Asianet Suvarna News Asianet Suvarna News

Bengaluru city: ಕಳಪೆ ಗುಣಮಟ್ಟದ ಹೆಲ್ಮೆಟ್; ನಗರದಲ್ಲಿ ಎಗ್ಗಿಲ್ಲದೆ ಮಾರಾಟ!

ರಾಜಧಾನಿಯಲ್ಲಿ ಕಳಪೆ ಗುಣಮಟ್ಟದ ಹಾಗೂ ‘ಹಾಫ್‌ ಹೆಲ್ಮೆಟ್‌’ ಧರಿಸುವ ಸವಾರರಿಂದ ಸಂಚಾರ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ಎಗ್ಗಿಲ್ಲದೆ ನಡೆಯುತ್ತಿರುವ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Sale of poor quality helmets in the bengaluru city rav
Author
First Published Jan 30, 2023, 9:10 AM IST

ವಿಶೇಷ ವರದಿ

ಬೆಂಗಳೂರು (ಜ.30) : ರಾಜಧಾನಿಯಲ್ಲಿ ಕಳಪೆ ಗುಣಮಟ್ಟದ ಹಾಗೂ ‘ಹಾಫ್‌ ಹೆಲ್ಮೆಟ್‌’ ಧರಿಸುವ ಸವಾರರಿಂದ ಸಂಚಾರ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ಎಗ್ಗಿಲ್ಲದೆ ನಡೆಯುತ್ತಿರುವ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕೇಂದ್ರದ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್‌ 129ರ ಅಡಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ಮಾತ್ರ ಧರಿಸಬೇಕು ಎಂಬ ಸ್ಪಷ್ಟನಿಯಮವಿದೆ. ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರೇ ಮಾರಣಾಂತಿಕವಾಗಿ ಗಾಯಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಇಂತಹ ಅಪಘಾತಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು, ಹೆಲ್ಮೆಟ್‌ ಧರಿಸದ ಸವಾರರ ವಿರುದ್ಧ ಮುಲಾಜಿಲ್ಲದೆ ದಂಡ ಹಾಕುತ್ತಿದ್ದಾರೆ. ಇತ್ತೀಚೆಗೆ ಸಂಚಾರ ಪೊಲೀಸರ ಭಯ ಹಾಗೂ ದಂಡಕ್ಕೆ ಹೆದರಿಸಿ ಹೆಲ್ಮೆಟ್‌ ಧರಿಸುವವರ ಸಂಖ್ಯೆ ಹೆಚ್ಚಳವಾಗಿದೆ.

ಹಾಫ್‌ ಹೆಲ್ಮೆಟ್‌ಗೆ ಬೀಳುತ್ತೆ ದಂಡ ಹುಷಾರ್‌..!

ಅಗ್ಗದ ಹೆಲ್ಮೆಟ್‌ ಲಭ್ಯ

ಸವಾರರು ಉತ್ತಮ ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕು ಎಂದು ನಿಯಮ ಹೇಳುತ್ತದೆ. ಅದರಂತೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸುವ ಸವಾರರ ವಿರುದ್ಧ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಆದರೆ, ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟಗಾರರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

ನಗರದ ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳು, ಟ್ರಾಫಿಕ್‌ ಸಿಗ್ನಲ್‌ಗಳು, ಜಂಕ್ಷನ್‌ಗಳು, ವೃತ್ತಗಳು, ಹೆಲ್ಮೆಟ್‌ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಮಾರಾಟ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ದಂಡದ ಭಯಕ್ಕೆ ಸವಾರರು ಅಗ್ಗದ ಬೆಲೆಗೆ ಸಿಗುವ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಖರೀದಿಸುತ್ತಿದ್ದಾರೆ. ಅದರಲ್ಲೂ .80-100ಕ್ಕೆ ಹಾಫ್‌ ಹೆಲ್ಮೆಟ್‌ಗಳು ಬಿಕರಿಯಾಗುತ್ತಿವೆ.

