ಹಾಫ್‌ ಹೆಲ್ಮೆಟ್‌ ಸವಾರರಿಗೂ ದಂಡದ ಬಿಸಿ, ಪೊಲೀಸರ ಕಣ್ತಪ್ಪಿಸಿದರೂ ಕ್ಯಾಮರಾ ನಿಗಾ, ನಿಯಮ ಉಲ್ಲಂಘಿಸಿದ ಪೊಲೀಸರಿಗೂ ಬಿತ್ತು ದಂಡ, ಅ.22ರಲ್ಲಿ ಕನ್ನಡಪ್ರಭ ವಿಶೇಷ ವರದಿ ಪ್ರಕಟ. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜ.25): ರಾಜಧಾನಿಯಲ್ಲಿ ಹಾಫ್‌ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸುವ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರ ಮೇಲೂ ಸಂಚಾರ ವಿಭಾಗದ ಪೊಲೀಸರು ‘ದಂಡ’ ಪ್ರಯೋಗ ಶುರು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಾಫ್‌ ಹೆಲ್ಮೆಟ್‌ ಧರಿಸಿದವರೂ ಸೇರಿದಂತೆ ಹೆಲ್ಮೆಟ್‌ ಧರಿಸದ ಸವಾರರ ವಿರುದ್ಧ 13 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ರಸ್ತೆಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಹಾಫ್‌ ಹೆಲ್ಮೆಟ್‌ ಹಾಕಿಕೊಂಡು ಓಡಾಡಿದರೂ ಜಂಕ್ಷನ್‌ಗಳಲ್ಲಿನ ಕ್ಯಾಮರಾಗಳು ನಿಗಾವಹಿಸಿದ್ದು, ಪ್ರಸುತ್ತ ಕ್ಯಾಮೆರಾ ದೃಶ್ಯಾವಳಿ ಆಧರಿಸಿಯೇ ಹಾಫ್‌ ಹೆಲ್ಮೆಟ್‌ ಹಾಕಿದವರ ಮೇಲೆಯೂ ಹೆಚ್ಚು ಪ್ರಕರಣ ದಾಖಲಾಗಿಸಲಾಗುತ್ತದೆ. ಅಲ್ಲದೆ ಮನೆ ಬಾಗಿಲಿಗೆ ಪೋಟೋ ಸಮೇತ ನೋಟಿಸ್‌ ಕೂಡಾ ಪೊಲೀಸರು ರವಾನಿಸುತ್ತಿದ್ದಾರೆ.

ನಗರ ವ್ಯಾಪ್ತಿ ಆರು ತಿಂಗಳ ಅವಧಿಯಲ್ಲಿ ಮಾಸಿಕ ಸರಾಸರಿ ವಿವಿಧ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 18 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಪ್ರತಿ ತಿಂಗಳು 6 ರಿಂದ 8 ಲಕ್ಷ ವರೆಗೆ ಹೆಲ್ಮೆಟ್‌ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಅಂತೆಯೇ ನವೆಂಬರ್‌ ತಿಂಗಳಲ್ಲಿ 8 ಲಕ್ಷ ಹಾಗೂ ಡಿಸೆಂಬರ್‌ನಲ್ಲಿ 5 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದೂ ಅಪಘಾತಗಳಲ್ಲಿ ಜೀವ ರಕ್ಷಕವಾಗಿರುವ ಹೆಲ್ಮೆಟ್‌ ಬಗ್ಗೆ ಜನರ ಅಸಡ್ಡೆ ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಭಾರತದಲ್ಲಿ ಸೀಟ್‌ ಬೆಲ್ಟ್‌ ಧರಿಸದೇ 16,397, ಹೆಲ್ಮೆಟ್‌ ಧರಿಸದೇ 47,000 ಸಾವು

