ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸರ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಬೆಂಗಳೂರು (ಫೆ.23): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನದೂಡುತ್ತಿರುವ ನಟ ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತುಗೊಳಿಸಿದ್ದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಕೊಲೆ ಕೇಸ್‌ನಲ್ಲಿ ಕಳೆದ ವರ್ಷ ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ, ಅವರು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ ಎಂಬ ಕಾರಣ ನೀಡಿ ಪೊಲೀಸರು ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿದ್ದರು. ಪೊಲೀಸರ ಈ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ

ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನೀಲ್ ಕುಮಾರ್ ಎಸ್., "ದರ್ಶನ್ ಅವರು 2008 ರಿಂದಲೂ ಅಧಿಕೃತವಾಗಿ ಬಂದೂಕು ಪರವಾನಗಿ ಹೊಂದಿದ್ದಾರೆ. ಪ್ರಕರಣವೊಂದರಲ್ಲಿ ಅವರ ಹೆಸರಿದೆ ಎಂಬ ಕಾರಣಕ್ಕೆ ಲೈಸೆನ್ಸ್ ಅಮಾನತು ಮಾಡಿರುವುದು ಸರಿಯಲ್ಲ. ಈಗಾಗಲೇ ಅವರು ಗನ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ (ಸರಂಡರ್ ಮಾಡಿದ್ದಾರೆ)" ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, "ಕೇವಲ ಹೆಸರಿನ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿಲ್ಲ, ಅವರ ಮೇಲೆ ಗಂಭೀರ ಆರೋಪವಿರುವ ಕಾರಣಕ್ಕೆ ಪೊಲೀಸರು ಕ್ರಮ ಜರುಗಿಸಿದ್ದಾರೆ" ಎಂದು ಅಭಿಪ್ರಾಯಪಟ್ಟಿತು. ಆದರೂ, ವಿಚಾರಣೆಯನ್ನು ಪರಿಶೀಲಿಸಿದ ನ್ಯಾಯಪೀಠವು ಅಮಾನತು ಆದೇಶಕ್ಕೆ ಮಾರ್ಚ್ 6ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಆದೇಶದಿಂದಾಗಿ ದರ್ಶನ್ ಅವರಿಗೆ ತಾತ್ಕಾಲಿಕವಾಗಿ ಕಾನೂನು ಹೋರಾಟದಲ್ಲಿ ಜಯ ಸಿಕ್ಕಂತಾಗಿದೆ. ಮುಂದಿನ ವಿಚಾರಣೆಯಲ್ಲಿ ಈ ತಡೆಯಾಜ್ಞೆ ಮುಂದುವರಿಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.