಾರ ಮುಂದೆಯೂ ಮನವಿ, ಬೇಡಿಕೆ ಇಡಲು ಮುಜಗರ, ಹಿಂಜರಿಕೆ ಅನುಭವಿಸುತ್ತಿದ್ದಾರೆ. ಸುಶಿಕ್ಷಿತರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನಾವು ಇಂತಹ ಬೇಡಿಕೆ ಇಟ್ಟರೆ ಅಥವಾ ಪ್ರತಿಭಟನೆ ಮಾಡಿದರೆ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ಅತಿಥಿ ಉಪನ್ಯಾಸಕರು. ಸಂಘಟನೆ ಕೊರತೆಯಿಂದಾಗಿಯೂ ನಾವು ಲಾಕ್‌ಡೌನ್‌ ಹೊಡೆತಕ್ಕೆ ನಲುಗಿದ್ದೇವೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಕೆಲ ಬೋಧಕರು.

ಸರ್ಕಾರ ಇತ್ತೀಚೆಗೆ ಕೂಲಿ ಕಾರ್ಮಿಕರು, ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಲಾಕ್‌ಡೌನ್‌ನಿಂದ ಸಂಕಷ್ಟಕ್ಕಿಡಾಗಿದ್ದನ್ನು ಗಮನಿಸಿ ಅವರ ನೆರವಿಗೆ ಧಾವಿಸಿದ್ದು ಸ್ವಾಗತಾರ್ಹ. ಆದರೆ ಉನ್ನತ ಶಿಕ್ಷಣ ಪಡೆದು, ವೃತ್ತಿಪರ ಪದವಿ ಪಡೆದು ಇತ್ತ ನಿರದ್ಯೋಗಿಗಳು ಅಲ್ಲ, ಅತ್ತ ಸ್ವಯಂ ಉದ್ಯೋಗಿಗಳಾಗಿಲ್ಲ. ಪರಿಣಾಮ ಖಾಸಗಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗದಲ್ಲಿರುವವರ ಸ್ಥಿತಿ ಸರ್ಕಾರದ ಕಣ್ಣಿಗೆ ಬೀಳದಿರುವುದು ವಿಪರ್ಯಾಸ.

ಲಾಕ್‌ಡೌನ್‌ನಂತಹ ವಿಷಮ ಸ್ಥಿತಿಯಲ್ಲಿ ಶಿಕ್ಷಕರ, ಪದವಿಧರ ಕ್ಷೇತ್ರದಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಶಿಕ್ಷಣ ತಜ್ಞರಿಗೆ ನಮ್ಮ ಗೋಳು ಕಾಣದೇ ಇರುವುದು ನಿಜಕ್ಕೂ ದುರದೃಷ್ಟಕರ ಎಂದು ಅತಿಥಿ ಉಪನ್ಯಾಸಕ ವಿವೇಕಾನಂದ ಗಾಂಧಿ ಅವರು ಹೇಳಿದ್ದಾರೆ.