ಮೂರು ತಿಂಗಳ ಹಿಂದೆಯೇ ಕಳಪೆ ಹೆಲ್ಮೆಟ್‌ಗಳ ನಿರ್ಮೂಲನೆಗೆ ಮುಂದಾಗಿದ್ದ ಸಂಚಾರ ವಿಭಾಗದ ಪೊಲೀಸರು, ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಕಡ್ಡಾಯ ವಾಗಿ ಐಎಸ್‌ಐ ಮಾರ್ಕ್ ಹೊಂದಿರುವ ಅಥವಾ ಕಿವಿ ಮುಚ್ಚುವ ಹೆಲ್ಮೆಟ್‌ ಧರಿಸುವ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದರು. ಹೆಲ್ಮೆಟ್‌ ಬಗ್ಗೆ ಜನರಿಗೆ ತಿಳುವಳಿಕೆ ನೀಡಿದ ಬಳಿಕ ನಿಯಮ ಉಲ್ಲಂಘಿಸುವ ಜನರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಹಾಫ್‌ ಹೆಲ್ಮೆಟ್‌ ಹಾಕಿದ ತಪ್ಪಿಗೆ 140ಕ್ಕೂ ಹೆಚ್ಚಿನ ಪೊಲೀಸರಿಗೆ ಸಂಚಾರ ವಿಭಾಗದ ಪೊಲೀಸರು ದಂಡ ವಿಧಿಸಿದ್ದರು.

ಹೇಗೆ ದಂಡ ಪ್ರಯೋಗ?

ಕಳಪೆ ಹೆಲ್ಮೆಟ್‌ ಧಾರಣೆಗೆ ದಂಡ ವಿಧಿಸುವ ಸಂಬಂಧ ಪ್ರತ್ಯೇಕವಾದ ಕಾಯ್ದೆ ಇಲ್ಲ. ಹಾಗಾಗಿ ಹಾಫ್‌ ಹೆಲ್ಮೆಟ್‌ ಧರಿಸಿದರೂ ಕೂಡಾ ಅವುಗಳನ್ನು ಹೆಲ್ಮೆಟ್‌ ಧರಿಸಿಲ್ಲ ಎಂದೇ ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ದೇಶದಲ್ಲಿ ದ್ವಿಚಕ್ರ ವಾಹನಗಳ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯವಾಗಿದೆ. ಹೀಗಾಗಿ ಹಾಫ್‌ ಹೆಲ್ಮೆಟ್‌ ಹಾಕಿದರೆ 500 ರು. ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದು ಕಳಪೆ ಹೆಲ್ಮೆಟ್‌?

ಐಎಸ್‌ಐ ಮಾರ್ಕ್ ಅಥವಾ ಕಿವಿ ಮುಚ್ಚುವ ಹೆಲ್ಮೆಟ್‌ಗಳನ್ನು ಗುಣಮಟ್ಟಹೆಲ್ಮೆಟ್‌ಗಳು ಎಂದು ಪೊಲೀಸರು ಪರಿಗಣಿಸಿದ್ದಾರೆ. ಟೋಪಿ ಮಾದರಿಯ ಅಥವಾ ಕಿವಿ ಮುಚ್ಚದ ಯಾವುದೇ ಹೆಲ್ಮೆಟ್‌ಗಳನ್ನು ಕಳಪೆ ಹೆಲ್ಮೆಟ್‌ ಎಂದೇ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಟ್ರಾಫಿಕ್‌ ನಿಯಮ ಮೀರಿದರೆ ವಿಡಿಯೋ ಸಹಿತ ದಂಡ!

ಕ್ಯಾಮೆರಾದಲ್ಲಿ ತಪ್ಪಿನ ಸ್ಪಷ್ಟ ಚಿತ್ರ

ಸಂಚಾರ ನಿಯಮ ಉಲ್ಲಂಘಿಸುವವರ ಕಣ್ಗಾವಲಿಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಲ್ಲಿ ಹಾಫ್‌ ಹೆಲ್ಮೆಟ್‌ ಧರಿಸುವ ದ್ವಿಚಕ್ರ ವಾಹನದ ಸವಾರ ಹಾಗೂ ಹಿಂಬದಿ ಸವಾರನ ಸ್ಪಷ್ಟವಾದ ಪೋಟೋವನ್ನು ಕ್ಲಿಕ್ಕಿಸಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ರವಾನಿಸುತ್ತವೆ. ಈ ಮಾಹಿತಿ ಮೇರೆಗೆ ದಂಡ ವಿಧಿಸಲಾಗುತ್ತಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೆಲ್ಮೆಟ್‌ ದಂಡದ ಕೇಸ್‌ ವಿವರ ಹೀಗಿದೆ

ನವೆಂಬರ್‌ ತಿಂಗಳು- ಸವಾರ (522426), ಹಿಂಬದಿ ಸವಾರ (321855) ಒಟ್ಟು- 8,44,281
ಡಿಸೆಂಬರ್‌ ತಿಂಗಳು- ಸವಾರ (365885), ಹಿಂಬದಿ ಸವಾರ (137889) ಒಟ್ಟು-5,03,774