ಕಳಪೆ ಹೆಲ್ಮೆಟ್‌ ನಿಷೇಧಿಸಿ

ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹವಾಗಿದೆ. ಹೆಲ್ಮೆಟ್‌ ಧರಿಸದ ಸವಾರರ ವಿರುದ್ಧ ದಂಡ ವಿಧಿಸಲೇಬೇಕು. ಇದಕ್ಕೂ ಮುನ್ನ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟ ಸಂಪೂರ್ಣ ನಿಷೇಧಿಸಬೇಕು. ರಸ್ತೆ ಬದಿ, ಪಾದಚಾರಿ ಮಾರ್ಗಗಳು, ಟ್ರಾಫಿಕ್‌ ಸಿಗ್ನಲ್‌ ಬಳಿಯೇ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಚಾರ ಪೊಲೀಸರು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಆದರೂ ವ್ಯಾಪಾರಿಗಳು ಯಾವುದೇ ಭಯವಿಲ್ಲದೆ ಹೆಲ್ಮೆಟ್‌ ಮಾರಾಟದಲ್ಲಿ ತೊಡಗಿದ್ದಾರೆ. ಮೊದಲು ಈ ಅಗ್ಗದ ಹೆಲ್ಮೆಟ್‌ ಮಾರಾಟಕ್ಕೆ ಕಡಿವಾಣ ಹಾಕಬೇಕು. ಸವಾರರ ಕೈಗೆ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಸಿಗದ ಹಾಗೆ ಮಾಡಬೇಕು. ಆಗ ಸವಾರರಿಗೆ ಗುಣಮಟ್ಟದ ಹೆಲ್ಮೆಟ್‌ ಖರೀದಿ ಅನಿವಾರ್ಯವಾಗಲಿದೆ ಎಂದು ಖಾಸಗಿ ಕಂಪನಿ ಉದ್ಯೋಗಿ ಪ್ರದೀಪ್‌ ಹೇಳುತ್ತಾರೆ.

ಹೊರರಾಜ್ಯದ ವ್ಯಾಪಾರಿಗಳೇ ಹೆಚ್ಚು

ಕಳಪೆ ಹೆಲ್ಮೆಟ್‌ ಮಾರಾಟ ಮಾಡುವವರ ಪೈಕಿ ಬಹುತೇಕರು ಹೊರರಾಜ್ಯದವರೇ ಆಗಿದ್ದಾರೆ. ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಮೊದಲಾದ ರಾಜ್ಯಗಳ ವ್ಯಾಪಾರಿಗಳು ಅಗ್ಗದ ಹೆಲ್ಮೆಟ್‌ಗಳ ಮಾರಾಟದಲ್ಲಿ ತೊಡಗಿದ್ದಾರೆ. ಹೊರರಾಜ್ಯಗಳಿಂದ ಲಾರಿಗಳಲ್ಲಿ ಹೆಲ್ಮೆಟ್‌ ಲೋಡ್‌ ತರಿಸಿ ದಾಸ್ತಾನು ಮಾಡಿಕೊಂಡು ಬಿಕರಿ ಮಾಡುತ್ತಿದ್ದಾರೆ. ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಬೆಂಗಳೂರು-ಮೈಸೂರು ರಸ್ತೆ, ಗೂಡ್‌್ಸ ಶೆಡ್‌ ರಸ್ತೆ ಸೇರಿದಂತೆ ನಗರದ ಹಲವೆಡೆ ರಸ್ತೆ ಬದಿ ಈ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

ಭಾರತದಲ್ಲಿ ಸೀಟ್‌ ಬೆಲ್ಟ್‌ ಧರಿಸದೇ 16,397, ಹೆಲ್ಮೆಟ್‌ ಧರಿಸದೇ 47,000 ಸಾವು

ದ್ವಿಚಕ್ರ ವಾಹನ ಸವಾರರು ಐಎಸ್‌ಐ ಪ್ರಮಾಣಿಕೃತ ಹೆಲ್ಮೆಟ್‌ಗಳನ್ನಷ್ಟೇ ಧರಿಸಬೇಕು. ನಗರದಲ್ಲಿ ಕಳಪೆ ಹಾಗೂ ಹಾಫ್‌ ಹೆಲ್ಮೆಟ್‌ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟಇಲಾಖೆಗೆ ಮನವಿ ಮಾಡಲಾಗುವುದು.

-ಡಾ ಎಂ.ಎ.ಸಲೀಂ, ವಿಶೇಷ ಆಯುಕ್ತ. ಸಂಚಾರ ಪೊಲೀಸ್‌ ವಿಭಾಗ

Follow Us:
Download App:
  • android
  • ios